ದಾಸರಹಳ್ಳಿ: ಕೇಂದ್ರದ ಕೃಷಿ ಕಾಯಿದೆಗಳನ್ನು ವಿರೋಧಿಸಿ ದೇಶಾದ್ಯಂತ ರೈತರ ಪ್ರತಿಭಟನೆ ಕಿಚ್ಚು ತಾರಕಕ್ಕೇರಿದೆ. ನಗರದ ಸುಮ್ಮನಹಳ್ಳಿ, ದೊಡ್ಡಗೊಲ್ಲರಹಟ್ಟಿ ಸೇರಿ ಹಲವೆಡೆ ರೈತರ ಪ್ರತಿಭಟನೆ ನಡೆಯಿತು.
ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ಬಳಿ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಸಾವಿರಾರು ರೈತರು ಜಮಾಯಿಸಿದ್ದರು.
ಪೊಲೀಸರು ರೈತರ ವೇಷದಲ್ಲಿ ಹೋರಾಟವನ್ನು ಹತ್ತಿಕ್ಕಲು ಮುಂದಾದರು. ಟ್ರ್ಯಾಕ್ಟರ್‌ನಲ್ಲಿ ಬಂದ ರೈತರನ್ನು ಬಿಐಇಸಿಯಲ್ಲಿ ತಡೆದರು. ಕೇಂದ್ರ ವಲಯ ಐಜಿಪಿ ಚಂದ್ರಶೇಖರ್, ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ.ಚನ್ನಣ್ಣನವರ್, ಉತ್ತರ ವಲಯ ಡಿಸಿಪಿ ಧರ್ಮೇಂದ್ರ ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಿದ್ದು, ಲೆಕ್ಕಿಸದ ರೈತರು ತ್ರಿವರ್ಣ ಧ್ವಜ ಹಿಡಿದು ರಾಷ್ಟ್ರಗೀತೆ ಮೊಳಗಿಸಿ ಗಣರಾಜ್ಯೋತ್ಸವ ಪೆರೇಡ್ ನಡೆಸಿದರು.
ಈ ವೇಳೆ ಮಾತನಾಡಿದ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರೈತರದ್ದು ಬದುಕಿಗಾಗಿ ಹೋರಾಟವೇ ಹೊರತು ಸಿಎಂ ಯಡಿಯೂರಪ್ಪ ಅವರಂತೆ ಅಧಿಕಾರ ಉಳಿಸಿಕೊಳ್ಳುವ ಹಪಾಹಪಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಬೆವರು ಹರಿಸಿ ನಾಡಿಗೆ ಅನ್ನ ನೀಡುತ್ತಿದ್ದಾರೆ. ರೈತರ ಅನ್ನ ತಿಂದು ದ್ರೋಹ ಬಗೆಯಬೇಡಿ. ಅಮೃತದಂಥ ಹಾಲನ್ನು ಸೇವಿಸಿ ವಿಷ ಕಕ್ಕಬೇಡಿ, ರೈತರ ಭೂಮಿ, ಬದುಕು ಹಾಗೂ ನೆಮ್ಮದಿಗೆ ಕೊಳ್ಳಿ ಇಡಬೇಡಿ. ರೈತರ ತಂಟೆಗೆ ಬರಬೇಡಿ ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಹರಿಹಾಯ್ದರು.
ರೈತರ ಬದುಕನ್ನು ಸರ್ವನಾಶ ಮಾಡುವ ಕೃಷಿ ಕಾಯಿದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಗೊಳಿಸಿದ್ದೀರಿ. ಕಾರ್ಪೊರೆಟ್ ಕಂಪನಿಗಳ ಪರವಾದ ನೀತಿಗಳನ್ನು ತಂದಿದ್ದೀರಿ. ರೈತರ ಮಾರುಕಟ್ಟೆಗಳನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಾರಿದ್ದೀರಿ, ರೈತರನ್ನು ಏನು ಮಾಡಲು ಹೊರಟಿದ್ದೀರಿ? ನಮ್ಮದು ಬದುಕಿಗಾಗಿ ಹೋರಾಟ ಅಷ್ಟೇ ಎಂದು ಕಿಡಿಕಾರಿದರು.