ಸುರಪುರ: ಹೆಗ್ಗಣದೊಡ್ಡಿ, ಗೋಡ್ರಿಹಾಳ, ತಿಪ್ಪನಟಗಿ ಹಾಗೂ ತಾಲೂಕಿನಲ್ಲಿ ಬರುವ ಎಲ್ಲ ಗ್ರಾಮಗಳಲ್ಲಿ ಉಂಟಾಗಿರುವ ವಿದ್ಯುತ್ ಸಮಸ್ಯೆ ನಿವಾರಿಸಿ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ತಾಲೂಕು ಸಮಿತಿ ಸದಸ್ಯರು ಸೋಮವಾರ ರಂಗಂಪೇಟೆ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳರ, ರೈತರ ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳು ಉತ್ತಮ ಮಳೆಯಿಲ್ಲದೆ ಒಣಗುತ್ತಿವೆ. ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿಲ್ಲ. ಬೆಳೆಗಳು ಒಣಗುತ್ತಿದ್ದು, ಇವುಗಳನ್ನು ಉಳಿಸಿಕೊಳ್ಳಲು ಕೊಳವೆ ಬಾವಿಗಳ ಮೊರೆ ಹೋಗಲಾಗಿದೆ. ಆದರೆ ವಿದ್ಯುತ್ ಪೂರೈಕೆ ಕೊರತೆಯಿಂದ ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳೆಗಳಿಗೆ ಸಮರ್ಪಕವಾಗಿ ವಿದ್ಯುತ್ ದೊರೆಯದೆ ಇರುವುದರಿಂದ ಬೋರ್‌ವೆಲ್‌ಗಳಿಂದ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ದಿನಕ್ಕೆ 12 ಗಂಟೆ ವಿದ್ಯುತ್ ಪೂರೈಸುವಂತೆ ಮನವಿ ಮಾಡಿದರೂ ಜೆಸ್ಕಾಂ ಇಲಾಖೆ ಅಧಿ ಕಾರಿಗಳ ಮನ ಕರಗುತ್ತಿಲ್ಲ. ದಿನಕ್ಕೆ 2ರಿಂದ 3 ಗಂಟೆ ನೀಡುವ ವಿದ್ಯುತ್‌ನ್ನು ಸರಿಯಾಗಿ ಪೂರೈಸದೆ ರೈತರ ಜೀವನದ ಜೊತೆ ಆಟವಾಡುತ್ತಿದ್ದಾರೆ ಎಂದು ದೂರಿದರು.
ತಾಲೂಕಿನಲ್ಲಿ ಬರುವ ಎಲ್ಲ ಗ್ರಾಮಗಳಿಗೆ ನಿರಂತರ ಜ್ಯೋತಿ 24 ತಾಸು ಹಾಗೂ ರೈತರ ಪಂಪ್‌ಸೆಟ್‌ಗಳಿಗೆ 12:00 ಗಂಟೆ ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು. ಹುಣಸಗಿ ತಾಲೂಕಿನ ಮಂಜಲಾಪುರ ಗ್ರಾಮದಲ್ಲಿ ಬರುವ ಗುರಿಕಾರ ದೊಡ್ಡಿಯಲ್ಲಿ ವಿದ್ಯುತ್ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ ಮಾತನಾಡಿದರು. ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಮಹಾದೇವಿ ಬೇವಿನಾಳಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವುಶರಣ ಸಾಹುಕಾರ, ಜಿಲ್ಲಾ ಗೌರವಾಧ್ಯಕ್ಷ ಹನುಮಗೌಡ ನಾರಾಯಣಪುರ, ಜಿಲ್ಲಾ ಉಪಾಧ್ಯಕ್ಷರಾದ ತಿಪ್ಪಣ್ಣ ಜಂಪಾ, ದೇವೇಂದ್ರಪ್ಪ ಪತ್ತಾರ, ಗ್ರಾಮ ಘಟಕದ ಅಧ್ಯಕ್ಷ ಚಂದ್ರಕಾಂತ ನಾಗೋರಿ, ಪಂಚಾಕ್ಷರಯ್ಯ ಹಿರೇಮಠ ಹೆಗ್ಗಣದೊಡ್ಡಿ, ಚಾಂದಪಾಷಾ ಮಾಲಗತ್ತಿ, ಮಲ್ಲಿಕಾರ್ಜುನ ಗೋಡ್ರಿಹಾಳ, ರಾಘು ಕುಪ್ಪಗಲ್, ಸುರೇಶ ದರಬಾರಿ, ಹಣಮಂತ್ರಾಯಗೌಡ ಕನಗಂಡನಹಳ್ಳಿ, ಪರಮಣ್ಣ ಮೇಟಿ, ತಿಪ್ಪಣ್ಣ ಇಟ್ಟಂಗಿ, ಸಾಹೇಬಗೌಡ ಮದಲಿಂಗನಾಳ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.