ಬಸವಕಲ್ಯಾಣ: ಜಿಲ್ಲೆಯ ರೈತರ ಸಮಸ್ಯೆ ಬಗೆಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಮತ್ತು ತಾಲೂಕು ಘಟಕದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಪ್ರತಿವರ್ಷ ಒಂದಿಲ್ಲೊಂದು ಸಮಸ್ಯೆಗಳಿಗೆ ರೈತರು ತುತ್ತಾಗಿ ಬಲಿಯಾಗುತ್ತಿದ್ದಾರೆ. ಈ ವರ್ಷವೂ ಅತಿವೃಷ್ಟಿಯಿಂದ ಉದ್ದು, ಹೆಸರು, ಸೋಯಾ, ತೊಗರಿ ಇನ್ನಿತರೆ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ರೈತ ಮತ್ತೆ ಸಂಕಷ್ಟದಲ್ಲಿ ಬೀಳುವಂತೆ ಮಾಡಿದೆ ಎಂದರು.
ಬಿಎಸ್‌ಎಸ್‌ಕೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರ ಬಿಲ್ ಪಾವತಿಗಾಗಿ ಸರ್ಕಾರಿಂದ 20 ಕೋಟಿ ರೂ. ಅನುದಾನ ಕೊಟ್ಟು ರೈತರ ಹಿತ ಕಾಪಾಡಬೇಕು. ಮುಂದಿನ ಹಂಗಾಮಿನಲ್ಲಿ ಕಾರ್ಖಾನೆ ಲೀಸ್‌ನಲ್ಲಿ ಕೊಡುವ ವ್ಯವಸ್ಥೆ ಮಾಡಬೇಕು. ತೆಲಂಗಾಣ ಮಾದರಿಯಲ್ಲಿ ಜಿಲ್ಲೆಯ ರೈತರಿಗೆ ಪ್ರತಿ ಎಕರೆಗೆ 10 ಸಾವಿರ ರೂ. ಪ್ರೋತ್ಸಾಹಧನ ಕೊಡಬೇಕು. ಬೀದರ ಜಿಲ್ಲೆ ರೈತರಿಗೆ 24 ಗಂಟೆ ಕೃಷಿ ಪಂಪ್‌ಸೆಟ್ ಗಳಿಗೆ ಉಚಿತ ವಿದ್ಯುತ್ ಪೂರೈಸಬೇಕು. ಬೆಳೆ ವಿಮೆ ರೈತರ ಖಾತೆಗೆ ಜಮೆ ಮಾಡಬೇಕು. ಗೋದಾವರಿ ಬೇಸ್ (ಬಚಾವತ್ ಆಯೋಗ) ಪ್ರಕಾರ ಬೀದರ ಜಿಲ್ಲೆಯ ರೈತರಿಗೆ 23 ಟಿಎಂಸಿ ನೀರು ಉಪಯೋಗ ಆಗುವಂತೆ ಕ್ರಮ ಕೈಗೊಳ್ಳಬೇಕು. ಎಲ್ಲ ರೈತರ ಭೂಮಿ ಸರ್ಕಾರದಿಂದಲೇ ಸಮಗ್ರ ಭೂ ಮಾಪನ ಮಾಡಬೇಕು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ಬೆಳೆಸಿದ ತರಕಾರಿಗಳಿಗೆ ದಲ್ಲಾಳಿಗಳು ರೈತರಿಂದ ಶೇ. 10ರಂತೆ ಕಮಿಷನ್ ವಸೂಲಿ ಮಾಡುತಿದ್ದು, ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಸಿದ್ರಾಮಪ್ಪಾ ಆಣದೊರೆ, ಉಪಾಧ್ಯಕ್ಷ ಚಂದ್ರಶೇಖರ ಜಮಖಂಡಿ, ಶ್ರೀಮಂತ ಬಿರಾದಾರ, ದಯಾನಂದ ಸ್ವಾಮಿ, ಸುಭಾಷ ರಗಟೆ, ಬಾಬುರಾವ್ ಜೋಳ ಬಾಬಕೆ, ಪ್ರವೀಣ ಕುಲಕರ್ಣಿ, ಮನೋಹರರಾವ್ ಪಾಟೀಲ, ಮಹಾದೇವ ರೆಡ್ಡಿ ಮತ್ತಿತರರು ಇದ್ದರು.