ಸೋಮವಾರಪೇಟೆ: ಸಾಲ ಬಾಧೆಯಿಂದ ಬೇಸತ್ತ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಿರಗಂದೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಕೃಷಿಕ ವಿನೋದ್ (35) ಆತ್ಮಹತ್ಯೆಗೆ ಶರಣಾದವರು. ಅವರು ಪತ್ನಿ ಮತ್ತು ಇಬ್ಬರು ಎಳೆಯ ಪ್ರಾಯದ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಅಪರಾಹ್ನ ಮನೆಯಲ್ಲಿ ಪತ್ನಿ ಮಕ್ಕಳು ಇದ್ದಾಗಲೇ ವಿಷ ಸೇವಿಸಿದ್ದಾರೆ. ವಿಷದ ವಾಸನೆ ಗ್ರಹಿಸಿದ ಪತ್ನಿ ಸ್ಥಳೀಯರ ಸಹಕಾರದಿಂದ ಪಟ್ಟಣದ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಮೃತಪಟ್ಟರು.
ಕಳೆದ ಎರಡು ವರ್ಷಗಳಿಂದ ಧಾರಾಕಾರ ಮಳೆ ಸುರಿದ ಪರಿಣಾಮ ಕಾಫಿ, ಕಾಳುಮೆಣಸು ಫಸಲು ಸಂಪೂರ್ಣ ಹಾನಿಯಾಗಿತ್ತು ಎನ್ನಲಾಗಿದೆ. ಮೃತರು 6 ಎಕರೆಯಷ್ಟು ಆಸ್ತಿ ಹೊಂದಿದ್ದರೂ ಹಕ್ಕುಪತ್ರಗಳ ಸಮಸ್ಯೆಯಿಂದ ಸರಕಾರದ ಪರಿಹಾರದಿಂದಲೂ ವಂಚಿತರಾಗಿದ್ದರು ಎನ್ನಲಾಗಿದೆ.
ಕುಟುಂಬ ನಿರ್ವಹಣೆಗಾಗಿ ಮನೆಯಲ್ಲಿದ್ದ ಚಿನ್ನವನ್ನು ಖಾಸಗಿ ಫೈನಾನ್ಸ್ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗಿರವಿ ಇಟ್ಟಿದ್ದರು. ಇತ್ತೀಚೆಗೆ ಫೈನಾನ್ಸ್ ನಿಂದ ನೋಟಿಸ್ ಜಾರಿಯಾಗಿತ್ತು. ಇದರಿಂದ ಆತಂಕಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ವಾಣಿ ಪಟ್ಟಣದ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.