ನವದೆಹಲಿ : ಈಗಾಗಲೇ ವಾಪಾಸ್ ಪಡೆದುಕೊಂಡಿರುವ ಮೂರು ಕೃಷಿ ಕಾಯ್ದೆಗಳನ್ನು ಯಾವುದೇ ಕಾರಣಕ್ಕೂ ಮತ್ತೆ ಜಾರಿಗೊಳಿಸುವ ಪ್ರಸ್ತಾಪ ಕೇಂದ್ರ ಸರಕಾರದ ಮುಂದೆ ಇಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸ್ಪಷ್ಟಪಡಿಸಿದ್ದಾರೆ.
ರೈತರ ಭಾವನೆಗಳಿಗೆ ಬೆಲೆ ಕೊಟ್ಟು ಪ್ರಧಾನಿ ನರೇಂದ್ರ ಮೋದಿ ಈ ಕಾಯ್ದೆಗಳನ್ನು ವಾಪಾಸ್ ತೆಗೆದುಕೊಳ್ಳಲು ನಿರ್ಧಿಸಿದರು. ಮತ್ತೆ ವಾಪಾಸ್ ಜಾರಿಗೊಳಿಸುವ ಪ್ರಸ್ತಾಪ ಸರಕಾರದ ಯಾವುದೇ ಹಂತದಲ್ಲೂ ನಡೆದಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಈ ವಿಚಾರದಲ್ಲಿ ರೈತರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿದೆ. ಸುಳ್ಳು ಮಾಹಿತಿಯನ್ನು ಹರಿ ಬಿಡುವ ಮೂಲಕ ರೈತ ವರ್ಗದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ. ವೈಫಲ್ಯದಿಂದ ಹತಾಶಗೊಂಡಿರುವ ಕಾಂಗ್ರೆಸ್ ನಾಯಕತ್ವ ನಡೆಸುತ್ತಿರುವ ಸಂಚಿಗೆ ರೈತರು ಬಲಿಯಾಗಬಾರದು ಎಂದು ಮನವಿ ಮಾಡಿದರು.
ಕೇಂದ್ರ ಸರಕಾರ ಜಾರಿಗೆ ತಂದ ಮೂರು ಕೃಷಿ ಕಾಯಿದೆಗಳ ವಿರುದ್ಧ ದೇಶಾದ್ಯಂತ ರೈತರು ಪ್ರತಿಭಟನೆ ನಡೆಸಿದ್ದರು. ಸುಮಾರು ಒಂದು ವರ್ಷಘಲ ಕಾಲ ನಡೆದ ಪ್ರತಿಭಟನೆಯ ಬಳಿಕ ಕೇಂದ್ರ ಸರಕಾರ ಈ ಕಾಯಿದೆಯನ್ನು ವಾಪಾಸ್ ತೆಗೆದುಕೊಂಡಿದೆ. ಖುದ್ದು ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಈ ವಿಚಾರ ತಿಳಿಸಿದ್ದರು.
ಕೃಷಿಕಾಯಿದೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಸಂಯುಕ್ತ ರೈತ ಮೋರ್ಚಾ ಈಗ ಪಂಜಾಬ್ ಚುನಾವಣೆಯಲ್ಲಿ ಕಣಕ್ಕಿಳಿಯುವ ಬಗ್ಗೆ ಚಿಂತನೆ ನಡೆಸುತ್ತಿದೆ. ಕೇಂದ್ರ ಸರಕಾರದ ರೈತ ವಿರೋಧಿ ಧೋರಣೆಯನ್ನೇ ಪ್ರಮುಖ ಅಸ್ತ್ರವಾಗಿ ಬಳಸಲು ನಿರ್ಧರಿಸಿದೆ. ಹೀಗಾಗಿ ತೋಮರ್ ಹೇಳಿಕೆಗೆ ಈಗ ಮಹತ್ವ ಲಭಿಸಿದೆ.