Advertisement
ಹೌದು, ಕಳೆದ ಹಲವು ವರ್ಷಗಳ ಬಳಿಕ ಮುಂಗಾರು ಮಳೆ ಸಕಾಲಕ್ಕೆ ಸುರಿದಿದೆ. ಜಿಲ್ಲೆಯ ಹಳೆಯ 6 ಹಾಗೂ ಹೊಸ 4 ತಾಲೂಕು ಸಹಿತ ಎಲ್ಲೆಡೆ ಮುಂಗಾರು ಬಿತ್ತನೆ ಕಾರ್ಯ ಚುರುಕುಗೊಂಡಿದೆ. ರೈತ ಸಮೂಹಕ್ಕೆ ಕೃಷಿ ಇಲಾಖೆ ಕೂಡ, ಬೆಂಗಾವಲಾಗಿ ನಿಂತಿದ್ದು, ರೈತರಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಗೆ ಸಿದ್ಧತೆ ಮಾಡಿಕೊಂಡಿದೆ.
Related Articles
Advertisement
2.27 ಲಕ್ಷ ರೈತರು: ಜಿಲ್ಲೆಯಲ್ಲಿ 69,742 ಅತಿ ಚಿಕ್ಕ ರೈತರಿದ್ದು ಅವರು 40,350 ಹೆಕ್ಟೇರ್ ಭೂಮಿ ಹೊಂದಿದ್ದಾರೆ. ಇನ್ನು 75,345 ಜನ ಸಣ್ಣ ರೈತರಿದ್ದು, ಅವರು 1,09,374 ಹೆಕ್ಟೇರ್ ಭೂಮಿಯ ಒಡೆತನ ಹೊಂದಿದ್ದಾರೆ. 82,644 ಜನ ದೊಡ್ಡ (ಇತರೆ) ರೈತರಿದ್ದು, ಅವರು 3,37,391 ಹೆಕ್ಟೇರ್ ಭೂಮಿಯ ಒಡೆತನ ಹೊಂದಿದ್ದಾರೆ. ಜಿಲ್ಲೆಯಲ್ಲಿ ಅತಿಚಿಕ್ಕ, ಚಿಕ್ಕ ಹಾಗೂ ದೊಡ್ಡ ರೈತರು ಸೇರಿ ಒಟ್ಟು 2,27,731 ರೈತರಿದ್ದು, ಒಟ್ಟಾರೆ, 4,87,116 ಹೆಕ್ಟೇರ್ ಸಾಗುವಳಿ ಭೂಮಿ ಹೊಂದಿದವರಿದ್ದಾರೆ. ಜಿಲ್ಲೆಯ ಒಟ್ಟಾರೆ ಭೌಗೋಳಿಕ ಕ್ಷೇತ್ರ 6575 ಚದರ ಕಿ.ಮೀ ವಿಸ್ತೀರ್ಣವಿದ್ದು, ಅದರಲ್ಲಿ 81 ಸಾವಿರ ಹೆಕ್ಟೇರ್‌ನಷ್ಟು ಅರಣ್ಯ ಭೂಮಿ ಇದೆ.
ಬೂದಿಹಾಳ ಕುಟುಂಬದ ಶ್ರದ್ಧೆ : ಮುಂಗಾರು ಬಿತ್ತನೆಗೆ ಜಿಲ್ಲೆಯ ರೈತ ಕುಲ, ತನ್ನದೇ ಆದ ಸಂಪ್ರದಾಯ ಆಚರಿಸುತ್ತ ಬಂದಿದೆ. ಅತ್ಯಂತ ಶ್ರದ್ಧೆ, ಭಕ್ತಿಯಿಂದ ಭೂಮಿ, ಎತ್ತುಗಳಿಗೆ ಪೂಜೆ ಮಾಡಿ, ಬಿತ್ತನೆ ಆರಂಭಿಸುತ್ತಾರೆ. ಇಂತಹ ವಿಶೇಷತೆಗೆ ಬಾದಾಮಿ ತಾಲೂಕಿನ ಬೂದಿಹಾಳದ ಪಾಂಡಪ್ಪ ಪೂಜಾರಿ ರೈತ ಕುಟುಂಬ ವಿಶೇಷ ಹೆಸರು ಮಾಡಿದೆ.
ಈ ಕುಟುಂಬ ಪ್ರತಿವರ್ಷ ಮುಂಗಾರು ಆರಂಭಿಸುವ ಮೊದಲು ಹೊಲದಲ್ಲಿ ಭೂಮಿ ತಾಯಿಗೆವಿಶೇಷ ಪೂಜೆ ಸಲ್ಲಿಸುತ್ತಾರೆ. ಅದಕ್ಕೂ ಮುಂಚೆ, ಹೋಳಿಗೆ, ಕಡಬು ಮುಂತಾದ ಸಿಹಿ ಭೋಜನ ಸಿದ್ಧಪಡಿಸಿ, ಭೂತಾಯಿ ಅರ್ಪಿಸುತ್ತಾರೆ. ಬಳಿಕ ಕೂರಿಗೆ, ಕುಂಟೆ, ನೇಗಿಲಿಗೆ ಪೂಜೆ ಮಾಡುವುದು ಇವರ ಸಂಪ್ರದಾಯ. ಕೂರಿಗೆಗೆ ರೇಷ್ಮೆ ಸೀರೆ ಉಡುಸಿ, ಬಿತ್ತಲು ಬೀಜ ಹಾಕು ಮಂಡಿಗೆ ಬೋರಮಳ-ತಾಳಿ ಹಾಕಿ ಮುತ್ತೆ$çದೆಯಂತೆ ವಿಶೇಷವಾಗಿ ಅಲಂಕರಿಸುತ್ತಾರೆ. ನಂತರ ಕೂರಿಗೆಗೆ ಎತ್ತುಗಳನ್ನು ಹೂಡದೇ, ಮನೆಯ ಮಂದಿಯೇ ಎತ್ತುಗಳಾಗಿ ಕೂರಿಗೆ ಎಳೆಯುತ್ತಾರೆ. ಎರಡು ಸಾಲು ತಮ್ಮಿಷ್ಟದ ಬೀಜ ಬಿತ್ತಿ, ಅಂದು ಎಲ್ಲರೂ ಹೊಲದಲ್ಲಿಯೇ ಭೋಜನ ಮಾಡುತ್ತಾರೆ. ಮೊದಲ ದಿನ ಅವರು ಎತ್ತು ಹೂಡಿ, ಬಿತ್ತನೆ ಮಾಡುವುದಿಲ್ಲ. ತಾವೇ ಕೂರಿಗೆ ಎಳೆದು ಎರಡು ಸಾಲು ಬಿತ್ತಿ, ಮೊದಲ ದಿನ ಬಸವಣ್ಣ (ಎತ್ತು) ಪೂಜೆ ಮಾಡುವುದು ವಾಡಿಕೆಯಾಗಿದೆ. ಮರುದಿನ ಎತ್ತುಗಳನ್ನು ಹೂಡಿ ಬಿತ್ತನೆ ಮಾಡುವುದು ಅವರ ಸಂಪ್ರದಾಯ. ಈ ರೀತಿಯ ವಿಶೇಷ ಭಕ್ತಿಯ ಮುಂಗಾರು ಬಿತ್ತನೆಯ ಸಂಪ್ರದಾಯ ಜಿಲ್ಲೆಯಲ್ಲಿವೆ.
–ಶ್ರೀಶೈಲ ಕೆ. ಬಿರಾದಾರ