ವಿಜಯಪುರ: ತಮ್ಮ ಭಾಗದ ರೈತರ ಬರಡು ಜಮೀನಿಗೆ ನೀರು ಹರಿಸಿ, ಸಮೃದ್ಧ ಜೀವನ ನಿರ್ವಹಣೆಗೆ ನೆರವಾದ ಶಾಸಕ ಎಂ.ಬಿ.ಪಾಟೀಲ ಅವರಿಗೆ ರೈತರೊಬ್ಬರು ತಾವು ಬೆಳೆದ ಸೀಬೆ ಹಣ್ಣುಗಳ ಮೊದಲ ಫಲವನ್ನು ನೀಡಿ ಕೃತಜ್ಞತೆ ಸಲ್ಲಿಸಿದರು.
ಗುರುವಾರ ಭೂಕಂಪ ಬಾಧಿತ ತಮ್ಮ ಕ್ಷೇತ್ರದ ಹಳ್ಳಿಗಳಿಗೆ ಶಾಸಕ ಎಂಬ.ಬಿ.ಪಾಟೀಲ ಭೇಟಿ ನೀಡಿ ಜನರಿಗೆ ಸಾಂತ್ವನ ಹೇಳುತ್ತಿದ್ದರು. ಈ ಹಂದಲ್ಲಿ ಮಾರ್ಗ ಮಧ್ಯೆ ಮಲಕನದೇವರಹಟ್ಟಿಯ ಪ್ರಗತಿಪರ ರೈತ ರಮೇಶ ಜಂಬಗಿ ಅವರೆ ತೋಟಕ್ಕೆ ಭೇಟಿ ನೀಡಿದರು.
ನಮ್ಮ ಭಾಗದಲ್ಲಿ ತಲೆ ಮಾರುಗಳಿಂದಲೇ ಮಳೆಗಾಲದಲ್ಲೂ ಕುಡಿಯುವ ನೀರಿನ ದುಸ್ಥಿತಿ ಇತ್ತು. ಹೀಗಾಗಿ ನೀರಿನ ಭವಣೆಯಿಂದ ಬಸವಳಿದಿದ್ದ ನಮಗೆ ನಮ್ಮ ಭಾಗದ ಶಾಸಕರಾಗಿ, ಜಲಸಂಪನ್ಮೂಲ ಸಚಿವರಾಗಿದ್ದ ನೀವು ಭಗೀರಥರಂತೆ ಕೆಲಸ ಮಾಡಿದಿರಿ. ನಮ್ಮ ಕಷ್ಟ ಅರಿತ ನೀವು, ಏನೆಲ್ಲ ಟೀಕೆಗಳನ್ನು ಮೀರಿ ಬರಡು ಭೂಮಿಗೆ ನೀರು ಕೊಟ್ಟಿದ್ದೀರಿ, ನಿಮಗೆ ನಮ್ಮ ಭಾಗದ ಜನರು ಸದಾ ಚಿರರುಣಿ ಎಂದು ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.
ನಿಮ್ಮ ರಾಜಕೀಯ ಇಚ್ಛಾಶಕ್ತಿಯ ಕಾರಣದಿಂದಲೇ ನಮ್ಮ ಜಮೀನಿಗೆ ನೀರು ಹರಿದಿದೆ. ಪರಿಣಾಮ ವೈವಿಧ್ಯಮಯ ತೋಟಗಾರಿಕೆ ಬೆಳೆಗಳ ಫಲ ಬೆಳೆಯಲು ಸಾಧ್ಯವಾಗಿದೆ. ನಮಗೆ ನೀರು ಕೊಟ್ಟ ನಿಮಗೆ ನಾವು ನಮ್ಮ ಪರಿಶ್ರಮದ ಪ್ರಥಮ ಫಲವನ್ನು ನಿಮಗೆ ಅರ್ಪಣೆ ಮಾಡಿ, ಬೋಣಿಗೆ ಮಾಡುತ್ತಿದ್ದೇವೆ ಎಂದು ಸಂತೃಪ್ತಿ ವ್ಯಕ್ತಪಡಿಸಿದರು.
ನೀರಿಲ್ಲದೇ ಕಂಗೆಟ್ಟಿದ್ದ ನಾವು ಕೊಳವೆ ಭಾವಿ ಕೊರೆಸಿದರೂ ಸಾವಿರ ಅಡಿ ಆಳಕ್ಕೆ ಭೂಮಿಉ ಅಗೆದರೂ ಹನಿ ನೀರು ಸಿಗುತ್ತಿರಲಿಲ್ಲ. ಒಕ್ಕಲುತನವೇ ಬೇಡ ಎಂದು ಹತಾಷರಾಗಿ ಕುಳಿತಿದ್ದಾಗ ನೀವು ತುಬಚಿ-ಬಬಲೇಶ್ವರ ಯೋಜನೆ ರೂಪಿಸಿದಿರಿ. ರೂಪಿಸಿದ ಯೋಜನೆಯನ್ನು ನಿಮ್ಮ ಅವಧಿಯಲ್ಲೇ ಪೂರ್ಣಗೊಳಿಸಿದ್ದರಿಂದ ನಮ್ಮ ಭಾಗದ ಬರಡು ಭೂಮಿಗೆ ನೀರು ಹರಿಯಿತು. ಬತ್ತಿದ ಭಾವಿಗಳು, ಕೊಳವೆ ಭಾವಿಗಳು ಹೆಚ್ಚಿದ ಅಂತರ್ಜಲದಿಂದಾಗಿ ಮರು ಜೀವ ಪಡೆಯುವ ಮೂಲಕ ನಮ್ಮ ಬದುಕಿಗೆ ಭರವಸೆ ಮೂಡಿಸಿದವು ಎಂದು ಭಾವುಕರಾದರು.
ನೀರಿಲ್ಲದೇ ಕೃಷಿಯನ್ನೇ ನಂಬಿ ಕಂಗೆಟ್ಟಿದ್ದ ನಮಗೆ ಇದೀಗ ಮಾದರಿ ಕೃಷಿ ಮಾಡುವ ಅವಕಾಶ ಲಭ್ಯವಾಗಿದೆ. ಇದೀಗ ನಾನು ಅದೇ ಮೂರು ಬೋರವೆಲ್‍ಗಳ ಸಹಾಯದಿಂದ 6 ಎಕರೆ ಪ್ರದೇಶದಲ್ಲಿ ವೈವಿಧ್ಯಮಯ ಕೃಷಿ, ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದೇವೆ. 3 ಎಕರೆ ದ್ರಾಕ್ಷಿ, 2 ಎಕರೆ ಪೇರಲ ಹಣ್ಣು ಹಾಗೂ ಗೋಲ್ಡನ್ ಸಿತಾಫಲ ಬೇಳೆಯುತ್ತಿದ್ದೇನೆ. ನಿಸ್ತೇಜವಾಗಿದ್ದ ನಮ್ಮ ಬಾಳಲ್ಲಿ ಭರವಸೆಯ ಬೆಳಕು ನೀಡಿದ ನೀವೇ ನಮ್ಮ ಪಾಲಿನ ದೇವರು ಎಂದು ಹೊಗಳಿದರು.