ಕೋಲಾರ: ಜಿಲ್ಲೆಯ ಜನರ ಪ್ರಮುಖ ಆಹಾರ, ಬೆಳೆ ರಾಗಿ. ಮಳೆ ಕೊರತೆಯ ನಡುವೆಯೂ ರೈತರು ಈ ಬಾರಿ ಭರ್ಜರಿ ಫಸಲು ನಿರೀಕ್ಷಿಸುತ್ತಿದ್ದಾರೆ. ರಾಗಿ ಕಲ್ಲು ಬೀಸುತ್ತಿದ್ದರೆ ಊರೆಲ್ಲಾ ನೆಂಟರು ಎಂಬ ಗಾದೆ ಜಿಲ್ಲೆಯಲ್ಲಿ ಪ್ರಚಲಿತದಲ್ಲಿದೆ. ರೈತರು ರಾಗಿ ಬೆಳೆದು ಮನೆಗಳಲ್ಲಿ ದಾಸ್ತಾನು ಮಾಡಿಕೊಂಡರೆ ವರ್ಷಪೂರ್ತಿ ಆಹಾರಕ್ಕೆ ಕೊರತೆಯಾಗದು ಎಂಬ ಭಾವನೆ ಇದೆ.
ಇತ್ತೀಚಿನ ವರ್ಷಗಳಲ್ಲಿ ಮಳೆ ಕೊರತೆಯಿಂದ ರಾಗಿ ಬೆಳೆಯಲಾಗದೇ ರೈತರೇ ಖರೀದಿ ಮಾಡಿ ತಿನ್ನಬೇಕಾದ ಪರಿಸ್ಥಿತಿ ಬಂದಿತ್ತು. 2017ರಲ್ಲಿ ಜಿಲ್ಲೆಯಲ್ಲಿ ಸಮಾಧಾನಕರವಾಗಿ ಮಳೆ ಸುರಿಯಿತಾದರೂ ಕೊಯ್ಲಿನ ಸಂದರ್ಭದಲ್ಲಿ ಜಡಿ ಮಳೆ ಬಂದಿದ್ದರಿಂದ ರಾಗಿ ನೆಲ ಕಚ್ಚುವಂತಾಯಿತು. 2018ರಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ರಾಗಿ ತೆನೆ ಬಿಡುವ ಹಂತದಲ್ಲಿಯೇ ಒಣಗಿತ್ತು. ಕೇವಲ ರಾಸುಗಳ ಮೇವು ಆಗಿತ್ತು. ಆದರೆ, ಈ ಸಾಲಿನಲ್ಲಿ ರಾಗಿ ರೈತರ ಕೈ ಸುಟ್ಟಿಲ್ಲ ಎನ್ನುವುದೇ ಸಮಾಧಾನ.
60 ಸಾವಿರ ಹೆಕ್ಟೇರ್‌ನಲ್ಲಿ ರಾಗಿ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ 1.02 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿತ್ತು. ಈ ಗುರಿಯ ಅರ್ಧದಷ್ಟು ಅಂದರೆ 60,693 ಹೆಕ್ಟೇರ್‌ನಲ್ಲಿ ರಾಗಿ ಬೆಳೆ ಬಿತ್ತನೆಯಾಗಿದೆ. ಆಶ್ಚರ್ಯವೆಂದರೆ ಇಷ್ಟೂ ಪ್ರದೇಶದಲ್ಲಿ ಶೇ.70 ಕ್ಕಿಂತಲೂ ಹೆಚ್ಚಿನ ಫಸಲನ್ನು ರೈತರು ನಿರೀಕ್ಷಿಸುತ್ತಿದ್ದಾರೆ. ಒಟ್ಟು 60,693 ಹೆಕ್ಟೇರ್ ರಾಗಿ ಬಿತ್ತನೆ ಪ್ರದೇಶದ ಪೈಕಿ 965 ಹೆಕ್ಟೇರ್ ರಾಗಿ ನೀರಾವರಿ ಆಶ್ರಯದಲ್ಲಿ ಮತ್ತು 59,728 ಹೆಕ್ಟೇರ್ ರಾಗಿ ಮಳೆಯಾಶ್ರಿತವಾಗಿಯೂ ಬೆಳೆಯಲಾಗುತ್ತಿದೆ.
1.20 ಲಕ್ಷ ಕ್ವಿಂಟಲ್ ಫಸಲು ನಿರೀಕ್ಷೆ: ನೀರಾವರಿ ಪ್ರದೇಶದಲ್ಲಿ ರಾಗಿ ಪ್ರತಿ ಎಕರೆಗೆ 6 ರಿಂದ 8 ಕ್ವಿಂಟಲ್ ನಿರೀಕ್ಷಿಸಬಹುದು. ಅದೇರೀತಿ ಖುಷ್ಕಿಯಲ್ಲಿ 10 ರಿಂದ 12 ಕ್ವಿಂಟಲ್ ರಾಗಿ ನಿರೀಕ್ಷಿಸಬಹುದಾಗಿದೆ. ಸರಾಸರಿ ಆಧಾರದ ಮೇಲೆ ಪ್ರತಿ ಹೆಕ್ಟೇರ್‌ನಿಂದ ಕನಿಷ್ಠ 20 ಕ್ವಿಂಟಲ್ ನಿರೀಕ್ಷೆ ಇಟ್ಟುಕೊಂಡರೂ ಜಿಲ್ಲೆಯಲ್ಲಿ ಈ ಬಾರಿ 1.20 ಲಕ್ಷ ಕ್ವಿಂಟಲ್ ರಾಗಿ ಬೆಳೆ ಕೈಸೇರುವ ಸಾಧ್ಯತೆ ಇದೆ.
ಪ್ರತಿ ಕ್ವಿಂಟಲ್‌ಗೆ 3 ಸಾವಿರ ರೂ. ಧಾರಣೆ: ಸದ್ಯಕ್ಕೆ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ರಾಗಿ 3 ಸಾವಿರ ರೂ.ಗೆ ಮಾರಾಟವಾಗುತ್ತಿದೆ. ಈ ಬಾರಿ ಭರ್ಜರಿ ಫಸಲು ನಿರೀಕ್ಷಿಸುತ್ತಿರುವುದರಿಂದ ಅಷ್ಟೂ ಪ್ರಮಾಣದ ರಾಗಿ ರೈತರ ಕೈ ಸೇರಿದರೆ ರಾಗಿ ಮಾರಾಟದ ಬೆಲೆಯಲ್ಲಿ 200 ರಿಂದ 500 ರೂ. ಕಡಿಮೆಯಾಗುವ ಸಾಧ್ಯತೆಯೂ ಇದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಎರಡಕ್ಕೂ ಚಿಂತಾಮಣಿ ಅತ್ಯುತ್ತಮ ರಾಗಿ ಮಾರುಕಟ್ಟೆಯಾಗಿದೆ. ಇಲ್ಲಿ ವೈವಿಧ್ಯಮಯ ರಾಗಿ ಮಾರಾಟಕ್ಕೆ ಸಿಗುತ್ತದೆ. ರೈತರು ಸಹ ಚಿಂತಾಮಣಿ ತೆರಳಿ ತಮ್ಮ ರಾಗಿ ಮಾರಾಟ ಮಾಡಿದರೆ ಹೆಚ್ಚಿನ ಧಾರಣೆ ಸಿಗುತ್ತದೆ ಎಂದು ನಂಬಿದ್ದಾರೆ.
ಶೇ.70 ಫಸಲು ಗ್ಯಾರಂಟಿ: ಜಿಲ್ಲೆಯಲ್ಲಿ ಭರ್ಜರಿ ರಾಗಿ ಫಸಲು ನಿರೀಕ್ಷಿಸುತ್ತಿದ್ದರೂ, ಇತ್ತೀಚಿಗೆ ಕೆಲವು ದಿನಗಳ ಹಿಂದಷ್ಟೇ ಮೂರು ದಿನಗಳ ಕಾಲ ದೀಪಾವಳಿ ಜಡಿ ಮಳೆ ಸುರಿದಿತ್ತು. ಈ ಮಳೆಯಿಂದಾಗಿ ಮೊದಲೇ ಬಿತ್ತನೆಯಾಗಿ ತೆನೆ ಬಿಟ್ಟಿದ್ದ ರಾಗಿ ಬೆಳೆ ನೆಲಕಚು ವಂತಾಗಿದೆ. ಸಕಾಲದಲ್ಲಿ ರಾಗಿ ಬೆಳೆ ಕೊಯ್ಲಿಗೆ ಕೂಲಿಯಾಳುಗಳ ಸಮಸ್ಯೆಯೂ ತಲೆದೋರಿದೆ. ಇವೆಲ್ಲಾ ಕಾರಣಗಳಿಂದ ರೈತರು ನಿರೀಕ್ಷಿಸಿದ ಪೂರ್ಣ ಪ್ರಮಾಣದಲ್ಲಿ ಇಲ್ಲವಾದರೂ, ಶೇ.70 ಫಸಲಾದರೂ ಮನೆ ಸೇರಲಿದೆ ಎಂಬುದು ಖಚಿತವಾಗಿದೆ.
ರಾಸುಗಳಿಗೆ ಮೇವು: ಜಿಲ್ಲೆಯ ರೈತರು ರಾಗಿ ಬೆಳೆ ಸಮೃದ್ಧವಾಗಿ ಬೆಳೆದರೆ ರಾಸುಗಳ ಮೇವಿಗೂ ಕೊರತೆ ಇರುವುದಿಲ್ಲ. ಹಿಂದಿನ ವರ್ಷಗಳಲ್ಲಿ ಹೈನೋದ್ಯಮಕ್ಕೆ ತೊಂದರೆಯಾಗದಂತೆ ರೈತರು ಪ್ರತ್ಯೇಕವಾಗಿ ಮೇವಿನ ಕಿಟ್‌ಗಳ ಮೂಲಕ ರಾಸುಗಳಿಗೆ ಮೇವು ಬೆಳೆದುಕೊಳ್ಳಬೇಕಾಗಿತ್ತು. ಆದರೆ, ಈ ಬಾರಿ ರಾಗಿ ಫಸಲು ಚೆನ್ನಾಗಿ ಬಂದಿರುವುದಿಂದ ರಾಸುಗಳ ಮೇವಿಗೂ ಮುಂದಿನ ಬೇಸಿಗೆಯವರೆಗೂ ಕೊರತೆಯಾಗುವುದಿಲ್ಲ.
-ಕೆ.ಎಸ್.ಗಣೇಶ್