Advertisement
ಮೇ 16 ರಂದು ಆಲೂಗಡ್ಡೆ ಮಾರುಕಟ್ಟೆ ಆರಂಭ ವಾದಾಗ ಕ್ವಿಂಟಲ್ ಆಲೂಗಡ್ಡೆ ದರ 1,450 ರಿಂದ 1,600 ರೂ. ಇದ್ದದ್ದು, ಈಗ 1,250 ರಿಂದ 1,350 ರೂ.ಗೆ ಕುಸಿದಿದೆ. ಆದರೂ ರೈತರು ಆಲೂಗಡ್ಡೆ ಖರೀ ದಿಗೆ ಮುಂದಾಗುತ್ತಿಲ್ಲ. ಇದರ ಪರಿಣಾಮ ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ.
Related Articles
Advertisement
ಕಳೆದ ವರ್ಷ ಜಿಲ್ಲೆಯ 11ಸಾವಿರ ಎಕರೆಯಲ್ಲಿ ಆಲೂಗಡ್ಡೆ ಬಿತ್ತನೆಯಾಗಿತ್ತು. ಈ ವರ್ಷ 13ಸಾವಿರ ಎಕರೆಯಲ್ಲಿ ಆಲೂಗಡ್ಡೆ ಬಿತ್ತನೆಯಾಗಬಹದೆಂದು ತೋಟಗಾರಿಕೆ ಇಲಾಖೆ ನಿರೀಕ್ಷಿಸಿತ್ತು. ಆದರೆ ನಿರೀಕ್ಷೆಯ ಶೇ.50 ರಷ್ಟೂ ಪ್ರಮಾಣದಲ್ಲೂ ಆಲೂಗಡ್ಡೆ ಬಿತ್ತನೆ ಯಾಗುವುದು ಕಷ್ಟ ಎಂಬ ಪರಿಸ್ಥಿತಿ ಇದೆ.
ಜಿಲ್ಲಾಡಳಿತದಿಂದ ವ್ಯವಸ್ಥೆ: ಜಿಲ್ಲಾಡಳಿತವೇನೋ ಆಲೂಗಡ್ಡೆ ವಹಿವಾಹಿಟಿಗೆ ಉತ್ತಮ ವ್ಯವಸ್ಥೆ ಮಾಡಿತ್ತು. ಸರ್ಕಾರ ಶೇ.50ರಷ್ಟು ಸಹಾಯಧನವನ್ನೂ ನೀಡುತ್ತಿದೆ. ಅದಕ್ಕಾಗಿ ಮಾರುಕಟ್ಟೆಯಲ್ಲಿಯೇ ತೋಟ ಗಾರಿಕೆ ಮತ್ತು ಕಂದಾಯ ಇಲಾಖೆಯ ಮೂಲಕ ಸಕಲ ವ್ಯವಸ್ಥೆಯನ್ನೂ ಮಾಡಿದೆ. ಆಲೂಗಡ್ಡೆ ಬೀಜೋ ಪಾಚಾರಕ್ಕೆ ಹಾಗೂ ಔಷಧಿಗೆ ಶೇ.50ರಷ್ಟು ಸಹಾಯ ಧನವನ್ನೂ ತೋಟಗಾರಿಕೆ ನೀಡಲು ಮುಂದಾಗಿದೆ. ಸಹಾಯಧನ ನೀಡುವ ಬಗ್ಗೆ ವ್ಯಾಪಕ ಪ್ರಚಾರವನ್ನೂ ಕೈಗೊಳ್ಳಲಾಗುತ್ತಿದೆ. ಆದರೂ ರೈತರು ಮಾತ್ರ ಆಲೂ ಗಡ್ಡೆ ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ. ರೈತರಿಗೆ ಸಲಹೆ ಹಾಗೂ ಸಬ್ಸಿಡಿ ದರದಲ್ಲಿ ಔಷಧಿ ನೀಡಲು ತೋಟಗಾರಿಕೆ ಇಲಾಖೆ ಮಾರುಕಟ್ಟೆಯಲ್ಲಿ ತೆರೆದಿರುವ ಮಳಿಗೆಗಳತ್ತ ರೈತರು ಮುಖ ಮಾಡುತ್ತಿಲ್ಲ. ಹಾಗಾಗಿ ಇಲಾಖೆಯ ಅಧಿಕಾರಿಗಳು, ನೌಕರರು ಮಳಿಗೆಯಲ್ಲಿ ಕಾಲ ಕಳೆಯುತ್ತಾ ಕೂತಿದ್ದಾರೆ.
ಕಳೆದ ವರ್ಷ ಪೂರ್ವ ಮುಂಗಾರು ಆಶಾದಾಯಕ ವಾಗಿದ್ದು, ಆಲೂಗಡ್ಡೆ ಬಿತ್ತನೆಗೆ ಆಶಾದಾಯಕ ವಾತಾವರಣವಿತ್ತು. ಆದರೆ ಮಲೆನಾಡು ಮತ್ತು ಆರೆ ಮಲೆನಾಡು ಪ್ರದೇಶಗಳಲ್ಲಿ ಮುಂಗಾರು ಮಳೆ ನಿರೀಕ್ಷೆ ಮೀರಿ ಸುರಿದಿದ್ದರಿಂದ ಬಿತ್ತನೆ ಮಾಡಿದ್ದ ಆಲೂಗಡ್ಡೆ ಹೊಲದಲ್ಲಿಯೇ ಕೊಳೆತು ಹೋಗಿ ರೈತರು ನಷ್ಟ ಅನುಭವಿಸಿದರು. ಬಯಲು ಸೀಮೆಯಲ್ಲೂ ಅಂಗಮಾರಿ ರೋಗ ಬೆಳೆಗೆ ಬಾಧಿಸಿತು. ಬೆಳೆ ನಷ್ಟವಾದರೂ ರೈತರಿಗೆ ಬೆಳೆ ವಿಮೆ ಬರಲಿಲ್ಲ. ಸತತ ನಷ್ಟ ಅನುಭವಿಸುತ್ತಾ ಬಂದಿರುವ ಹಾಸನ ಜಿಲ್ಲೆಯ ಆಲೂಗಡ್ಡೆ ಬೆಳೆಗಾರರು ಈಗ ಆಲೂಗಡ್ಡೆ ಬೆಳೆಯ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಬಂದಂತಿದೆ.
ಶೀತಲಗೃಹದ ಬಳಿಯೇ ವಹಿವಾಟು: ಹಾಸನ ಎಪಿಎಂಸಿ ಪ್ರಾಂಗಣದಲ್ಲಿ ಬಿತ್ತನೆ ಆಲೂಗಡ್ಡೆ ವಹಿವಾಟು ಕುಂಠಿತವಾಗಲು ವರ್ತಕರು ಶೀತಲಗೃಹದ ಬಳಿಯೇ ರೈತರಿಗೆ ನೇರವಾಗಿ ಆಲೂಗಡ್ಡೆ ಮಾರಾಟ ಮಾಡುತ್ತಿರುವುದೂ ಕಾರಣ ಎಂದು ಹೇಳಲಾಗುತ್ತಿದೆ. ಶೀತಲಗೃಹದಿಂದ ಎಪಿಎಂಸಿ ಪ್ರಾಂಗಣಕ್ಕೆ ಆಲೂಗಡ್ಡೆ ತರಲು ಒಂದು ಚೀಲಕ್ಕೆ (50 ಕೇಜಿ) ಅಂದರೆ ಲಾರಿ ಬಾಡಿಗೆ 8 ರೂ. ಒಂದು ಕ್ವಿಂಟಲ್ಗೆ 16 ರೂ. ಎಪಿಎಂಸಿ ಸೆಸ್ 14 ರೂ. ಹಾಗೂ ಅನ್‌ಲೋಡ್‌ಗೆ ಹಮಾಲಿಗಳಿಗೆ ಒಂದು ಚೀಲಕ್ಕೆ 5 ರೂ. ಕೊಡಬೇಕು. ಶೀತಲಗೃಹದ ಬಳಿಯೇ ರೈತರಿಗೆ ಮಾರಾಟ ಮಾಡಿದರೆ ಒಂದು ಕ್ವಿಂಟಲ್ಗೆ 40 ರೂ. ಉಳಿಯುತ್ತದೆ. ಹಾಗಾಗಿ ಬಹಳಷ್ಟು ವರ್ತಕರು ಶೀತಲಗೃಹದ ಬಳಿಯೇ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಎಷ್ಟು ಪ್ರಮಾಣದ ಆಲೂಗಡ್ಡೆ ಮಾರಾಟವಾಯಿತು ಎಂಬ ಲೆಕ್ಕ ಸಿಗುವುದಿಲ್ಲ. ಎಪಿಎಂಸಿಗೂ ನಷ್ಟವಾಗುತ್ತಿದೆ.
● ಎನ್. ನಂಜುಂಡೇಗೌಡ