Advertisement
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.12ರ ಬೆಳಗ್ಗೆ 8ಕ್ಕೆ ತಲಕಾವೇರಿಯಿಂದ ಹೊರಟು, ಅ. 14ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಮಾವೇಶಗೊಂಡು ಬಹಿರಂಗ ಅಧಿವೇಶನ ನಡೆಸಲಾಗುವುದು. ಈ ಮೂಲಕ ಕೇಂದ್ರ-ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಹಕ್ಕೊತ್ತಾಯ ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದರು.
Related Articles
Advertisement
ಬರಪೀಡಿತ ಪ್ರದೇಶಗಳು: ಒಂದೆಡೆ ಅತಿವೃಷ್ಟಿ ಉಂಟಾದರೆ, ಇನ್ನೊಂದೆರಡೆ ರಾಜ್ಯದ 156 ತಾಲೂಕುಗಳಲ್ಲಿ ಐದು ವರ್ಷಗಳಿಂದ ನಿರಂತರ ಬರ ಪರಿಸ್ಥಿತಿಯಿದೆ. ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳು ಕಾಯಂ ಬರಗಾಲ ಪ್ರದೇಶಗಳಾಗಿದ್ದು, ಈ ಪ್ರದೇಶದಲ್ಲಿ ನಾಲ್ಕು ಲಕ್ಷಕ್ಕಿಂತಲೂ ಅಧಿಕ ತೆಂಗಿನ ಮರ ಒಣಗಿ ನಾಶವಾಗಿವೆ. 2 ಸಾವಿರ ಅಡಿ ಕೊರೆದರೂ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿಲ್ಲ. ಜಾನುವಾರುಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಬೇಡಿಕೆ ಈಡೇರಿಸಿ: ಕೇಂದ್ರ ಸರ್ಕಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಇದುವರೆಗೂ ಪರಿಹಾರ ಘೋಷಿಸಿಲ್ಲ. ರಾಜ್ಯ ಸರ್ಕಾರ ಕೇಂದ್ರದಿಂದ ಪರಿಹಾರ ಪಡೆಯಲು ಸಾಧ್ಯವಾಗದೇ ಅಸಹಾಯಕತೆಯಿಂದ ಪರಿತಪಿಸುತ್ತಿದೆ. ಪ್ರವಾಹ ಪೀಡಿತ ಪ್ರದೇಶದ ಕಬ್ಬು ಬೆಳೆಗಳಿಗೆ ವೈಜ್ಞಾನಿಕ ಪರಿಹಾರ, ಮನೆ ಮಠ ಕಳೆದುಕೊಂಡವರಿಗೆ ಪರ್ಯಾಯ ವ್ಯವಸ್ಥೆ, ಹಳ್ಳಿಗಳ ಪುನರ್‌ಸ್ಥಾಪನೆ, ಪ್ರವಾಹ ಪೀಡಿತ ಮತ್ತು ಬರ ಪೀಡಿತ ಪ್ರದೇಶಗಳ ರೈತರ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ವಿಭಾಗೀಯ ಕಾರ್ಯದರ್ಶಿ ಮಹೇಶ್‌ಪ್ರಭು, ಜಿಲ್ಲಾಧ್ಯಕ್ಷ ಶಿವರಾಮು, ಉಪಾಧ್ಯಕ್ಷ ಬಸವಣ್ಣ, ಪ್ರ.ಕಾರ್ಯದರ್ಶಿ ಸಿದ್ದರಾಜು ಸುದ್ದಿಗೋಷ್ಠಿಯಲ್ಲಿ ಇದ್ದರು.
ರೈತ ಸಂಘ ಜಾಥಾ ಮಾರ್ಗ: ಅ.12ರ ಬೆಳಗ್ಗೆ ತಲಕಾವೇರಿಯಿಂದ ಹೊರಟು, ಮಡಿಕೇರಿ, ಮೂರ್ನಾಡು, ವಿರಾಜಪೇಟೆ, ಗೋಣಿಕೊಪ್ಪ, ತಿತಿಮತಿ, ಪಿರಿಯಾಪಟ್ಟಣ, ಹುಣಸೂರು, ಬಿಳಿಕೆರೆ, ಇಲವಾಲ ಮೈಸೂರಿನಲ್ಲಿ ರಾತ್ರಿ ವಾಸ್ತವ್ಯ. ಅ.13ರ ಬೆಳಗ್ಗೆ ಮೈಸೂರಿನ ಟೌನ್‌ಹಾಲ್‌ನಲ್ಲಿ ಸಭೆ. ಶ್ರೀರಂಗಪಟ್ಟಣ, ಮಂಡ್ಯ, ಗೆಜ್ಜಲಗೆರೆ, ಮದ್ದೂರು, ಶಿವಪುರ, ಚೆನ್ನಪಟ್ಟಣ ವಾಸ್ತವ್ಯ. ಅ.14 ಚನ್ನಪಟ್ಟಣದಿಂದ ಬೆಳಗ್ಗೆ ಹೊರಟು, ರಾಮನಗರ, ಬಿಡದಿ, ಕೆಂಗೇರಿ, ಬೆಂಗಳೂರು. ರೈಲ್ವೆ ನಿಲ್ದಾಣದಿಂದ ಮೆರವಣಿಗೆ ಹೊರಟು ಮಧ್ಯಾಹ್ನ 1 ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ಬಹಿರಂಗ ಅಧಿವೇಶನ ನಡೆಯಲಿದೆ.