ಸಿಂದಗಿ: 1972ರಲ್ಲಿ ಬಿದ್ದ ಬರಗಾಲಕ್ಕಿಂತ ಪ್ರಸ್ತುತ ದಿನದಲ್ಲಿ ಭೀಕರ ಬರ ಬಿದ್ದಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಸರಕಾರ ರೈತರ ಚಿಂತನೆ ಮಾಡುತ್ತಿಲ್ಲ ಎಂದು ಅಖಂಡ ಕರ್ನಾಟಕ ರೈತ ಸಂಘ ರಾಜ್ಯಕಾರ್ಯಾಧ್ಯಕ್ಷ ಸಿದ್ರಾಮಪ್ಪ ರಂಜಣಗಿ ಆರೋಪಿಸಿದರು.
ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಸರಕಾರಿ ಬ್ಯಾಂಕು, ಖಾಸಗಿಯಲ್ಲಿ ಸಾಳ ಮಾಡಿ ಕೊಳವೆ ಬಾವಿ ಕೊರೆದು ಕೃಷಿ ಮಾಡುತ್ತಿದ್ದರೂ ಸಾಲ ತೀರಿಸಲಾಗುತ್ತಿಲ್ಲ. ಕೆಲ ರೈತರು ದಿಕ್ಕು ತೋಚದೆ ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳಿವೆ. ಆದರೆ ಸರಕಾರ ಮೂಕ ಪ್ರೇಕ್ಷಕನಾಗಿ ನೋಡುತ್ತಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚುನಾವಣೆ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಂಪೂರ್ಣಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಅವರು ಅಧಿಕಾರಕ್ಕೆ ಬಂದು ಎಷ್ಟೋ ದಿನಗಳಾದರೂ ಸಾಲಮನ್ನಾ ಕಾರ್ಯ ಕಾರ್ಯರೂಪಕ್ಕೆ ಬಂದಿಲ್ಲ. ಸಹಕಾರಿ ಬ್ಯಾಂಕ್‌ಗಳಲ್ಲಿ ಅಲ್ಪಸ್ವಲ್ಪ ರೈತರ ಸಾಲ ಮನ್ನಾ ಆಗಿದೆ. ಆದರೆ ರೈತರ ಸಂಪೂರ್ಣ ಸಾಲಮನ್ನಾಆಗಿಲ್ಲ. ಕುಮಾರಸ್ವಾಮಿ ಮಾತಿಗೆ ತಪ್ಪಿದ ಮುಖ್ಯಮಂತ್ರಿಯಾಗಿದ್ದಾರೆ ಎಂದು ಆರೋಪಿಸಿದರು.
ದೇಶದಲ್ಲಿ ಮಳೆ ಹೆಚ್ಚಾಗಿ ಸುನಾಮಿ ಬಂದಾಗ ಎಲ್ಲ ರಾಜಕೀಯ ಪಕ್ಷದವರು ಬೀದಿ ಬೀದಿ, ಗಲ್ಲಿ ಗಲ್ಲಿ ತಿರುಗಾಡಿ ದುಡ್ಡು ಕಲೆ ಹಾಕಿ ಸುನಾಮಿ ಸಮಸ್ಯೆ ಪರಿಹಾರಕ್ಕೆ ಕಳುಹಿತ್ತಾರೆ. ಆದರೆ ಮಳೆ ಬಾರದೆ ಬರಗಾಲದಿಂದ ತತ್ತರಿಸಿದ ರೈತರ ಸಂಕಷ್ಟಗಳಿಗೆ ಏಕೆ ಸ್ಪಂದಿಸುತ್ತಿಲ್ಲ. ಎಲ್ಲಿಯಾದರೂ ಭಿಕ್ಷೆ ಬೇಡಿ ರೈತರ ಸಾಲ ಮನ್ನಾ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.
ರೈತರ ಜಮೀನುಗಳಿಗೆ ರಸ್ತೆ ಮಾಡಿಕೊಡಬೇಕು ಎಂದು ಕಳೆದ 4 ವರ್ಷಗಳಿಂದ ಹೋರಾಟ ನಡೆಸಿದರೂ ಯಾವ
ಪ್ರಯೋಜನವಾಗಿಲ್ಲ. ಹೀಗೆ ರೈತರ ವಿಷಯಗಳಿಗೆ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು. ತಾಲೂಕಿನಲ್ಲಿ ಭೀಕರ ಬರಗಾಲ ರೈತ ಬೆಳೆದ ಬೆಳೆಗೆ ಬೆಲೆ ಸಿಗುತ್ತಿಲ್ಲ. ರೈತರು ಬೆಳೆದ ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ನೀಡಲಾಗಿದೆ. ಆದರೆ
ಸಕ್ಕರೆ ಕಾರ್ಖಾನೆಯಿಂದ ರೈತರ ಕೈಗೆ ಹಣ ಸೇರಿಲ್ಲ. ಸಕ್ಕರೆ ಕಾರ್ಖಾನೆಯವರು ಕಬ್ಬು ಬೆಳೆಯಿರಿ ಎಂದು ರೈತರಿಗೆ ಪ್ರೋತ್ಸಾಹ ನೀಡಿದ್ದಾರೆ. ಬೆಂಬಲ ಬೆಲೆ ನೀಡಿ ಸಕಾಲಕ್ಕೆ ಹಣ ನೀಡುವುದಾಗಿ ನಂಬಿಸಿ ರೈತರಿಂದ ಕಬ್ಬು ಪಡೆದಿದ್ದಾರೆ. ಆದರೆ ಮರುಪಾವತಿಯಾಗಿ ಹಣ ನೀಡಿಲ್ಲ. ಸರಕಾರ ರೈತರ ಬಗ್ಗೆ ಗಂಭೀರ ಚಿಂತನೆ ಮಾಡಬೇಕು. ರೈತರಿಗೆ ಹಣ ನೀಡದ
ಸಕ್ಕರೆ ಕಾರ್ಖಾನೆ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಖಂಡ ಕರ್ನಾಟಕ ರೈತ ಸಂಘ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ತಾಲೂಕಾಧ್ಯಕ್ಷ ಸಿದ್ರಾಮ ಅಂಗಡಗೇರಿ, ರೈತರಾದ ಅಶೋಕ ಅಲ್ಲಾಪುರ, ಚನ್ನಪ್ಪಗೌಡ ಪಾಟೀಲ, ಬಾಬು ಕೂಡಿ, ಬಾಬುಲಾಲ್ ಕೇಜಗೀರ, ಶ್ರೀಶೈಲ ಕೂಡಿ, ಪಮ್ಮು ಹರವಳ, ಅಮೃತ ಸಿಂಗ್ರಿ, ಬಸನಗೌಡ ಪಾಟೀಲ, ಮುತ್ತು ಭೂಸನೂರ, ರವಿ ಹಿರೇಕುರುಬರ, ರಾಯಪ್ಪಗೌಡ ಬ್ಯಾಕೋಡ, ಕೆಂಚಪ್ಪ ಚೋರಗಸ್ತಿ, ಬಾಬು ಕೊಯಿನಳ್ಳಿ ಇದ್ದರು.