Advertisement

ಕೋವಿಡ್ ಗೆ ಸೆಡ್ಡು ಹೊಡೆದ ಓಬಳಬಂಡಿಯ ರೈತ ಭರಮಪ್ಪ ಕುರಿ

02:13 PM May 02, 2021 | Team Udayavani |

ಗಂಗಾವತಿ: ಕೋವಿಡ್-19 ಮಹಾಮಾರಿ ಪ್ರತಿಯೊಬ್ಬರನ್ನು ಹೈರಾಣ ಮಾಡಿದೆ. ಹಲವು ನಿರೀಕ್ಷೆಗಳನ್ನಿಟ್ಟುಕೊಂಡು ಕಲ್ಲಂಗಡಿ ಬೆಳೆದ ರೈತನೋರ್ವ ಕರ್ಪ್ಯೂನಿಂದಾಗಿ ಲಕ್ಷಾಂತರ ರೂ.ಖರ್ಚು ಮಾಡಿ ಬೆಳೆದ ಹಣ್ಣನ್ನು ಬೀದಿಗೆ ಚೆಲ್ಲದೇ ಅಗತ್ಯ ಪರವಾನಿಗೆಯೊಂದಿಗೆ ತಮ್ಮ‌ ಟ್ರಾಕ್ಟರ್ ನಲ್ಲಿ ಮಾರಿದ್ದಾರೆ. ಟ್ರಾಕ್ಟರ್ ನಲ್ಲಿ ಕಲ್ಲಂಗಡಿ ಹಣ್ಣನ್ನು ಸಮೀಪದ ನಗರ ಪ್ರದೇಶಗಳಲ್ಲಿ ಬೆಳ್ಳಿಗ್ಗೆ 6-10 ಗಂಟೆಯ ಒಳಗೆ ಮಾರಾಟ ಮಾಡಿ ಸಂಭವನೀಯ ನಷ್ಟದಿಂದ ಪಾರಾಗಿ‌ ಕೋವಿಡ್ ಗೆ ಸೆಡ್ಡು ಹೊಡೆದು‌ ಇತರರಿಗೆ ಮಾದರಿಯಾಗಿದ್ದಾರೆ.

Advertisement

ಕನಕಗಿರಿ ತಾಲೂಕಿನ ಓಬಳಬಂಡಿ ಗ್ರಾಮದ ಭರಮಪ್ಪ ಕುರಿ ಎಂಬ ರೈತ ಈ‌ ಬಾರಿ‌ ಬೇಸಿಗೆ ಮತ್ತು ರಂಜಾನ್ ಹಬ್ಬವನ್ನು ದೃಷ್ಟಿಯಲ್ಲಿಟ್ಟುಕೊಂಡು ನಾಲ್ಕು ಎಕರೆ ಭೂಮಿಯಲ್ಲಿ ಕಲ್ಲಂಗಡಿ ಹಣ್ಣನ್ನು ಬೆಳೆದಿದ್ದರು. ಹಣ್ಣಿನ ವ್ಯಾಪಾರಿಗಳು ಹೊಲಕ್ಕೆ ಬಂದು‌ ಹಣ್ಣಿನ‌ ವ್ಯಾಪಾರ ಮುಗಿಸಿದ ಮರುದಿನವೇ ಕೋವಿಡ್ ಕರ್ಪ್ಯೂ ಘೋಷಣೆ ಮಾಡಿದ್ದರಿಂದ ಕಲ್ಲಂಗಡಿ ಹಣ್ಣನ್ನು ಖರೀದಿಸಲು ವ್ಯಾಪಾರಿಗಳು ಮುಂದೆ ಬರಲಿಲ್ಲ. ನಾಲ್ಕು ಎಕರೆಯಲ್ಲಿ ಕಲ್ಲಂಗಡಿ ಬೆಳೆಯಲು ರೈತ ಭರಮಪ್ಪ ಕುರಿ ಸುಮಾರು1.50 ಲಕ್ಷ ರೂ. ಖರ್ಚು ಮಾಡಿದ್ದರು. ಇದನ್ನು ಹೇಗಾದರೂ ಮಾಡಿ ಹಿಂಪಡೆಯಬೇಕೆಂದು ಯೋಚಿಸಿ ಜಿಲ್ಲಾ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಂದ ಪರವಾನಿಗೆ ಪಡೆದು ಗಂಗಾವತಿ, ಕೊಪ್ಪಳ, ಕನಕಗಿರಿ ಸೇರಿ ಸುತ್ತಮುತ್ತಲಿನ ಊರುಗಳಿಗೆ ಟ್ರಾಕ್ಟರ್ ನಲ್ಲಿ ಕಲ್ಲಂಗಡಿ ಹಣ್ಣನ್ನು ಹಾಕಿಕೊಂಡು ಭರಮಪ್ಪ ಕುರಿ ಹಾಗೂ ಕುಟುಂಬದವರು ಮಾರಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ:ಮಸ್ಕಿ ಉಪ ಕದನ : ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿನಹಾಳ

ಈಗಾಗಲೇ 60 ಸಾವಿರ ರೂ.ಗಳಷ್ಟು ಮೌಲ್ಯದ ಕಲ್ಲಂಗಡಿಯನ್ನು ಮಾರಿದ್ದು ಪ್ರತಿ ನಿತ್ಯ ಕಲ್ಲಂಗಡಿ ಹಣ್ಣನ್ನು ಮಾರಿ ನಷ್ಟ ತಪ್ಪಿಸಲು ಇಡೀ ಕುಟುಂಬ ಕಷ್ಟಪಡುತ್ತಿದೆ. ವ್ಯಾಪಾರಿಗಳು ವಿಧಿಸುವ ದುಪ್ಪಟ್ಟು ದರದ ಬದಲಿ ಸ್ವತಃ ರೈತರು ಮಾರುವ ಹಣ್ಣನ್ನು ಗ್ರಾಹಕರು ಕಡಿಮೆ ದರಕ್ಕೆ ಕೊಳ್ಳುವ ಮೂಲಕ ರೈತರಿಗೆ ಆಗುವ ನಷ್ಟ ತಪ್ಪಿಸಬಹುದಾಗಿದೆ. ರೈತರು ಬೆಳೆದ ತರಕಾರಿ ಹಣ್ಣು ಸೇರಿ ಇತರ ಬೆಳೆಗಳಿಗೆ ಮಾರುಕಟ್ಟೆ ಇಲ್ಲ ಎಂದು ಚಿಂತಿಸದೇ ತಿಪ್ಪೆಗೆ, ರಸ್ತೆಗೆ ಸುರಿಯದೇ ಓಬಳಬಂಡಿ ರೈತ ಭರಮಪ್ಪ ಕುರಿ ಅವರಂತೆ ಯೋಚಿಸಿ ಸ್ವಂತ ಮಾರಾಟ ಮಾಡಿ ಕನಿಷ್ಠ ಆಗುವ ನಷ್ಟವನ್ನು ತಪ್ಪಿಸಬಹುದಾಗಿದೆ.

Advertisement

ಹಾಕಿದ ಬಂಡವಾಳವಾದರೂ ಬರಲಿ: ಕರ್ಪ್ಯೂ ಸಂದರ್ಭದಲ್ಲಿ ಎಲ್ಲವೂ ಬಂದ್ ಆಗಿವೆ. ರಂಜಾನ್ ಹಾಗೂ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಬೆಳೆದರೆ ಲಾಭವಾಗುತ್ತದೆ ಎಂದು ಕಲ್ಲಂಗಡಿ ಬೆಳೆದು ಕರ್ಪ್ಯೂ ಆಗಿದ್ದರಿಂದ ವ್ಯಾಪಾರಿಗಳು ಖರೀದಿಸಲು ಮುಂದೆ ಬರಲಿಲ್ಲ. ನಮ್ಮ ಸಹೋದರ ರಾಮಣ್ಣ ಕುರಿ ಎಂಬುವರು ತೋಟಗಾರಿಕೆ ಇಲಾಖೆಯ ಪರವಾನಿಗೆ ಕೊಡಿಸಿದ್ದರಿಂದ ಕೊಪ್ಪಳ ಗಂಗಾವತಿ ಸೇರಿ ಸುತ್ತಲಿನ ಊರುಗಳಲ್ಲಿ ಟ್ರಾಕ್ಟರ್ ನಲ್ಲಿ ಕಲ್ಲಂಗಡಿಯನ್ನು ಹಾಕಿಕೊಂಡು ಮಾರಾಟ ಮಾಡುತ್ತಿದ್ದೇವೆ. ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಈಗಾಗಲೇ 60 ಸಾವಿರ ರೂ.ಗಳಷ್ಟು ಕಲ್ಲಂಗಡಿ ಮಾರಿದ್ದು ಇನ್ನೂ ಅರ್ಧ ಹೊಲದಲ್ಲಿ ಕಲ್ಲಂಗಡಿ ಇದ್ದು ಅದನ್ನು ಮಾರಿ ಬೆಳೆಯಲು ಖರ್ಚು ಮಾಡಿದ 1.50 ಲಕ್ಷ ರೂ.ವಾದರೂ ವಾಪಸ್ ಸಾಧ್ಯತೆ ಇದೆ ಎನ್ನುತ್ತಾರೆ ರೈತ ಭರಮಪ್ಪ ಕುರಿ.

Advertisement

Udayavani is now on Telegram. Click here to join our channel and stay updated with the latest news.

Next