ಗಜೇಂದ್ರಗಡ: ಬರದ ನಾಡೆಂದೇ ಬಿಂಬಿತವಾಗಿರುವ ತಾಲೂಕಿನಲ್ಲಿ ಈ ಬಾರಿ ಮುಂಗಾರು ಮಳೆ ಅನ್ನದಾತನನ್ನು ಕೈ ಹಿಡಿದಿದ್ದು,ಬೆಳೆಗಳು ನಳನಳಿಸುತ್ತಿವೆ. ನಿರೀಕ್ಷೆಗೂ ಮೀರಿ ಮುಂಗಾರಿನ ಫಸಲು ಬರುವ ಆಶಾಭಾವ ಒಡಮೂಡಿದೆ.
ಪ್ರಸಕ್ತ ವರ್ಷ ಮುಂಗಾರು ಮಳೆ ವಾಡಿಕೆಗಿಂತ ಉತ್ತಮವಾಗಿ ಸುರಿಯದಿದ್ದರೂ ಬೆಳೆ ಉಳಿಯುವಷ್ಟು ಸುರಿದಿದೆ. ಈಗಾಗಲೇ ಬಿತ್ತನೆ ಮಾಡಿರುವ ಹೆಸರು, ಗೋವಿನಜೋಳ, ಸಜ್ಜಿ, ನೆವಣಿ, ಗುರೆಳ್ಳು ಬೆಳೆ ಹಸಿರಿನಿಂದ ಕಂಗೊಳಿಸುತ್ತಿದೆ.
ತಾಲೂಕಿನಲ್ಲಿ ಕಳೆದ ಬಾರಿ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು, 10 ಸಾವಿರ ಹೆಕ್ಟೇರ್ ಪ್ರದೇಶ ಗೋವಿನಜೋಳ, 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಮತ್ತು 1000 ಹೆಕ್ಟೇರ್ ಪ್ರದೇಶದಲ್ಲಿ ಸಜ್ಜಿ ಬಿತ್ತನೆಯಾಗಿತ್ತು. ಈ ಬಾರಿ ಹೆಸರು 20,989, ಗೋವಿನ ಜೋಳ 5805, ಶೇಂಗಾ 5355, ಸಜ್ಜಿ 394, ಗುರೆಳ್ಳು 200, ಸೂರ್ಯಕಾಂತಿ 350, ಬಿ.ಟಿ ಹತ್ತಿ 923, ತೊಗರಿ 424 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಬೆಳೆಗಳು ಇದೀಗ ಸಮೃದ್ಧವಾಗಿದ್ದು, ಹೆಸರು ಹೂವು ಬಿಟ್ಟು ಕಾಯಿ ಕಟ್ಟುವ ಹಂತದಲ್ಲಿದೆ. ಮಳೆ ಹೆಚ್ಚಾದರೆ ಕೀಟಭಾದೆ ತಗುಲಿ ಎಲ್ಲಿ ಇಳುವರಿ ಕುಂಠಿತವಾಗುತ್ತದೆಯೋ ಎಂಬ ಭೀತಿ ರೈತರನ್ನು ಕಾಡುತ್ತಿದೆ. ಹೀಗಾಗಿ ಬೆಳೆಗಳ ರಕ್ಷಣೆಗಾಗಿ ರೈತರು ಕೀಟಭಾದೆ, ರೋಗ ಹತೋಟಿಗೆ ತರಲು ಔಷಧ ಸಿಂಪಡಣೆಯಲ್ಲಿ ತೊಡಗಿದ್ದಾರೆ.
ಗಜೇಂದ್ರಗಡ, ಕಾಲಕಾಲೇಶ್ವರ, ಗೊಗೇರಿ, ಗೌಡಗೇರಿ, ಕುಂಟೋಜಿ, ಮ್ಯಾಕಲಝರಿ, ಮಾಟರಂಗಿ, ಸೂಡಿ, ರಾಮಾಪುರ, ಪುರ್ತಗೇರಿ, ಕೊಡಗಾನೂರ, ವೀರಾಪುರ, ಚಿಲ್ಝರಿ, ಬೈರಾಪುರ, ಜಿಗೇರಿ, ರಾಜೂರ, ದಿಂಡೂರ, ಲಕ್ಕಲಕಟ್ಟಿ, ಕಲ್ಲಿಗನೂರ, ಮುಶಿಗೇರಿ, ಪ್ಯಾಟಿ, ನಾಗೇಂದ್ರಗಡ ಸೇರಿ ರೋಣ ಮತ್ತು ಗಜೇಂದ್ರಗಡ ತಾಲೂಕಿನಾದ್ಯಂತ 2019 ಜೂನ್ ಮತ್ತು ಜುಲೈನಲ್ಲಿ 233. 7 ಮಿ.ಮೀ. ಮಳೆ ಸುರಿದಿದೆ. 2018 ಜೂನ್ ಮತ್ತು ಜುಲೈನಲ್ಲಿ 112. 26 ಮಿ.ಮೀ. ಮಳೆ ಸುರಿದಿತ್ತು.
ಕಳೆದೊಂದು ವಾರದಿಂದ ತುಂತುರು ಮಳೆಯಾಗುತ್ತಿದ್ದು, ಬೆಳೆಗಳು ಮತ್ತಷ್ಟು ಸಮೃದ್ಧವಾಗಿ ಬರುವ ವಿಶ್ವಾಸ ರೈತರಲ್ಲಿದೆ. ಬೆಳೆಗಳ ಮಧ್ಯದಲ್ಲಿನ ಕಳೆ ತೆಗೆಯುವುದು, ಎಡೆಗುಂಟೆ ಹೊಡೆಯುವಂತಹ ಕೆಲಸಗಳಲ್ಲಿ ರೈತರು ತೊಡಗಿದ್ದಾರೆ.
ಸತತ ಬರಕ್ಕೆ ತುತ್ತಾಗಿ ನಲುಗಿದ್ದ ಅನ್ನದಾತರು ಈ ಬಾರಿ ನಿಟ್ಟುಸಿರು ಬಿಡುವಂತಾಗಿದೆ. ನೀರಿಲ್ಲದೆ ಬರಿದಾಗಿದ್ದ ಕೃಷಿ ಹೊಂಡ, ಚೆಕ್ ಡ್ಯಾಂಗಳಲ್ಲಿ ನೀರು ತುಂಬಿವೆ. ಕಳೆದೆರಡು ವರ್ಷಗಳಿಂದ ಅನುಭವಿಸಿದ್ದ ಬರಕ್ಕೆ ಗುಡ್ ಬೈ ಹೇಳಿದ ನೇಗಿಲ ಯೋಗಿ ಈಗ ಖುಷಿಯಾಗಿದ್ದಾನೆ.
ಭೂತಾಯಿ ನಂಬಿದರೆ ಎಂದಿಗೂ ಕೈ ಬಿಡಲ್ಲ ಎನ್ನುವ ಮಾತು ಸತ್ಯ ಐತ್ರಿ. ಕಳೆದೆರಡು ವರ್ಷ ಬಿತ್ತಿದ ಬೆಳಿ ಕೈಗೆ ಸಿಗದಂಗಾಗಿ ಬಾಳ್ ಕಷ್ಟ ಅನುಭವಿಸಿದ್ವಿ. ಆದ್ರ ಭೂ ತಾಯಿ ಮ್ಯಾಲ ನಂಬಿಕೆ ಇಟ್ಟಿದ್ವಿ ಸುಳ್ಳಾಗಲಿಲ್ರಿ.. ಮುಂಗಾರಿನ ಹೆಸರು ಬೆಳೆ ಭರ್ಜರಿ ಐತ್ರಿ. •ಕಳಕಪ್ಪ ಕುಂಬಾರ, ಹೆಸರು ಬೆಳೆದ ರೈತ.
ಕಳೆದ ಮಳೆಯ ಕೊರತೆಯಿಂದ ಮುಂಗಾರು ಬೆಳೆ ಬಾರದೇ ಕೈ ಸುಟ್ಟುಕೊಂಡಿದ್ದ ಅನ್ನದಾತರಿಗೆ ಈ ಬಾರಿ ಮುಂಗಾರು ಜೀವಕಳೆ ತಂದಿದೆ. ಫಸಲು ಉತ್ತಮ ಹಂತದಲ್ಲಿದ್ದು, ರೈತರ ಜಮೀನುಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಜೂನ್ ತಿಂಗಳ ಕೊನೆಯ ವಾರದಲ್ಲಿ ಬಿತ್ತನೆಯಾಗಿದ್ದ ಗೋವಿನ ಜೋಳ ಉತ್ತಮವಾಗಿದೆ.
•ಡಿ. ಜಿ ಮೋಮಿನ್