Advertisement

ಜೀವ ಬಿಟ್ಟೇವು ಭೂಮಿ ನೀಡಲ : ಹಿರೇಕೆರೂರು –ರಟ್ಟಿಹಳ್ಳಿ ಬಡ ರೈತರ ಆಕ್ರೋಶ

12:25 PM Dec 11, 2020 | sudhir |

ಹಾವೇರಿ: ಜೀವ ಬಿಡುತ್ತೇವೆ ಹೊರತು ಭೂಮಿ ನೀಡಲ್ಲ. ರೈತರಿಂದ ಸ್ವಾ ಧೀನಪಡಿಸಿಕೊಳ್ಳುತ್ತಿರುವ ಜಮೀನುಗಳಲ್ಲಿ ಯಾವುದೇ ಕಾರಣಕ್ಕೂ ಪೈಪ್‌ಲೈನ್‌ ಹಾಕಲು ಬಿಡಲ್ಲ. ಇದು ಹಿರೇಕೆರೂರು-ರಟ್ಟಿಹಳ್ಳಿ ತಾಲೂಕಿನ ನೂರಾರು ಬಡ ರೈತರ ಆಕ್ರೋಶದ ಮಾತುಗಳು…

Advertisement

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ನೂರಾರು ಕೆರೆಗಳನ್ನು ತುಂಬಿಸಲು ನೀರಾವರಿ ಯೋಜನೆಗಾಗಿ ಜಿಲ್ಲೆಯ ಹಿರೇಕೆರೂರು-ರಟ್ಟಿಹಳ್ಳಿ ಭಾಗದ ರೈತರ ಜಮೀನು ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು,
ಕಳೆದ ಒಂದು ವಾರದಿಂದ ಭೂಸ್ವಾಧೀನ ವಿರೋಧಿಸಿ ಸಾಮಾಜಿಕ ಹೋರಾಟಗಾರ, ನ್ಯಾಯವಾದಿ ಬಿ.ಡಿ.ಹಿರೇಮಠ ನೇತೃತ್ವದಲ್ಲಿ ನಡೆಸುತ್ತಿರುವ ಆಮರಣ ಉಪವಾಸ ಸತ್ಯಾಗ್ರಹ ರಾಜ್ಯದ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ:ಅನಧಿಕೃತ ಕಟ್ಟಡ ತೆರವು ಕಾರ್ಯಾಚರಣೆ : ಒತ್ತುವರಿದಾರರಿಗೆ ಎಚ್ಚರಿಕೆ ನೀಡಿದ ಅಧಿಕಾರಿಗಳು

ಏನಿದು ಯೋಜನೆ:
ಉಡುಗಣಿ-ತಾಳಗುಂದ-ಹೊಸೂರು ಏತ ನೀರಾವರಿ ಯೋಜನೆಯಡಿ ಹಿರೇಕೆರೂರು ತಾಲೂಕಿನ ಚಟ್ನಳ್ಳಿ ಸಮೀಪ ತುಂಗಭದ್ರಾ ನದಿಯಿಂದ ಪೈಪ್‌ ಲೈನ್‌ ಮೂಲಕ ನೀರನ್ನು ಶಿಕಾರಿಪುರ ತಾಲೂಕಿನ ನೂರಾರು ಕೆರೆಗಳನ್ನು ತುಂಬಿಸುವ ಯೋಜನೆಯನ್ನು ನೀರಾವರಿ ನಿಗಮದಿಂದ ಅನುಷ್ಠಾನ ಗೊಳಿಸಲಾಗುತ್ತಿದೆ. ಯೋಜನೆಯನ್ನು ಏಳು ಹಂತಗಳಲ್ಲಿ ನಡೆಸಲಾಗುತ್ತಿದ್ದು, ಮುಖ್ಯಮಂತ್ರಿಗಳ ಯಡಿಯೂಪ್ಪನವರ ತವರು ಕ್ಷೇತ್ರವಾಗಿದ್ದರಿಂದ ಸರ್ಕಾರ ಈ ಯೋಜನೆಗೆ ಹೆಚ್ಚಿನ ಆಸಕ್ತಿ ವಹಿಸಿ
ಪೈಪ್‌ಲೈನ್‌ ಕಾಮಗಾರಿಯೂ ಆರಂಭಗೊಂಡಿದೆ.

ಏಳನೇ ಹಂತವಾಗಿ ಚಟ್ನಳ್ಳಿ ಸಮೀಪ ಪೈಪ್‌ಲೈನ್‌ ಹಾಕುವ ಕಾರ್ಯ ಆರಂಭಿಸಲಾಗಿದೆ. ಆದರೆ ಈ ಯೋಜನೆಗೆ ಬಡ ರೈತರ ಜಮೀನುಗಳನ್ನು ಭೂಸ್ವಾಧೀನ ಮಾಡಿಕೊಳ್ಳುತ್ತಿರುವುಕ್ಕೆ ವಿರೋಧ ವ್ಯಕ್ತಪಡಿಸಿ ನ್ಯಾಯವಾದಿ ಬಿ.ಡಿ.ಹಿರೇಮಠ ಅವರು ಒಂದು
ವಾರದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

Advertisement

ರೈತರ ವಿರೋಧಕ್ಕೆ ಕಾರಣ: ಈ ಯೋಜನೆಗಾಗಿ ರಟ್ಟಿಹಳ್ಳಿ ಮತ್ತು ಹಿರೇಕೆರೂರು ತಾಲೂಕುಗಳ 18 ಗ್ರಾಮಗಳ 1292 ರೈತರ ಜಮೀನು ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಸುಮಾರು 18 ಕಿಲೋ ಮೀಟರ್‌ವರೆಗೆ 5 ಅಡಿ ವ್ಯಾಸದ ಪೈಪ್‌ ಲೈನ್‌ ಅಳವಡಿಸುವ ಕಾಮಗಾರಿ ಆರಂಭವಾಗಿದೆ. ಜೊತೆಗೆ ಪೈಪ್‌ಲೈನ್‌ಗುಂಟ 30 ಅಡಿ ಸರ್ವೀಸ್‌ ರಸ್ತೆ ಮಾಡಲಾಗುತ್ತಿದೆ. ಇದರಿಂದ 500ಕ್ಕೂ ಹೆಚ್ಚು
ಎಕರೆ ಫಲವತ್ತಾದ ಜಮೀನು ಹೋಗಲಿದೆ. ಈ ಹಿಂದೆ ತುಂಗಾ ಮೇಲ್ದಂಡೆ ಯೋಜನೆಗಾಗಿ ಸಾವಿರಾರು ರೈತರು ಭೂಮಿ ಕಳೆದುಕೊಂಡಿದ್ದಾರೆ. ಆದರೆ, ಈವರೆಗೆ ಅನೇಕ ರೈತರಿಗೆ ಪರಿಹಾರ ಸಿಕ್ಕಿಲ್ಲ. ಹೀಗಿರುವಾಗ ಮತ್ತೂಂದು ಯೋಜನೆಗೆ ಜಮೀನು
ವಶಪಡಿಸಿಕೊಂಡರೆ ಸಾವಿರಾರು ಕುಟುಂಬಗಳು ಬೀದಿಗೆ ಬರಲಿವೆ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ. ಈ ಹಿನ್ನೆಲೆ ಒಂದು ವಾರದಿಂದ ಬಿ.ಡಿ.ಹಿರೇಮಠ ನೇತೃತ್ವದಲ್ಲಿ ರೈತರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ತೀವ್ರಗೊಂಡ ಹೋರಾಟ: ಬಡ ರೈತರ ಜಮೀನು ಭೂಸ್ವಾಧೀನ ವಿರೋಧಿಸಿ ಕಳೆದ ಒಂದು ವಾರದಿಂದ ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದಿದೆ. ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಬಿ.ಡಿ.ಹಿರೇಮಠ ಅವರ ಮನವೊಲಿಸುವಲ್ಲಿ
ಜಿಲ್ಲಾಡಳಿತ ವಿಫಲಗೊಂಡಿದೆ. ಪ್ರಾಣ ಹೋದರೂ ರೈತರ ಜಮೀನುಗಳ ಭೂಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹಿರೇಮಠ ಪಟ್ಟು ಹಿಡಿದಿದ್ದಾರೆ. ಅಲ್ಲದೇ, ಈ ಯೋಜನೆಯಿಂದ ಜಿಲ್ಲೆಯಲ್ಲಿ ಭವಿಷ್ಯದ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಆತಂಕ ರೈತರನ್ನು ಕಾಡುತ್ತಿದ್ದು, ಭೂಸ್ವಾಧೀನದೊಂದಿಗೆ ಯೋಜನೆಯನ್ನೇ ಸ್ಥಗಿತಗೊಳಿಸಬೇಕು ಎಂಬ
ಒತ್ತಾಯವೂ ರೈತರಿಂದ ಕೇಳಿಬುತ್ತಿದೆ.

– ವೀರೇಶ ಮಡ್ಲುರು

Advertisement

Udayavani is now on Telegram. Click here to join our channel and stay updated with the latest news.

Next