ಬೆಳಗಾವಿ: ಮಳೆ ಬಂದು ಇಡೀ ಭೂಮಿ ಫಸಲು ತುಂಬಿ ರೈತರ ಮೊಗದಲ್ಲಿ ಸಂತಸ ಕಾಣುವ ಮುನ್ನವೇ ಬೈಪಾಸ್ ರಸ್ತೆಯ ಮಹಾಮಾರಿಯಿಂದಾಗಿ ರೈತರು ಜಮೀನು ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಭೂಮಿ ಬಿಟ್ಟು ಕೊಡಲು ಒಪ್ಪದ ರೈತರನ್ನು ಪೊಲೀಸರು ಏಟು ನೀಡಿ ವಶಕ್ಕೆ ಪಡೆದುಕೊಂಡಿದ್ದಾರೆ.
ನಗರದಲ್ಲಿ ಹಾಯ್ದು ಹೋಗುವ ಹಲಗಾ-ಮಚ್ಛೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ದಿನ ದಿನವೂ ರೈತರ ವಿರೋಧ ಹೆಚ್ಚಾಗುತ್ತಲೇ ಇದೆ. ಫಲವತ್ತಾದ ಭೂಮಿ ಕೊಟ್ಟು ಹೊಟ್ಟೆಗೆ ಏನು ತಿನ್ನುವುದು ಎಂಬ ಆಕ್ರೋಶದ ಮಾತುಗಳನ್ನಾಡುತ್ತಿದ್ದಾರೆ. ಶುಕ್ರವಾರ ಬೆಳಗ್ಗೆ ಜೆಸಿಬಿ ಮೂಲಕ ಭೂಮಿ ಕಸಿದುಕೊಳ್ಳಲು ಧಾಮಣೆ ಬಳಿ ಬಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತೀವ್ರ ಪ್ರತಿರೋಧ ಒಡ್ಡಿದ ರೈತರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಗರದ ವಡಗಾಂವ ರೈತ ಗಲ್ಲಿಯ ಉಮೇಶ ಬಿರ್ಜೆ, ಈತನ ಪತ್ನಿ ನೀಲಮ್ ಬಿರ್ಜೆ, ಪ್ರದೀಪ ಬಿರ್ಜೆ, ತಾನಾಜಿ ಹಲಗೇಕರ, ಪಿಂಟು ಕಂಗ್ರಾಳಕರ ಹಾಗೂ ಪ್ರಕಾಶ ನಾಯಿಕ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ಮುಚ್ಚಳಿಕೆ ಪತ್ರ ಬರೆದು ವಾಪಸ್ಸು ಕಳುಹಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಬಿರ್ಜೆ ಎಂಬವರ ಹೊಲದಲ್ಲಿ ಅಧಿಕಾರಿಗಳು ಜೆಸಿಬಿ ತೆಗೆದುಕೊಂಡು ಭೂ ಸ್ವಾಧೀನ ಪಡಿಸಿಕೊಳ್ಳಲು ಆಗಮಿಸಿದ್ದರು. ಹೊಲದಲ್ಲಿ ಕಬ್ಬು ಹಾಕಲಾಗಿತ್ತು. 3-4 ಅಡಿಗಳವರೆಗೆ ಕಬ್ಬು ಬೆಳೆದು ನಿಂತಿತ್ತು. 2-3 ದಿನಗಳ ಕಾಲ ಬಳಿಕ ತೆರವು ಕಾರ್ಯಾಚರಣೆ ನಡೆಸುವಂತೆ ಬಿರ್ಜೆ ಕುಟುಂಬದವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಪ್ರಾಧಿಕಾರ ಜೆಸಿಬಿ ಮೂಲಕ ಹೊಲದಲ್ಲಿ ಬೆಳೆ ತೆರವು ಕಾರ್ಯಾಚರಣೆಗೆ ಮುಂದಾಗಿದೆ. ಇದನ್ನು ಕಂಡ ರೈತರ ಪತ್ನಿ ನೀಲಮ್ ತಡೆಯಲು ಹೋಗಿದ್ದಾಳೆ. ಆಗ ರೈತ ಮಹಿಳೆಯನ್ನು ಪೊಲೀಸರು ತಡೆದು ಜಡೆ ಹಿಡಿದು ಏಟು ನೀಡಿದ್ದಾರೆ. ಇದರಿಂದ ಕುಪಿತಗೊಂಡ ಇನ್ನುಳಿದ ರೈತರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಕೂಡಲೇ ರೈತ ಮಹಿಳೆ ಸೇರಿದಂತೆ ಇನ್ನುಳಿದವರನ್ನು ಪೊಲೀಸರು ತಮ್ಮ ವಾಹನದಲ್ಲಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಶಾಂತಿ ಭಂಗವಾಗಬಾರದೆನ್ನುವ ಉದ್ದೇಶದಿಂದ ರೈತರ ಕಡೆಯಿಂದ ಮುಚ್ಚಳಿಕೆ ಪತ್ರ ಬರೆದು ವಾಪಸ್ಸು ಕಳುಹಿಸಿದ್ದಾರೆ.
ರೈತರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಹೋಗುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಇತ್ತ ಜೆಸಿಬಿ ಮೂಲಕ ಹೊಲ ತೆರವು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಫಲವತ್ತಾಗಿ ಬೆಳೆದು ನಿಂತಿದ್ದ ಬೆಳೆಗೆ ಜೆಸಿಬಿ ಮೂಲಕ ತೆರವು ಮಾಡುತ್ತಿರುವುದನ್ನು ಕಂಡು ರೈತರು ಮರುಗಿದರು. ಬೆಳೆ ಬರಬೇಕಾದರೆ ರೈತರು ಎಷ್ಟು ಕಷ್ಟ ಪಡಬೇಕಾಗುತ್ತದೆ. ಆದರೆ ಅಧಿಕಾರಿಗಳು ರೈತರಿಗೆ ಕಾಲಾವಕಾಶ ನೀಡದೇ ತುಂಬಿದ ಫಸಲನ್ನು ನಿರ್ದಯೆಯಿಂದ ಕಿತ್ತೂಗೆಯುತ್ತಿರುವುದಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದರೂ ಪ್ರಾಧಿಕಾರ ಮಾತ್ರ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.