ಮಂಡ್ಯ: ರೈತರ ಹಿತದೃಷ್ಟಿಯಿಂದ ಸರ್ಕಾರ ಹಲವಾರು ಉಪಯುಕ್ತ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವುದರೊಂದಿಗೆ ಆರ್ಥಿಕವಾಗಿ ಸುಧಾರಣೆ ಕಂಡುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ಕಿವಿಮಾತು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕೃಷಿ ಇಲಾಖೆ ಆಯೋಜಿಸಿದ್ದ ‘ಸಮಗ್ರ ಕೃಷಿ ಅಭಿಯಾನ ರಥಕ್ಕೆ’ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿಯೊಬ್ಬರಿಗೂ ಸರ್ಕಾರದ ಸೌಲಭ್ಯಗಳು ದೊರಕ ಬೇಕು ಎಂದು ತಿಳಿಸಿದರು.
ಮಾಹಿತಿ ತಿಳಿಸುವ ಉದ್ದೇಶ: ಕೃಷಿ ಇಲಾಖೆಗೆ ಸಂಬಂಧಿಸಿದ ಪೂರ್ಣ ಮಾಹಿತಿಯನ್ನು ತಿಳಿಸಲು ಮಾಹಿತಿ ರಥಕ್ಕೆ ಚಾಲನೆ ನೀಡಲಾಗಿದೆ. ಮಂಡ್ಯ ತಾಲೂಕಿನ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಸಂಚರಿಸುವುದರ ಜತೆಗೆ ಕಾರ್ಯಕ್ರಮ ಆಯೋಜಿಸಿ ಕೃಷಿ ಮತ್ತು ಕೃಷಿಯೇತರ ಇಲಾಖೆ ವಸ್ತು ಪ್ರದರ್ಶನ, ಇನ್ನಿತರೆ ಕೃಷಿಗೆ ಸಂಬಂಧಪಟ್ಟ ಮಾಹಿತಿ ನೀಡಲಾಗು ವುದು ಎಂದು ಹೇಳಿದರು.
ಜಂಟಿ ಕೃಷಿ ನಿರ್ದೇಶಕಿ ರಾಜ ಸುಲೋಚನಾ ಮಾತನಾಡಿ, ಇಲಾಖೆಯ ನಡಿಗೆ ರೈತರ ಮನೆ ಬಾಗಿಲಿಗೆ ಎಂಬ ಘೋಷ ವಾಕ್ಯದೊಡನೆ ಜೂ.14, 15ರಂದು ಕೆರಗೋಡು ಹೋಬಳಿ, 16ರಂದು ಬಸರಾಳು, 18 ಮತ್ತು 19 ಕಸಬಾ, 20 ಮತ್ತು 21ರಂದು ದುದ್ದ, 22 ಹಾಗೂ 23ರಂದು ಕೊತ್ತತ್ತಿ ಹೋಬಳಿಯಲ್ಲಿ ಮಾಹಿತಿ ರಥ ಸಂಚರಿಸಲಿದೆ. ಬೆಳೆಗಳ ಪದ್ಧತಿ, ಬೀಜೋಪಚಾರ, ಪೋಷಕಾಂಶ ನಿರ್ವಹಣೆ, ನೀರು ನಿರ್ವಹಣೆ, ಕಬ್ಬು ಮತ್ತು ಭತ್ತದ ತಳಿಗಳು ಸೇರಿದಂತೆ ಇನ್ನಿತರೆ ಮಾಹಿತಿ ನೀಡಲಾಗುವುದು ಎಂದರು.
ಈ ವೇಳೆ ತಾಲೂಕು ಪಂಚಾಯಿತಿ ಸದಸ್ಯ ಕೆ.ಸಿ.ಪ್ರಶಾಂತ್‌ಬಾಬು, ಕೃಷಿ ಇಲಾಖೆಯ ಉಪ ನಿರ್ದೇಶಕಿ ಮಮತಾ, ಸಹಾಯಕ ಕೃಷಿ ನಿರ್ದೇಶಕಿ ಪ್ರತಿಭಾ, ಕೃಷಿ ಅಧಿಕಾರಿ ಟಿ.ಕೃಷ್ಣಯ್ಯ, ರೇಷ್ಮೆ ಇಲಾಖೆ ಸಿದ್ದರಾಜು ಮತ್ತಿತರರಿದ್ದರು.