ಸಿರುಗುಪ್ಪ: ತಾಲೂಕಿನಲ್ಲಿ ಬೆಂಬಲಬೆಲೆ ಯೋಜನೆಯಡಿ 2 ತಿಂಗಳ ಹಿಂದೆ ರೈತರಿಂದ ಖರೀದಿಸಿದ್ದ ಜೋಳಕ್ಕೆ ಸರ್ಕಾರದಿಂದ 1648 ಜನ ರೈತರಿಗೆ ಬಾಕಿ ಹಣ ಬರಬೇಕಾಗಿದ್ದು, ಜೋಳ ಮಾರಿದ ರೈತರು ಹಣಕ್ಕಾಗಿ ಕಚೇರಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಸುಮಾರು 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿಜೋಳದ ಬೆಳೆ ಬೆಳೆಯಲಾಗಿತ್ತು. ಕೊಯ್ಲಿನನಂತರ ಜೋಳ ಖರೀದಿಗೆ ವ್ಯಾಪಾರಿಗಳು ಬಾರದೇಇರುವುದರಿಂದ ಬೆಂಬಲಬೆಲೆ ಯೋಜನೆಯಡಿ ರೈತರು ಮಾರಾಟಕ್ಕೆ ಮುಂದಾಗಿದ್ದರು. ಕರ್ನಾಟಕಆಹಾರ ನಾಗರಿಕ ಸರಬರಾಜು ನಿಗಮ ಖರೀದಿಏಜೆನ್ಸಿ ಅಡಿಯಲ್ಲಿ 2 ತಿಂಗಳ ಹಿಂದೆ ಜೋಳ ಖರೀದಿ ಕೇಂದ್ರದಲ್ಲಿ ತಾಲೂಕಿನ ವಿವಿಧ ಗ್ರಾಮದ ರೈತರು ಜೋಳ ಖರೀದಿ ಕೇಂದ್ರದಲ್ಲಿ ತಮ್ಮ ಜೋಳವನ್ನು ರೂ. 3.600 ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಿದ್ದಾರೆ.
ನಗರದ ಎಪಿಎಂಸಿ ಆವರಣದಲ್ಲಿ ತೆರೆಯಲಾದ ಜೋಳ ಖರೀದಿ ಕೇಂದ್ರದಲ್ಲಿ ಒಟ್ಟು 2701 ಜನ ರೈತರು ಜೋಳ ಮಾರಾಟಕ್ಕೆ ನೋಂದಣಿ ಮಾಡಿಸಿದ್ದು, ಇದರಲ್ಲಿ 2593 ಜನ ರೈತರಿಂದಜೋಳ ಖರೀದಿ ಮಾಡಿದ್ದು, ಒಟ್ಟು ಮೊತ್ತ ರೂ. 43,62,71,292ಗಳು ರೈತರಿಗೆ ಪಾವತಿಸಬೇಕಾಗಿದೆ.ಆದರೆ ಇದರಲ್ಲಿ 945 ರೈತರಿಗೆ ರೂ.11,49,23,628 ಹಣ ಪಾವತಿಯಾಗಿದೆ. ಇನ್ನುಳಿದ 1648 ಜನ ರೈತರಿಗೆ ರೂ.32,13,47,664/- ಹಣ ಇನ್ನು ಪಾವತಿಯಾಗಿಲ್ಲ. ಇದರಿಂದಾಗಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಖರೀದಿ ಕೇಂದ್ರ, ತಾಲೂಕು ಕಚೇರಿ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಆಹಾರ ಇಲಾಖೆ ಕಚೇರಿ ಅಧಿ ಕಾರಿಗಳನ್ನು ಭೇಟಿ ಮಾಡಿ ನಮ್ಮ ಹಣ ಯಾವಾಗ ಬರುತ್ತದೆ ಎಂದು ವಿಚಾರಿಸುವುದು ಸಾಮಾನ್ಯವಾಗಿದೆ. ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸುವ ಸಂದರ್ಭದಲ್ಲಿ ಜೋಳ ಖರೀದಿಯಾದ15ದಿನದೊಳಗೆ ನಿಮ್ಮ ಬ್ಯಾಂಕ್ ಖಾತೆಗಳಿಗೆ ಆರ್ ಟಿಜಿಎಸ್ ಮೂಲಕ ಹಣ ಜಮಾವಣೆಯಾಗುತ್ತದೆ ಎಂದು ಹೇಳಿದ್ದರು.
2 ತಿಂಗಳಾದರೂ ನಮ್ಮ ಖಾತೆಗೆ ಹಣ ಬಾರದೆ ಇದ್ದುದ್ದರಿಂದ ನಗರದ ವಿವಿಧ ಕಚೇರಿಗಳಗೆ ತೆರಳಿ ರೈತರು ಅಧಿಕಾರಿಗಳನ್ನು ವಿಚಾರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಯಾವುದೇ ಅಧಿಕಾರಿಗಳಿಂದ ಇಷ್ಟೇ ದಿನದಲ್ಲಿ ನಿಮ್ಮ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎನ್ನುವ ಸ್ಪಷ್ಟ ಮಾಹಿತಿ ದೊರೆಯುತ್ತಿಲ್ಲ.
ನಮ್ಮಿಂದ ಜೋಳ ಖರೀದಿಸಿ 2 ತಿಂಗಳಾದರೂ ನಮ್ಮ ಖಾತೆಗೆ ಹಣ ಬಂದಿಲ್ಲ. ಈ ಬಗ್ಗೆ ಯಾವುದೇ ಅಧಿಕಾರಿಗಳನ್ನು ಕೇಳಿದರು ಸ್ಪಷ್ಟವಾದ ಮಾಹಿತಿ ನೀಡುತ್ತಿಲ್ಲ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿಗಳನ್ನು ಕೇಳಿದರೂ ಅವರು ಕೂಡ ನಮಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಇದರಿಂದ ನಮಗೆ ಕೃಷಿ ಚಟುವಟಿಕೆ ನಡೆಸಲು ತೀವ್ರವಾದ ಕಷ್ಟವಾಗಿದೆ. ಆದ್ದರಿಂದ ಶೀಘ್ರವಾಗಿ ನಮ್ಮ ಖಾತೆಗೆ ಹಣ ಬರುವಂತೆ ಅಧಿ ಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಜೋಳ ಮಾರಿದ ರೈತರು ಒತ್ತಾಯಿಸಿದ್ದಾರೆ.
ತಾಲೂಕಿನ ರೈತರಿಗೆ ಬರಬೇಕಾದ ಜೋಳ ಮಾರಿದ ಬಾಕಿ ಹಣ ರೂ. 32 ಕೋಟಿ ಶೀಘ್ರವಾಗಿ ಬಿಡುಗಡೆ ಮಾಡುವಂತೆ ರಾಜ್ಯ ಕೃಷಿ ಸಚಿವರೊಂದಿಗೆಚರ್ಚಿಸಲಾಗುತ್ತದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ತಿಳಿಸಿದ್ದಾರೆ.
ಮುಂಗಾರು ಪ್ರಾರಂಭವಾಗಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದು, ಬಿತ್ತನೆಗೆ ತಯಾರಿ ಮಾಡಿಕೊಳ್ಳಬೇಕು, ಬೀಜ ಖರೀದಿಸಬೇಕು, ಆದರೆ ಜೋಳ ಖರೀದಿ ಮಾಡಿ 2 ತಿಂಗಳಾದರೂ ತಾಲೂಕಿನ ರೈತರಿಗೆ ಇನ್ನೂ 32 ಕೋಟಿ ರೂ. ಜೋಳ ಮಾರಿದ ಹಣ ಬಿಡುಗಡೆಯಾಗಿಲ್ಲ, ಇದರಿಂದ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಆರ್ಥಿಕ ತೊಂದರೆಯಾಗುತ್ತಿದೆ. ಶೀಘ್ರವಾಗಿ ಹಣ ಬಿಡುಗಡೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಪ್ರೊ|ನಂಜುಂಡಸ್ವಾಮಿ ಬಣ)ಯ ರಾಜ್ಯ ಕಾರ್ಯಾಧ್ಯಕ್ಷ ಆರ್.ಮಾಧವರೆಡ್ಡಿ ಒತ್ತಾಯಿಸಿದ್ದಾರೆ.
-ಆರ್.ಬಸವರೆಡ್ಡಿ ಕರೂರು