ಮುಳಬಾಗಿಲು: ವಿದ್ಯುತ್ ದರ ಏರಿಕೆ ಆದೇಶ ವಾಪಸ್ ಪಡೆದು, ಕೃಷಿಗೆ 7 ಗಂಟೆ ಕರೆಂಟ್ ನೀಡಬೇಕು. ಜೊತೆಗೆ ನಿಗಮದಲ್ಲಿನ ಭ್ರಷ್ಟಾಚಾರದ ತನಿಖೆಗೆ ವಿಶೇಷ ತಂಡ ರಚಿಸಬೇಕೆಂದು ಒತ್ತಾಯಿಸಿ ರೈತ ಸಂಘವು ನಗರದಲ್ಲಿನ ಬೆಸ್ಕಾಂ ಕಚೇರಿಗೆ ಪೊರಕೆ ಸಮೇತ ಮುತ್ತಿಗೆ ಹಾಕಿ ಪ್ರತಿಭಟಿಸಿತು.
ಈ ವೇಳೆ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಶ್ರೀಮಂತರು, ರಾಜಕಾರಣಿಗಳು ನಡೆಸುವ ಸಭೆ ಸಮಾರಂಭಗಳಿಗೆ ದಿನದ 24 ಗಂಟೆ ವಿದ್ಯುತ್ ಪೂರೈಸುವ ಅಧಿಕಾರಿಗಳು, ಲಕ್ಷಾಂತರ ರೂ. ಸಾಲ ಮಾಡಿ ಬೆಳೆಯುವ ಬೆಳೆಗೆ ಗುಣಮಟ್ಟದ ವಿದ್ಯುತ್ ನೀಡುವುದಿಲ್ಲ ಎಂದು ದೂರಿದರು.
ರೈತ ವಿರೋಧಿ ನೀತಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುವ ರೈತರು, ಬೆಳೆದ ಬೆಳೆಗೆ ಬೆಲೆ ಇಲ್ಲದೆ, ಖಾಸಗಿ ಸಾಲಕ್ಕೆ ಸಿಲುಕಿದ್ದಾರೆ. ಇದೀಗ ಸರ್ಕಾರ ಏಕಾಏಕಿ ಪ್ರತಿ ಯೂನಿಟ್‌ಗೆ 35 ಪೈಸೆ ದರ ಏರಿಕೆ ಮಾಡುವ ಮೂಲಕ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ವಿವರಿಸಿದರು.
ಕೃತಕ ಅಭಾವ ಸೃಷ್ಟಿ: ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ ಮಾತನಾಡಿ, ವಿದ್ಯುತ್ ಕೊರತೆ ಇಲ್ಲ ಎಂದು ಬೇಸಿಗೆಯಲ್ಲಿ ಅಭಾವ ಸೃಷ್ಟಿ ಮಾಡಿ, ಲೋಡ್‌ಶೆಡ್ಡಿಂಗ್ ಮಾಡುವ ಮೂಲಕ ರೈತರ ಜೀವನದ ಜೊತೆ ಬೆಸ್ಕಾಂ ಚೆಲ್ಲಾಟವಾಡುತ್ತಿದೆ. ಲಕ್ಷಾಂತರ ರೂ. ಬಂಡವಾಳ ಹಾಕಿ ಬೆಳೆದ ಬೆಳೆ ಕೈಗೆ ಬರುವ ಸಮಯದಲ್ಲಿ ಸಮರ್ಪಕ ವಿದ್ಯುತ್ ನೀಡದೇ ಸಾಲದ ಸುಳಿಗೆ ಸಿಲುಕಿಸಲಾಗುತ್ತಿದೆ ಎಂದು ದೂರಿದರು.
ಬೆಸ್ಕಾಂ ಹದಗೆಟ್ಟಿದೆ: ಮತ್ತೂಂದೆಡೆ ಕಳಪೆ ಗುಣಮಟ್ಟದ ವಿದ್ಯುತ್‌ನಿಂದ ಪಂಪ್‌ಸೆಟ್‌ಗಳು ತಿಂಗಳಿಗೆ 10 ಬಾರಿ ಸುಟ್ಟು ಹೋಗುತ್ತಿವೆ, ರಾತ್ರಿ ಹೊತ್ತು ಕರೆಂಟ್ ನೀಡುವುದರಿಂದ ತೋಟಗಳಿಗೆ ನೀರು ಹಾಯಿಸಲು ಕೊಳವೆಬಾವಿಗಳ ಬಳಿಯೇ ಸಂಸಾರ ಮಾಡಬೇಕಾದ ಮಟ್ಟಕ್ಕೆ ಬೆಸ್ಕಾಂ ಹದಗೆಟ್ಟಿದೆ ಎಂದರು.
ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಹಸಿರು ಸೇನೆ ತಾಲೂಕು ಅಧ್ಯಕ್ಷ ವೇಣು, ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ, ಯುವ ಮುಖಂಡರಾದ ನವೀನ್, ವೇಣು, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಕಿಶೋರ್, ರಾಮಮೂರ್ತಿ, ಅಣ್ಣೆಹಳ್ಳಿ ನಾಗರಾಜ, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಫಾರುಕ್‌ಪಾಷ,
ಶ್ರೀನಿವಾಸಪುರ ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಬಂಗಾರಿ ಮಂಜುನಾಥ, ಜುಬೇರ್, ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ, ಪುತ್ತೇರಿ ರಾಜು, ಯಾರಂಘಟ್ಟ ಗಿರೀಶ್, ಕೆ.ಜಿ.ಎಫ್ ತಾ. ಅಧ್ಯಕ್ಷ ರಾಮಸಾಗರ ವೇಣು, ಸಂದೀಪ್‌ರೆಡ್ಡಿ, ಸಂದೀಪ್‌ಗೌಡ ಇದ್ದರು.