Advertisement

ಮಿಶ್ರ ಬೆಳೆಗಳ ಜತೆಗೆ ವೈಜ್ಞಾನಿಕ ಭತ್ತ ಕೃಷಿ ಅಳವಡಿಸಿದ ರೈತ

10:53 PM Dec 19, 2019 | Sriram |

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ “ಉದಯವಾಣಿ’ಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

Advertisement

ಬಡಗನ್ನೂರು: ಸಾಂಪ್ರದಾಯಿಕ ಮಿಶ್ರ ಕೃಷಿ ಜತೆ ವೈಜ್ಞಾನಿಕ ಹಾಗೂ ವ್ಯವಸ್ಥಿತವಾಗಿ ಭತ್ತ ಕೃಷಿಯನ್ನು ಅಳವಡಿಸಿಕೊಂಡು ಯಶಸ್ವಿ ಕೃಷಿಯನ್ನು ನಡೆಸುತ್ತಿದ್ದಾರೆ ಪ್ರಗತಿಪರ ಕೃಷಿಕ ಕೆರೆಮಾರು ಸಂದರ ಪೂಜಾರಿ.

ಸಮಾರು 4 ಎಕ್ರೆ ಕೃಷಿ ಭೂಮಿ ಹೊಂದಿರುವ ಸುಂದರ ಪೂಜಾರಿ ಅವರು 1.5 ಎಕ್ರೆ ಭತ್ತದ ಬೆಳೆ, 2 ಎಕ್ರೆ ಅಡಿಕೆ, 0.5 ಎಕ್ರೆ ತೆಂಗು ಹಾಗೂ ಉಪ ಬೆಳೆಯಾಗಿ ಕರಿಮೆಣಸು, ಬಾಳೆ, ಪೂರಕವಾಗಿ 3 ದನ, 8 ಆಡು ಹಾಗೂ ಊರಿನ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ.

ಕಳೆದ ವರ್ಷ 20 ಕ್ವಿಂಟಲ್‌ ಭತ್ತದ ಇಳುವರಿಯಾಗಿದ್ದು, ಈ ವರ್ಷ ಕೂಡ ಹತ್ತಿರ ಹತ್ತಿರ 18 ಕ್ವಿಂಟಾಲ್‌ ಇಳುವರಿ ಅಂದಾಜು ಮಾಡಲಾಗಿದೆ. ಖರ್ಚು ಕಳೆದು ವಾರ್ಷಿಕ 1 ಲಕ್ಷ ರೂ. ಲಾಭದಾಯಕವಾಗಿದೆ. ಒಟ್ಟಾರೆ ಹೇಳುವುದಾದರೆ ಕೃಷಿ ತೃಪ್ತಿಕರವಾದ ಜೀವನ ಎನ್ನುವುದು ಸುಂದರ ಪೂಜಾರಿ ಅವರ ಅಭಿಪ್ರಾಯ. 1957ರಲ್ಲಿ ಕೆರೆಮಾರು ಅಮ್ಮು ಪೂಜಾರಿ ಮತ್ತು ಇಂದಿರಾವತಿ ದಂಪತಿಗಳ ಪುತ್ರರಾಗಿ ಜನಿಸಿದ ಸುಂದರ ಪೂಜಾರಿ ತಮ್ಮ ಹಿರಿಯರ ಮಾರ್ಗದರ್ಶನ ಹಾಗೂ ಅವರ ಪ್ರೇರಣೆ ಪಡೆದು ಸುಮಾರು 20ನೇ ಹರೆಯದಲ್ಲಿ ಕೃಷಿಯಲ್ಲಿ ಆಸಕ್ತಿ ಪಡೆದುಕೊಂಡಿದ್ದಾರೆ. 1977ರಿಂದ ಕೃಷಿ ಆರಂಭಿಸಿ ಕೃಷಿ ಬದುಕಿನ 42 ವರ್ಷಗಳಲ್ಲಿ ಕೃಷಿ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡು ಪ್ರಶಸ್ತಿ, ಸಮ್ಮಾನವನ್ನೂ ಪಡೆದುಕೊಂಡಿದ್ದಾರೆ.

ದನ, ಆಡು, ಕೋಳಿ ಸಾಕಣೆ
ಕೃಷಿಗೆ ಪೂರಕವಾಗಿ ಅವರು ಮೂರು ದನ, ಎಂಟು ಆಡು ಹಾಗೂ ಊರಿನ ಕೋಳಿಯನ್ನೂ ಸಾಕಣೆ ಮಾಡುತ್ತಿದ್ದಾರೆ. ಅವರು ಬೆಳೆಯುವ ಬೆಳೆಗಳಿಗೆ ಇವುಗಳಿಂದಲೂ ಬಹಳ ಪ್ರಯೋಜನವಾಗುತ್ತಲಿದೆ. ಒಟ್ಟಿನಲ್ಲಿ ಕೃಷಿ ಮತ್ತದರ ಉಪಬೆಳೆಯಲ್ಲಿ ಸಂತೃಪ್ತದಾಯಕ ಜೀವನವನ್ನು ಸುಂದರ ಪೂಜಾರಿ ಕಾಣುತ್ತಿದ್ದಾರೆ. ಪತ್ನಿ, ಮೂವರು ಮಕ್ಕಳೊಂದಿಗೆ ಅವರ ಜೀವನ ಸಾಗುತ್ತಿದೆ.

Advertisement

ಇಲಾಖೆಯ ಜವಾನ ಪ್ರಶಸ್ತಿ
ಸುಂದರ ಪೂಜಾರಿ ಅವರು ಕೇಂದ್ರ ಸರಕಾರದ ಅಂಚೆ ಇಲಾಖೆಯಲ್ಲಿ ಜವಾನರಾಗಿ ಕೆಲಸ ನಿರ್ವಹಿಸುತ್ತಲಿದ್ದರು. ಅವರ ಉತ್ತಮ ಸೇವೆಗಾಗಿ ಇಲಾಖೆಯು 2001ರಲ್ಲಿ ಉತ್ತಮ ಜವಾನ ಪ್ರಶಸ್ತಿಯನ್ನು ನೀಡಿ ಸಮ್ಮಾನಿಸಿತ್ತು. ಅನಂತರದಲ್ಲಿ ಅವರು ಮೇಲ್ವಿಚಾರಣಕಾರರಾಗಿದ್ದರು. ಈ ಸಂದರ್ಭದಲ್ಲಿಯೇ ಅವರಿಗೆ ಕೃಷಿ ಕ್ಷೇತ್ರದಲ್ಲಿ ಬಹಳ ಆಸಕ್ತಿ ಇದ್ದು, ಸಮಯ ಸರಿಯಾಗಿ ಹೊಂದಿಸಲಾಗದಿದ್ದರೂ ಮನೆಮಂದಿಯ ಸಹಕಾರದಿಂದ ಕೃಷಿ ನಡೆಸುತ್ತಿದ್ದರು. ಇಲಾಖೆಯಿಂದ ನಿವೃತ್ತಿಯಾದ ಅನಂತರ ಅವರು ಸಂಪೂರ್ಣವಾಗಿ ಕೃಷಿ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

ಕಲಾವಿದರೂ ಆಗಿದ್ದರು
ಶಾಲಾ ಹಂತದಿಂದಲೂ ಅವರು ಕಲಾವಿದರೂ ಆಗಿದ್ದರು. ಸುಮಾರು 100ಕ್ಕೂ ಮಿಕ್ಕಿ ನಾಟಕಗಳಲ್ಲಿ ಅವರು ಅಭಿನಯಿಸಿದ್ದರು. ಪೆರ್ನಾಜೆ ಶಾಲೆಯಲ್ಲಿ ಪ್ರದರ್ಶನಗೊಂಡಿದ್ದ “ಬಂಗಾರª ಕೊರಲ್‌’ ನಾಟಕದಲ್ಲಿ ಪಾತ್ರಕ್ಕೆ ಅವರು ಬಹುಮಾನವನ್ನೂ ಪಡೆದುಕೊಂಡಿದ್ದರು.

ಧಾರ್ಮಿಕ ಪೋಷಕರು
ಧಾರ್ಮಿಕ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಅವರು ಸರಿಸುಮಾರು 35 ವರ್ಷಗಳ ಹಿಂದೆ ಮಾಟ್ನೂರಿನಲ್ಲಿ ಗೆಳೆಯರ ಬಳಗವನ್ನು ಸ್ಥಾಪಿಸಿದ್ದರು. ಅಯ್ಯಪ್ಪ ಸ್ವಾಮಿಯ ಭಕ್ತರಾಗಿ, ಗುರುಗಳಾಗಿರುವ ಅವರು 1988ರಲ್ಲಿ ಕೆರೆಮಾರಿನಲ್ಲಿ ಅಯ್ಯಪ್ಪ ಸ್ವಾಮಿ ಭಜನ ಮಂದಿರವನ್ನೂ ಸ್ಥಾಪನೆ ಮಾಡಿದ್ದರು. ಹೀಗೆ ಕೃಷಿಯೊಂದಿಗೆ ಧಾರ್ಮಿಕದತ್ತಲೂ ಅವರು ತನ್ನ ಛಾಪನ್ನು ಮೂಡಿಸಿದ್ದರು.

ಕೃಷಿಯಿಂದಲೂ ಲಾಭದಾಯಕ, ಸಂತೃಪ್ತ ಜೀವನ
ಅಧುನಿಕ ಪದ್ಧತಿ ಭತ್ತದ ಬೇಸಾಯ ಮಾಡುವುದರಿಂದ ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಉಳಿಸಬಹುದು. ಸಣ್ಣ ವಯಸ್ಸಿನಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು ಪರಿಪೂರ್ಣ ಶ್ರಮದ ಫ‌ಲವಾಗಿ ಭತ್ತದ ಬೆಳೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು. ಕೃಷಿಗೆ ಮಾಡದ ವೆಚ್ಚ ಒಂದಲ್ಲ ಒಂದು ವರ್ಷದ ಅಧಿಕ ಇಳುವರಿ ಮೂಲಕ ದ್ವಿಗುಣಗೊಳ್ಳುತ್ತದೆ.ಕೃಷಿಯಿಂದ ಕೂಡ ಲಾಭದಾಯಕವಾಗಿ ಜೀವನ ಸಾಗಿಸಲು ಸಾಧ್ಯ ಎಂಬುದನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕು. ಕೃಷಿ ಜೀವನ ತೃಪ್ತಿಕರವಾಗಿದೆ..
-ಸುಂದರ ಪೂಜಾರಿ
ಪ್ರಗತಿಪರ ಕೃಷಿಕ

ಹೆಸರು: ಸುಂದರ ಪೂಜಾರಿ ಕೆರೆಮಾರು
ಏನೇನು ಕೃಷಿ?: ಭತ್ತ, ಅಡಿಕೆ, ತೆಂಗು
ಎಷ್ಟು ವಯಸ್ಸು: 62
ಕೃಷಿ ಪ್ರದೇಶ: 4 ಎಕ್ರೆ

-ದಿನೇಶ್‌ ಬಡಗನ್ನೂರು

Advertisement

Udayavani is now on Telegram. Click here to join our channel and stay updated with the latest news.

Next