ದೇವನಹಳ್ಳಿ: ಮಳೆಯಿಲ್ಲದೆ ರೈತರು ಕಂಗಲಾಗಿದ್ದು ಬರಗಾಲದ ಪರಿಸ್ಥಿತಿಯಲ್ಲೂ ರೈತರ ಕೈ ಹಿಡಿಯುತ್ತಿದ್ದ ಹಿಪ್ಪು ನೇರಳೆ ಮತ್ತು ರೇಷ್ಮೆಯಿಂದ ರೈತರು ಜೀವನ ಸಾಗಿಸುತ್ತಿದ್ದಾರೆ. ಆದರೆ ಹಿಪ್ಪು ನೇರಳೆ ತೋಟಗಳಿಗೆ ಎಲೆ ಸುರುಳಿ ಕೀಟದ ಹಾವಳಿಯಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೈತರಿಗೆ ಹೈನುಗಾರಿಕೆ ಮತ್ತು ರೇಷ್ಮೆ ಕೈಹಿಡಿದಿದೆ. ರೇಷ್ಮೆ ಮತ್ತು ಹೈನುಗಾರಿಕೆ ಎರಡು ಕಣ್ಣುಗಳಿದ್ದಂತೆ. ಕೃಷಿ ಜತೆ ರೇಷ್ಮೆ ಮತ್ತು ಹೈನುಗಾರಿಕೆಯನ್ನು ಉಪಕಸುಬು ತೊಡಗಿಸಿಕೊಂಡಿದ್ದಾರೆ. ಮಳೆಯಿಲ್ಲದೆ ಬರಗಾಲದ ಪರಿಸ್ಥಿತಿ ಜಿಲ್ಲೆಯಲ್ಲಿ ಆವರಿಸಿದೆ. ಎಲೆ ಸುರಳಿ ಕೀಟ ಹಾವಳಿ ಒಂದು ತೋಟದಿಂದ ಮತ್ತೂಂದು ತೋಟಗಳಿಗೆ ಅವರಿಸುತ್ತಿದೆ. ರೈತರು ಸಾಕಷ್ಟು ತೊಂದರೆಗೊಳಗಾಗಿದ್ದಾರೆ.
ರೇಷ್ಮೆ ಇಲಾಖೆಯಿಂದ ಈಗಾಗಲೇ ತೋಟಗಳಿಗೆ ಎಲೆ ಸುರುಳಿ ಕೀಟ ಹಾವಳಿ ತಪ್ಪಿಸಲು ಔಷಧಿಗಳನ್ನು ಸಿಂಪಡಿಸಲು ಜಾಗೃತಿ ಕಾರ್ಯ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಎಲೆ ಸುರುಳಿ ಕೀಟಬಾಧೆ ಕಂಡು ಬಂದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ರೇಷ್ಮೆ ಹುಳುಗಳ ಏಕೈಕ ಆಹಾರ ಉತ್ತಮ ಗುಣಮಟ್ಟದ ಹಿಪ್ಪುನೇರಳೆ ಸೊಪ್ಪು. ಆದರೆ, ತೋಟಗಳಿಗೆ ಎಲೆ ಸುರುಳಿ ಕೀಟದ ಹಾವಳಿ ಎದುರಾಗಿದೆ. ಈ ಕುರಿತು ಇಲಾಖೆ ಅಧಿಕಾರಿ, ಸಿಬ್ಬಂದಿ ಭೇಟಿ ಮಾಡಿ ಅವುಗಳು ಶಿಫಾರಸು ಮಾಡಿದ ಕೀಟನಾಶಕಗಳನ್ನು ಸೂಚಿಸುವ ರೀತಿಯಲ್ಲಿ ಮಾತ್ರ ಸಿಂಪಡಿಸಬೇಕು. ಇದರ ನಿಯಂತ್ರಣಕ್ಕಾಗಿ ಸಂಶೋಧನಾ ಸಂಸ್ಥೆಗಳು ವಿಜ್ಞಾನಿಗಳ ಸಯೋಗದೊಂದಿಗೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯವರು ಕಳಪತ್ರ ಮೂಧಿಸಿ ವ್ಯಾಪಕ ಪ್ರಚಾರ ಮಾಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಪ್ಪುನೇರಳೆಯಲ್ಲಿ ಎಲೆ ಸುರುಳಿ ಕೀಟಬಾಧೆಯು ಸೆಪ್ಟೆಂಬರ್- ನವೆಂಬರ್ ತಿಂಗಳಿನಲ್ಲಿ ಹೆಚ್ಚಿನ ಹಾನಿ ಉಂಟುಮಾಡುತ್ತದೆ. ಗಿಡದ ಕುಡಿ ಭಾಗ ಇಲ್ಲವೇ ಎಲೆಯ ಎಲೆಗಳ ಅಂಚನ್ನು ಸುರುಳಿ ಯಕಾರವಾಗಿ ಒಳಭಾಗದಲ್ಲಿ ಸೇರಿಕೊಂಡು ತಿನ್ನುತ್ತವೆ. ಹಾಗೂ ಕುಡಿ ಭಾಗವನ್ನು ಹಾಳು ಮಾಡಿ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಇದರಿಂದ ಸೊಪ್ಪಿನ ಇಳುವರಿ ಕಡಿಮೆಯಾಗುತ್ತದೆ.
ನಿರ್ವಹಣಾ ಕ್ರಮಗಳು: ಕುಡಿಗಳನ್ನು ಉಳಿವಿನ ಸಮೇತ ಕತ್ತರಿಸಿ ಬೆಂಕಿಯಲ್ಲಿ ಸುಡಬೇಕು. ಆಳವಾಗಿ ಉಳುಮೆ ಮಾಡುವುದು, ರಾತ್ರಿ ವೇಳೆ ಸೋಲಾರ್ ದೀಪಗಳನ್ನು ಅಳವಡಿಸುವುದು. ತಳಭಾಗದಲ್ಲಿ ಇಂಟ್ರೇಪಿಡ್ ಶೇ.10 ಇಸಿ1.5ಮಿ.ಲೀ ದ್ರಾವಣ 1 ಲೀ. ನೀರಿಗೆ ಬೆರೆಸಿ ಬಟ್ಟಲುಗಳಲ್ಲಿ ಇಡುವುದು. ಒಂದು ಎಕರೆ ಟ್ರೈ ಕೋ ಕಾರ್ಡ್ನ್ ಶೀಟ್‌ನಂತೆ ಕಟವಾದ ನಂತರ ನಾಲ್ಕು ಬಾರಿ ಗಿಡಗಳಿಗೆ ನೇತಾಕಬೇಕು. ಟ್ರೈ ಕೋ ಕಾರ್ಡನ್ನು 3 ಬಾರಿ ಕಟಾವಾದ 15ದಿನಗಳ ನಂತರ ಎಲೆಯ ಕೆಳಭಾಗಕ್ಕೆ ಅಂಟಿಸುವುದು. ಸಸ್ಯದ ತುದಿ ಭಾಗವು ಪೂರ್ಣ ಒದ್ದೆಯಾಗುವಂತೆ ಕ್ಲೋರೋಪಿನಾ ಪ್ರೈರ್ ಶೇ. 10 ಆಂಟಿ(ಇಂಟ್ರಿಪಿಡ್)1.5.ಮಿ.ಲೀ. ಪ್ರತಿ ಲೀ.ಗೆ 150-175ಲೀ ಪ್ರತಿ ಎಕರೆಗೆ ಸಿಂಪಡಿಸಬೇಕು. ಕೀಟದ ಹಾವಳಿ ಹೆಚ್ಚಾದಲ್ಲಿ ಕೀಟನಾಶಕವನ್ನು 2ನೇ ಬಾರಿಗೆ 10 ದಿನಗಳ ನಂತರದಲ್ಲಿ ಸಿಂಪಡಿಸಬೇಕು. ಕೀಟನಾಶಕವನ್ನು (ಇಂಟ್ರಿ ಪಿಡ್) ಸಾಯಂಕಾಲದ ಸಮಯದಲ್ಲಿ ಸಿಂಪಡಿಸುವುದು ಸೂಕ್ತ.
ಕಟವಾದ 15 ದಿನಗಳ ನಂತರ ರೋಗರ್ (ಡೈಮೀಧೋಯೇಟ್ ಶೇ. 30ಇಸಿ) 2 ಮಿ.ಲೀ ನಂತೆ ಪ್ರತಿ ಲೀಟರ್ ನಂತೆ ಸಿಂಪಡಿಸಬೇಕು ಎಂದು ರೇಷ್ಮೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹಿಪ್ಪು ನೇರಳೆ ತೋಟಗಳಿಗೆ ಎಲೆ ಸುರುಳಿ ಕಿಟಬಾಧೆಯಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ರೇಷ್ಮೆ ಹುಳುಗಳಿಗೆ ಸೊಪ್ಪಿನ ಕೊರತೆ ಎದುರಾಗಿದೆ. ತೋಟದಿಂದ ತೋಟಕ್ಕೆ ಕೀಟಬಾಧೆ ಹರಡುತ್ತಿದ್ದು, ಹಿಪ್ಪು ನೇರಳೆ ಬೆಳೆ ನಷ್ಟವಾಗುತ್ತಿದೆ. ರೇಷ್ಮೆ ಇಲಾಖೆ ಅಧಿಕಾರಿಗಳು ತೋಟಗಳಿಗೆ ತೆರಳಿ ರೈತರಿಗೆ ಮಾರ್ಗದರ್ಶನ ನೀಡಬೇಕು
. ● ಎಚ್.ಎಂ. ರವಿಕುಮಾರ್, ಹಿಪ್ಪು ನೇರಳೆ ಬೆಳೆ ರೈತ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಿಪ್ಪು ನೇರಳೆ ಬೆಳೆಗೆ ಎಲೆ ಸುರುಳಿ ಕೀಟಬಾಧೆ ಶೇ. 10-20 ಮಾತ್ರ ಇದೆ. ಸೆಪ್ಟೆಂಬರ್‌ನಿಂದ ನವಂಬರ್ ತಿಂಗಳಿನಲ್ಲಿ ಈ ಕೀಟಬಾಧೆ ಕಂಡುಬರುತ್ತದೆ. ಈಗಾಗಲೇ ಜಿಲ್ಲೆಯಲಿ ಕೀಟಬಾಧೆ ನಿಯಂತ್ರಣ ಕ್ರಮಗಳ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಮತ್ತು ಯಲಿ ಯೂರು ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದೆ.
● ಪ್ರಭಾಕರ್ ಬೆಂ.ಗ್ರಾಮಾಂತರ ಜಿಲ್ಲೆ ರೇಷ್ಮೆ ಉಪ ನಿರ್ದೇಶಕ
– ಎಸ್.ಮಹೇಶ್