ಎಚ್.ಡಿ.ಕೋಟೆ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು ರೈತರ ಬೆಳೆ ನಾಶಪಡಿಸುವ ಕಾಡಾನೆಗಳ ದಾಳಿ ತಪ್ಪಿಸಲು ಸರ್ಕಾರ ಹಾಗೂ ಅರಣ್ಯ ಇಲಾಖೆ ಏನೆಲ್ಲಾ ತಂತ್ರಗಾರಿಕೆ ರೂಪಿಸುತ್ತಿದೆಯಾದರೂ ಆನೆ ನಡೆದು ಬಂದದ್ದೇ ದಾರಿ ಎನ್ನುವ ಸ್ಥಿತಿ ತಾಲೂಕಿನಲ್ಲಿದೆ.
ಮಾನವ ಹಾಗೂ ವನ್ಯ ಜೀವಿಗಳ ಸಂಘರ್ಷದ ಫಲವಾಗಿ ಪ್ರತಿದಿನ ಒಂದಲ್ಲಾ ಒಂದು ಕಡೆ ಅವಗಡಗಳು ಸಂಭವಿಸುತ್ತಲೇ ಇರುತ್ತವೆ. ಅನಾಹುತ ತಪ್ಪಿಸುವ ಸಲುವಾಗಿ ಸರ್ಕಾರ ಮತ್ತು ಅರಣ್ಯ ಇಲಾಖೆ ರೂಪಿಸುವ ತಂತ್ರಗಾರಿಕೆ ಕಾಡಾನೆಗಳ ಮುಂದೆ ಶೂನ್ಯವಾಗುತ್ತಿದೆ.
ರೈಲ್ವೆ ಕಂಬಿ ಅಳವಡಿಕೆ: ಕಳೆದ ಸಾಲಿನಲ್ಲಿ ನಿರೀಕ್ಷೆ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಆಹಾರ ಸೇರಿದಂತೆ ನೀರಿಗಾಗಿ ವನ್ಯಜೀವಿಗಳು ಅರಣ್ಯದಿಂದ ಹೊರಬರುವುದು ಸಾಮಾನ್ಯವಾಗಿ ಬಿಟ್ಟಿದೆ. ಮಳೆಯ ಅಭಾವವಿದ್ದರೂ ನೀರಾವರಿ ಮೂಲಕ ಅಲ್ಲೋ ಇಲ್ಲೋ ಅಲ್ಪಸ್ವಲ್ಪ ಬೆಳೆ ಬೆಳೆಯುವ ರೈತರು ಕಾಡಾನೆಗಳ ಕಾಟದಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವುದು ಕಷ್ಟಕರವಾಗಿದೆ.
ಹಾಗಾಗಿ ನಿರಂತರವಾಗಿ ಅರಣ್ಯ ಮಾರ್ಗದಿಂದ ಹೊರ ಬರುವ ಕಾಡಾನೆಗಳ ತಡೆಗೆ ಅರಣ್ಯ ಇಲಾಖೆ ರೈಲ್ವೆ ಕಂಬಿಗಳನ್ನು ಅಳವಡಿಸಿದೆಯಾದರೂ ಕಾಡಾನೆಗಳು ಮಾತ್ರ ರೈಲ್ವೆ ಕಂಬಿಯಿಂದ ನುಸುಳಿಕೊಂಡು ಹೊರಬರುತ್ತವೆ. ವರ್ಷ ಪೂರ್ತಿ ಶ್ರಮವಹಿಸಿ ಬೆಳೆ ಬೆಳೆ ಕೆಲವೇ ಕ್ಷಣಗಳಲ್ಲಿ ಕಾಡಾನೆಗಳ ಕಾಲು¤ಳಿತಕ್ಕೆ ಸಿಲುಕಿ ನಾಶವಾಗುವುದರಿಂದ ಬೇಸೆತ್ತ ರೈತರು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಯಲ್ಲಿ ವಾಗ್ವಾದಕ್ಕೀಳಿಯುತ್ತಿದ್ದಾರೆ.
ಕಂದಕವೂ ನಿಷ್ಪ್ರಯೋಜಕ: ಕಾಡಾನೆಗಳ ಮಾರ್ಗಗಳನ್ನು ಗುರುತಿಸುವ ಅರಣ್ಯ ಇಲಾಖೆ ಕಂದಕಗಳನ್ನು ತೆಗೆದಿದೆ. ಕಂದಕಗಳಿಗೆ ಕಾಲುಗಳಿಂದ ಮಣ್ಣು ಭರ್ತಿ ಮಾಡುವ ಕಾಡಾನೆಗಳು ಸಲೀಸಾಗಿ ನಾಡಿಗೆ ಬರುತ್ತಿವೆ. ಕಂದಕಗಳು ಆನೆಗಳಿಗೆ ಕೇರಿಲ್ಲದಂತಾಗಿದೆ. ಕಾನೂನು ಕಟ್ಟಲೆಗಳ ನಿರ್ಬಂಧ ಇಲ್ಲದೆ ಸ್ವತ್ಛಂದವಾಗಿ ವಿಹರಿಸುವ ವನ್ಯಜೀವಿಗಳು ಸ್ವತಂತ್ರವಾಗಿ ಸಂಚರಿಸುವ ವನ್ಯ ಜೀವಿಗಳಿಗೆ ಯಾರ ಅಡೆ ತಡೆ ಇಲ್ಲ. ಹಾಗಾಗಿ ವನ್ಯಜೀವಿಗಳು ಹಾಗೂ ಮಾನವರ ಸಂಘರ್ಷಗಳು ನಿರಂತರವಾಗಿದೆ. ಕಾಡುಪ್ರಾಣಿಗಳು ಸಂಪೂರ್ಣವಾಗಿ ನಾಡಿಗೆ ಬಾರದಂತೆ ಅರಣ್ಯ ಇಲಾಖೆ ಇಲ್ಲವೆ ಸರ್ಕಾರ ಕ್ರಮ ಕೈಗೊಳ್ಳುವುದು ಕಷ್ಟವಾಗುತ್ತಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನ ವನಕ್ಕೆ ಸೇರಿದ ಎಚ್.ಡಿ. ಕೋಟೆ ತಾಲೂಕು ದಮ್ಮನ ಕಟ್ಟೆ ಅರಣ್ಯ ಪ್ರದೇಶದಿಂದ ಕಾಡಾನೆಗಳು ಹೊರಬಾರದಂತೆ ದಮ್ಮನಕಟ್ಟೆ ಮಾರ್ಗದಿಂದ ತಾರಕ ಹಾಗೂ ಉದೂºರು ತನಕ ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತಿದೆ. ಕಾಮಗಾರಿ ಪ್ರಗತಿಯಲ್ಲಿದ್ದು ದಮ್ಮನ ಕಟ್ಟೆಯಿಂದ ಉದೂºರು ತನಕ ಬ್ಯಾರಿಕೇಡ್ ನಿರ್ಮಾಣಕ್ಕೆ ಕೇವಲ 300 ಮೀಟರ್ ಕಾಮಗಾರಿ ಬಾಕಿ ಉಳಿದಿದೆ. ಕಾಮಗಾರಿ ಪೂರ್ಣಗೊಂಡರೆ ಆನೆಗಳು ಹೊರಬರುವ ಸಾಧ್ಯತೆ ತೀರ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಆನೆ ಕಂದಕಗಳನ್ನು ತೆಗೆದಿರು ವುದರಿಂದ ಕಾಡಿನಿಂದ ನಾಡಿಗೆ ಬರುವ ಕಾಡಾನೆಗಳ ಉಪಟಳ ಬಹುತೇಕ ಕಡಿಮೆ ಯಾಗುವುದರಲ್ಲಿ ಸಂದೇಶ ಇಲ್ಲ.
-ಬೆಳ್ಳಿಯಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ
ನಮ್ಮದು ಕಾಡಂಚಿನ ಗ್ರಾಮ. ಇಡೀ ವರ್ಷ ಶ್ರಮವಹಿಸಿ ಮಳೆಯನ್ನಾಧರಿಸಿ ಬೇಸಾಯ ಮಾಡುತ್ತೇವೆ. ಇನ್ನೇನು ಬೆಳೆ ಕೈಸೇರಬೇಕು ಅನ್ನುವಷ್ಟರಲ್ಲಿ ಕಾಡಾನೆ, ಹಂದಿಗಳ ದಾಳಿಗೆ ಸಿಲುಕಿ ಅಪಾರ ಪ್ರಮಾಣದ ಬೆಳೆ ಹಾನಿಯಾಗು ತ್ತಿದೆ. ಬೆಳೆ ಹಾನಿಯಾದರೆ ಸರ್ಕಾರ ಕೊಡುವ ಪರಿಹಾರ ಅಲ್ಪಸ್ವಲ್ಪ ಮಾತ್ರ. ಅದೂ 2-3 ವರ್ಷಗಳ ಬಳಿಕ. ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕಾಡುಪ್ರಾಣಿಗಳು ಗ್ರಾಮಕ್ಕೆ ಬರದಂತೆ ಎಚ್ಚರವಹಿಸುವುದು ಸೂಕ್ತ.
-ರವಿಕುಮಾರ್, ಜಕ್ಕಹಳ್ಳಿ ಕಾಲೋನಿ ರೈತ
* ಎಚ್.ಬಿ.ಬಸವರಾಜು