Advertisement

ಕೆಡಿಸಿಸಿ ಬ್ಯಾಂಕ್‌ಗೆ ರೈತರ-ಗ್ರಾಹಕರ ಮುತ್ತಿಗೆ

01:20 PM Aug 27, 2019 | Suhan S |

ಕುಮಟಾ: ಬರಗದ್ದೆ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ರೈತರ ಖಾತೆಯಲ್ಲಿ ಮನ್ನಾ ಆಗಿರುವ ಹಣವನ್ನು ನೀಡುವಂತೆ ಒತ್ತಾಯಿಸಿ ಸೊಸೈಟಿ ಗ್ರಾಹಕರು ಹಾಗೂ ಆ ಭಾಗದ ರೈತರು ಪಟ್ಟಣದ ಕೆಡಿಸಿಸಿ ಬ್ಯಾಂಕ್‌ಗೆ ಸೋಮವಾರ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

Advertisement

ಬರಗದ್ದೆ ಸೊಸೈಟಿ ಕಾರ್ಯದರ್ಶಿ ಲಕ್ಷ್ಮಣ ಪಟಗಾರ ಮುಖಾಂತರ ಬರಗದ್ದೆ ಸೊಸೈಟಿ ಆಡಳಿತ ಮಂಡಳಿ ಕೆಡಿಸಿಸಿ ಬ್ಯಾಂಕ್‌ ಶಾಮೀಲಾತಿಯಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ನಡೆಸಿದ್ದಾರೆ. ತಕ್ಷಣ ನಮ್ಮ ಹಣವನ್ನು ನಮಗೆ ನೀಡಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಸರಕಾರ 2017 ರಲ್ಲಿ ಘೋಷಿಸಿದ್ದ 50,000 ರೂ. ಸಾಲ ಮನ್ನಾ ನೀಡಿತ್ತು. ಆದರೆ ಬರಗದ್ದೆ ಸೇವಾ ಸಹಕಾರಿ ಸಂಘ ಇನ್ನೂ ತನ್ನ ಸದಸ್ಯರ ಖಾತೆಗೆ ಆ ಹಣ ಜಮಾ ಮಾಡಿಲ್ಲ. ಎಚ್.ಡಿ. ಕುಮಾರಸ್ವಾಮಿ ಸರಕಾರ ಮನ್ನಾ ಮಾಡಿದ 1 ಲಕ್ಷ ರೂ. ಹಣವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಿತ್ತು. ಆ ಹಣವೂ ಬರುವ ಮೊದಲೇ ಕೆಡಿಸಿಸಿ ಬ್ಯಾಂಕ್‌ ಸಹಕಾರದೊಂದಿಗೆ ಗ್ರಾಹಕರ ತಲಾ 1 ಲಕ್ಷ ರೂ. ಡ್ರಾ ಮಾಡಲಾಗಿದೆ. ಕೆಡಿಸಿಸಿ ಬ್ಯಾಂಕ್‌ ಕುಮಟಾ ಶಾಖೆ ಸಿಬ್ಬಂದಿ ಹಾಗೂ ಬರಗದ್ದೆ ಸೇವಾ ಸಹಕಾರಿ ಸಂಘದ ಕಾರ್ಯದರ್ಶಿ ಸೇರಿ ಇಲ್ಲಿನ 200ಕ್ಕೂ ಅಧಿಕ ರೈತರಿಗೆ ವಿತ್‌ಡ್ರಾ ಚೆಕ್‌ಗೆ ಮೊತ್ತ ನಮೂದಿಸಿದೇ ಸಹಿ ಪಡೆದುಕೊಂಡಿದ್ದು, ಆ ಮೂಲಕ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ಗ್ರಾಹಕರು ಪಡೆದುಕೊಂಡ ಕನಿಷ್ಠ ಸಾಲಕ್ಕೂ 1 ಲಕ್ಷ ರೂ. ಸೇರಿಸಿ ಸಾಲ ಪಡೆದಿದ್ದಾರೆ. ಇಂತಹ ಅವ್ಯವಹಾರ ನಡೆಸುವ ಅಧಿಕಾರವನ್ನು ಸೊಸೈಟಿ ಕಾರ್ಯದರ್ಶಿಗೆ ನೀಡಿದವರ್ಯಾರು ಎಂಬುದು ಪ್ರಶ್ನೆಯಾಗಿದೆ. ಬರಗದ್ದೆ ಸೊಸೈಟಿ ಆಡಳಿತ ಕಮೀಟಿ ಕಣ್ಣು ತಪ್ಪಿಸಿ ಇಷ್ಟೊಂದು ದೊಡ್ಡ ಮೊತ್ತದ ಹಣ ಲಪಟಾಯಿಸಿದ್ದಾದರೂ ಹೇಗೆ. ಸೊಸೈಟಿ ಆಡಿಟ್ ನಡೆಸುವ ಸಹಕಾರ ಇಲಾಖೆ ಏನು ಮಾಡುತ್ತಿದೆ. ರೈತರ ಹಣವನ್ನು ಕೆಡಿಸಿಸಿ ಬ್ಯಾಂಕ್‌ ಮೂಲಕ ಡ್ರಾ ಮಾಡಲು ಬ್ಯಾಂಕ್‌ನವರೇ ವಿತ್‌ಡ್ರಾವಲ್ ಚೆಕ್ಕನ್ನು ಬರಗದ್ದೆ ಸೊಸೈಟಿ ಕಾರ್ಯದರ್ಶಿಗೆ ನೀಡುವಲ್ಲಿ ಯಾರ ಪ್ರಭಾವ ಅಡಗಿದೆ. ಈ ಪ್ರಕರಣದ ಹಿಂದೆ ಯಾರ್ಯಾರು ಇದ್ದಾರೆ ಎಂಬುದರ ಕುರಿತು ಸೂಕ್ತ ತನಿಖೆ ನಡೆಯುಬೇಕು ಮತ್ತು ಅವ್ಯವಹಾರ ನಡೆಸಿದ ಆರೋಪಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕಾಗಮಿಸಿದ ಶಾಸಕ ದಿನಕರ ಶೆಟ್ಟಿ, ಮಾಜಿ ಸಿಎಂಗಳಾದ ಸಿದ್ಧರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಸರಕಾರದಲ್ಲಿ ಮನ್ನಾ ಆಗಿರುವ ಹಣವನ್ನು ರೈತರಿಗೆ ನೀಡಿಲ್ಲ. ಅದಲ್ಲದೇ ಸರಕಾರಕ್ಕೆ ವಂಚಿಸಿ ರೈತರ ಹೆಸರಿನಲ್ಲಿ ಹೆಚ್ಚಿನ ಸಾಲ ಮಾಡಲಾಗಿದೆ. ಹೀಗಾಗಿ ಕೆಡಿಸಿಸಿ ಬ್ಯಾಂಕ್‌ ಎಜಿಎಂ ಅವರೊಂದಿಗೂ ಮಾತನಾಡಿದ್ದೇನೆ. ಶೀಘ್ರವೇ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದರು. ಜಿಪಂ ಸದಸ್ಯ ಗಜಾನನ ಪೈ ಸೇರಿದಂತೆ ಇನ್ನಿತರರು ಬೆಂಬಲ ಸೂಚಿಸಿದರು. ನಂತರ ಆಗಮಿಸಿದ ಕೆಡಿಸಿಸಿ ಬ್ಯಾಂಕ್‌ ಎಜಿಎಂ ಆರ್‌.ಜಿ. ಭಾಗ್ವತ್‌, ಮೇಲಧಿಕಾರಿಗಳ ಆದೇಶದ ಮೇರೆಗೆ ಇಲ್ಲಿಗೆ ಬಂದಿದ್ದೇನೆ. ಬರಗದ್ದೆ ಗ್ರಾಮೀಣ ಸೇವಾ ಸಹಕಾರಿ ಸಂಘಕ್ಕೆ ಮನ್ನಾ ಆಗಿರುವ 1 ಲಕ್ಷ ರೂಗಳನ್ನು ನಾವು ಸೊಸೈಟಿಗೆ ನೀಡಿಲ್ಲ. ರೈತರ ಖಾತೆಗೆ ಸರಕಾರದಿಂದ ಜಮಾ ಆಗಿರುವ 1 ಲಕ್ಷ ರೂ. ನಮ್ಮ ಬ್ಯಾಂಕ್‌ ಖಾತೆಯಲ್ಲಿಯೇ ಉಳಿಸಿಕೊಳ್ಳಲಾಗಿದೆ. ಈ ಎಲ್ಲ ಹಣವನ್ನು ಸೊಸೈಟಿಯವರು ತಿಂದಿದ್ದಾರೆ ಎಂಬ ತಪ್ಪು ಭಾವನೆ ಬೇಡ. ಶೀಘ್ರದಲ್ಲಿಯೇ ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾರೂ ಕೂಡ ಭಯ ಪಡುವ ಅವಶ್ಯಕತೆಯಿಲ್ಲ. ಬರುವ ಗುರುವಾರದವರೆಗೆ ಕಾಲಾವಕಾಶ ಬೇಕು ಎಂದರು.

Advertisement

ಬಹಳಷ್ಟು ಬಾರಿ ಹೋರಾಟ ನಡೆಸಿದರೂ ನಮಗೆ ಸೂಕ್ತ ನ್ಯಾಯ ಲಭಿಸಿಲ್ಲ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸುತ್ತೇವೆ. ಅಷ್ಟಾದರೂ ನ್ಯಾಯ ದೊರೆತಿಲ್ಲ ಎಂದಾದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಸ್ಥಳೀಯ ರೈತರಾದ ಎನ್‌.ಎಸ್‌. ಹೆಗಡೆ, ಎಸ್‌.ಪಿ. ಭಟ್ಟ, ಸುಬ್ರಾಯ ಭಟ್ಟ, ಗಣಪತಿ ಹೆಗಡೆ, ನಾರಾಯಣ ಮಡಿವಾಳ, ಗಣಪತಿ ಭಟ್ಟ, ಶಂಕರ ಗೌಡ, ಬೀರಾ ಗೌಡ, ಎಂ.ಆರ್‌. ಹೆಗಡೆ, ಭಾಗೀರಥಿ ಗಣಪತಿ ಹೆಗಡೆ, ನಾಗೇಶ ಮಡಿವಾಳ ಹಾಗೂ ನೂರಾರು ರೈತರು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next