ಕೋಲಾರ: ಕೋಚಿಮುಲ್ ಭ್ರಷ್ಟಚಾರ ಹಾಗೂ ನೇಮಕಾತಿ ಹಗರಣ ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ರೈತ ಸಂಘದಿಂದ ಕಚೇರಿ ಮುಂದೆ ಪ್ರತಿಭಟಿಲಾಯಿತು. ಈ ವೇಳೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಒಂದು ಕಡೆ ಭೀಕರ ಬರಗಾಲ ಮತ್ತೂಂದು ಕಡೆ ಬೆಳೆದ ಬೆಳೆಗೆ ಬೆಲೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ರೈತರು ಸ್ವಾಭಿಮಾನದ ಬದುಕಿಗಾಗಿ ಹೈನೋದ್ಯಮವನ್ನು ಅವಲಂಬಿಸಿದ್ದಾರೆ ಎಂದು ಹೇಳಿದರು.
ಖಾಸಗಿ ಪಶು ಆಹಾರದಲ್ಲಿ ಕಲಬೆರಕೆ, ಪಶು ಇಲಾಖೆಯ ಬೇಜವಾಬ್ದಾರಿ ಮಧ್ಯೆ ಡೇರಿಗಳಲ್ಲಿನ ಹಗಲು ದರೋಡೆಯ ಮಧ್ಯದಲ್ಲಿಯೂ ಸವಾಲುಗಳ ಸಮಸ್ಯೆಗಳ ನಡುವೆ ಒದ್ದಾಡುತ್ತಿರುವ ಹೈನುಗಾರಿಕೆ ನಂಬಿರುವ ಲಕ್ಷಾಂತರ ಕುಟುಂಬಗಳ ಮೇಲೆ ಬ್ರಹ್ಮಾಸ್ತ್ರವೆಂಬಂತೆ ಹಾಲು ಒಕ್ಕೂಟದ ಆಡಳಿತ ಮಂಡಳಿ ಹಾಲಿನ ದರ ಕಡಿಮೆ ಮಾಡುವ ಜೊತೆಗೆ ಏಕಾಏಕಿ ಪಶು ಆಹಾರದ ಬೆಲೆ 180 ರೂ. ಏರಿಕೆ ಮಾಡಿರುವುದು ಬರಗಾಲದಲ್ಲಿ ರೈತರ ಮೇಲೆ ಬ್ರಹ್ಮಾಸ್ತ್ರವೆಂಬಂತಾಗಿದೆ ಎಂದು ಟೀಕಿಸಿದರು.
ರೈತರ ಶೋಷಣೆ: ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ಲಕ್ಷಾಂತರ ಕುಟುಂಬಗಳ ಜೀವನಾಧಾರವಾದ ಒಕ್ಕೂಟ ಭ್ರಷ್ಟಾಚಾರದಲ್ಲಿ ಮುಳುಗಿದೆ. ನೇಮಕಾತಿಯಲ್ಲಿ ಕೋಟಿ ಕೋಟಿ ಹಗರಣ ಹಾಗೂ ಸಿಬ್ಬಂದಿಯ ಬೇಜವಾಬ್ದಾರಿಯಿಂದ ಚರಂಡಿ ಸೇರುತ್ತಿರುವ ಲಕ್ಷಾಂತರ ಲೀಟರ್ ಹಾಲು ಹಾಗೂ ಗುಣಮಟ್ಟವಿಲ್ಲದ ಪಶುಲಸಿಕೆ, ಗ್ರಾಮೀಣ ಪ್ರದೇಶದ ಹಾಲು ಒಕ್ಕೂಟಗಳಲ್ಲಿನ ಹಗಲು ದರೋಡೆಗೆ ಕಡಿವಾಣವಿಲ್ಲವಂತಾಗಿ ನೋ ಪೇಮೆಂಟ್, ಎಲ್‌ಎಲ್‌ಆರ್ ಹೆಸರಿನಲ್ಲಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆಂದು ಅಕ್ರೋಶ ವ್ಯಕ್ತಪಡಿಸಿದರು.
ಕ್ರಮಕೈಗೊಳ್ಳುತ್ತೇನೆ: ಮನವಿ ಸ್ವೀಕರಿಸಿದ ವ್ಯವಸ್ಥಾಪಕ ನಿರ್ದೇಶಕ ಸ್ವಾಮಿ ಮಾತನಾಡಿ, ಇಲಾಖೆಯಿಂದ ಪಶು ಆಹಾರ ಮೇವು ವಿತರಣೆ ಮಾಡಲು ಸಂಬಂಧಪಟ್ಟ ಅಧ್ಯಕ್ಷರೊಡನೆ ಮಾತನಾಡುತ್ತೇನೆ. ನೇಮಕಾತಿ, ಚರಂಡಿಗೆ ಹಾಲು ಬಿಟ್ಟಿರುವ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಗುಣಮಟ್ಟದ ಕಡಿಮೆ ಇರುವ ಹಾಲಿಗೆ ನೋ ಪೇಮೆಂಟ್, ಎಲ್‌ಎಲ್‌ಆರ್ ನೀಡುತ್ತಿದ್ದೇವೆ. ಡೇರಿ ಹಗರಣಗಳ ತನಿಖೆ ಮಾಡಲು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಉಳಿದಂತೆ ಕ್ರಮಕೈಗೊಳ್ಳಲಾಗುವುದು ಎಂದರು.
ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಹುಲ್ಕೂರ್ ಹರೀಕುಮಾರ್, ವಿಜಯ್‌ಪಾಲ್, ಮೇಲುಗಾಣಿ ದೇವರಾಜ್, ಮೀಸೆ ವೆಂಕಟೇಶಪ್ಪ, ಕ್ಯಾಸಂಬಳ್ಳಿ ಪ್ರತಾಪ್, ವಡ್ಡಹಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ರೆಹಮಾನ್, ಮಂಜುನಾಥ್‌ರೆಡ್ಡಿ, ತೆರ್ನಹಳ್ಳಿ ಆಂಜಿನಪ್ಪ, ವೆಂಕಿ, ಯಲುವಳ್ಳಿ ಪ್ರಭಾಕರ್, ಆನಂದರೆಡ್ಡಿ, ಗಣೇಶ್, ಮಾಲೂರು ತಾಲೂಕು ಅಧ್ಯಕ್ಷ ವೆಂಕಟೇಶ್, ಮುಳಬಾಗಿಲು ತಾಲೂಕು ಅಧ್ಯಕ್ಷ ಫಾರುಕ್‌ಪಾಷ, ಬಂಗಾರಪೇಟೆ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಅಂಬರೀಶ್, ಆಂಚಂಪಲ್ಲಿ ಗಂಗಾಧರ್, ಸುಪ್ರೀಂಚಲ, ಸಾಗರ್, ಚಂದ್ರಪ್ಪ, ಪುತ್ತೇರಿ ರಾಜು, ಪುರುಷೋತ್ತಮ್, ಗೋಪಾಲ್, ಬಾಲು ಇದ್ದರು.