Advertisement

ಮೋದಿ ಸರಕಾರದಿಂದ ರೈತಪರ ಯೋಜನೆ

02:02 AM Apr 09, 2019 | Team Udayavani |

ತೆಂಕಿಲ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ರೈತರ ಪರ ಕಾಳಜಿಯನ್ನು ಹೊಂದಿದ್ದು, ಕೃಷಿ ಕ್ಷೇತ್ರದ ಬೆಳವಣಿಗೆಗಾಗಿ ನಿರಂತರ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಭಾನುಪ್ರಕಾಶ್‌ ಹೇಳಿದರು.

Advertisement

ಅವರು ಸೋಮವಾರ ತೆಂಕಿಲದಲ್ಲಿರುವ ಒಕ್ಕಲಿಗ ಗೌಡ ಸಭಾ ಭವನದಲ್ಲಿ ಬಿಜೆಪಿ ಪುತ್ತೂರು ಮಂಡಲ ಸಮಿತಿಯಿಂದ ಆಯೋಜಿಸಲಾಗಿದ್ದ ರೈತರೊಂದಿಗೆ ಸಂವಾದದಲ್ಲಿ ಮಾತನಾಡಿದರು. ಸ್ವತಂತ್ರ ಭಾರತದಲ್ಲಿ ಬ್ರಿಟಿಷರು ಬಿಟ್ಟು ಹೋದ ಕೆಲವು ವಿಚಾರಗಳನ್ನು ರೈತರ ಮೇಲೆ ಹೇರುವ ಕೆಲಸ ನಡೆಯುತ್ತಿತ್ತು. ಸ್ವಾತಂತ್ರ್ಯಾನಂತರದ ಕಾಂಗ್ರೆಸ್‌ ಸರಕಾರ ಕೃಷಿಯನ್ನು ಬದಿಗೊತ್ತಿ ಕೈಗಾರಿಕೆಗೆ ಹೆಚ್ಚು ಪ್ರಾಶಸ್ತ ನೀಡಿತ್ತು. ಆದರೆ ನರೇಂದ್ರ ಮೋದಿ ಸರಕಾರ ನಿರ್ದಿಷ್ಟ ಗುರಿ ಇರಿಸಿಕೊಂಡು ಈ ದೇಶದ ಕೋಟ್ಯಂತರ ಅನ್ನದಾತರ ಪರ ಕೆಲಸ ಮಾಡಿದೆ. ಮುಂದೆ ಇದನ್ನು ವಿಸ್ತರಿಸಲಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಸರಕಾರ ಬಿದಿರು ಬೆಳೆಗೆ ಮತ್ತು ಬಿದಿರು ಆಧಾರಿತ ಉತ್ಪನ್ನಗಳಿಗೆ ಬೆಂಬಲವಾಗಿ ರೈತರಿಗೆ ಯೋಜನೆಯನ್ನು ಜಾರಿಗೆ ತಂದಿದೆ. ದೇಶದ ಶೇ. 87ರಷ್ಟು ರೈತರಿಗೆ ಕೃಷಿಕ ಸಮ್ಮಾನ್‌ ನಿಧಿ ಜಾರಿಗೊಳಿಸಿದೆ. ಕೃಷಿಗೆ ಸಂಬಂಧಿಸಿದ ಸರ್ದಾರ್‌ ಸರೋವರ್‌ ಸಹಿತ 99 ನೀರಿನ ಯೋಜನೆಗಳನ್ನು ಮೋದಿ ಸರಕಾರ ಜಾರಿಗೆ ತಂದಿದೆ ಎಂದರು.

ದೇಶದ ಕೃಷಿ ಕ್ಷೇತ್ರ ಸಹಿತ ಸಮಗ್ರ ಅಭಿವೃದ್ಧಿ, ಹಗರಣ ರಹಿತ ಆಡಳಿತ, ಆಂತರಿಕ ಭದ್ರತೆ, ಅಂತಾರಾಷ್ಟ್ರೀಯ ಮಟ್ಟದ ರಾಜತಾಂತ್ರಿಕತೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ದೇಶಕ್ಕೆ ಒಳಿತನ್ನು ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮತ್ತೂಮ್ಮೆ ಪ್ರಧಾನಿಯಾಗಲು ರೈತ ವರ್ಗ ಬೆಂಬಲ ನೀಡಬೇಕು ಎಂದು ವಿನಂತಿಸಿದರು.

ಸಂವಾದದಲ್ಲಿ ಸಹಕಾರ ಭಾರತೀಯ ದಕ್ಷಿಣ ಭಾರತ ಸಂಚಾಲಕ ಕೊಂಕೋಡಿ ಪದ್ಮನಾಭ, ನಿವೃತ್ತ ಮೆಸ್ಕಾಂ ಕಾರ್ಯಪಾಲಕ ಎಂಜಿನಿಯರ್‌ ಬಾಲಕೃಷ್ಣ ಭಟ್‌, ಗೇರು ಕೃಷಿಕ ಕಡಮಜಲು ಸುಭಾಷ್‌ ರೈ ಸಹಿತ ಹಲವು ಕೃಷಿಕರು ಪಾಲ್ಗೊಂಡರು.

Advertisement

ವೇದಿಕೆಯಲ್ಲಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ರೈತ ಮೋರ್ಚಾ ದ.ಕ. ಜಿಲ್ಲಾಧ್ಯಕ್ಷ ರಾಜೀವ ಭಂಡಾರಿ, ದ.ಕ.ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಬಿಜೆಪಿ ಅಧ್ಯಕ್ಷ ಕೆ. ಜೀವಂಧರ ಜೈನ್‌ ಉಪಸ್ಥಿತರಿದ್ದರು. ಮಂಡಲ ಬಿಜೆಪಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುಯಿಲ ಕೇಶವ ಗೌಡ ಸ್ವಾಗತಿಸಿ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next