ಆಳಂದ: ರಾಜ್ಯ ಸರ್ಕಾರ ರೈತರ ಸಾಲಮನ್ನಾ ಹೆಸರಿನಲ್ಲಿ ಅನೇಕ ದಾಖಲೆ ಕೇಳಿ ಕಾಲಹರಣ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಸುಭಾಷ ಗುತ್ತೇದಾರ ಆರೋಪಿಸಿದರು.
ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ 70ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಐವರು ರೈತರಿಗೆ ಕೃಷಿ ಇಲಾಖೆ ಮೂಲಕ ನೀಡುವ ಕೃಷಿ ಪಂಡಿತ ಪ್ರಶಸ್ತಿ ನೀಡಿ ಅವರು ಮಾತನಾಡಿದರು.
ಸಾಲ ನೀಡುವಾಗ ಬ್ಯಾಂಕ್‌ಗಳು ದಾಖಲೆ ಕೇಳಿದಂತೆ ಮನ್ನಾ ಮಾಡುವಾಗಲು ದಾಖಲೆ ಕೇಳಿ ರೈತರನ್ನು ಓಡಾಡಿಸುತ್ತಿವೆ. ಸಾಲಮನ್ನಾ ಹೆಸರಿನಲ್ಲಿ ರಾಜ್ಯ ಸರ್ಕಾರ ರೈತರಿಗೆ ಇಲ್ಲದ ದಾಖಲೆಗಳನ್ನು ಕೇಳಿ ಮೋಸಮಾಡುತ್ತಿದೆ. ಏಕಕಾಲಕ್ಕೆ ಸಾಲಮನ್ನಾಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು, ಕೃಷಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಬರ ಕಾಮಗಾರಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಾದನಹಿಪ್ಪರಗಾದ ಮಲ್ಲಿಕಾರ್ಜುನ ವಿ. ಗಡ್ಡದ, ಖಜೂರಿಯ ವೈಜನಾಥ ಕರಬಸಪ್ಪಾ, ಕಡಗಂಚಿಯ ಕಾಶಿನಾಥ ಶಾಂತಪ್ಪ, ಬೆಳಮಗಿಯ ಶರಣಬಸಪ್ಪ ಖಂಡೇರಾವ್ ಮುರಡಿ, ವಿ.ಕೆ. ಸಲಗರ ಗ್ರಾಮದ ಮಹಾಂತೇಶ ರವಿಂದ್ರ ಪಾಟೀಲ ಅವರಿಗೆ ಕೃಷಿ ಪಂಡಿತ ಪ್ರಶಸ್ತಿ, ತಲಾ 10 ಸಾವಿರ ರೂ. ಮೊತ್ತದ ಚೆಕ್, ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಜಿಪಂ ಸದಸ್ಯ ಗುರುಶಾಂತ ಪಾಟೀಲ, ತಹಶೀಲ್ದಾರ್ ಬಸವರಾಜ ಎಂ. ಬೆಣ್ಣೆಶಿರೂರ, ಇಒ ಅನಿತಾ ಕೊಂಡಾಪುರ, ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ, ತಾಂತ್ರಿಕ ಅಧಿಕಾರಿ ಸಂಜಯ ಸೌದಿ ಮತ್ತಿತರರು ಇದ್ದರು.