ವಾರದಲ್ಲಿ 5 ದಿನ ಕೆಲಸ ಮಾಡಿ, ವೀಕೆಂಡ್‌ಗೆ ಕಾಯೋ ಮಜಾನೇ ಬೇರೆ. ವರ್ಕ್ ಫ್ರಂ ಹೋಮ್ ಈ ಸಂತಸವನ್ನು ಕಿತ್ತುಕೊಂಡಿದೆ ಎಂದರೆ ತಪ್ಪಾಗಲಾರದು. ಸುಮಾರು 20 ತಿಂಗಳ ವರ್ಕ್ ಫ್ರಂ ಹೋಮ್ ಉದ್ಯೋಗಿಗಳ ಬದುಕಿನ ಪಥ ಬದಲಾಸಿದೆ. ಅವರು ಬದುಕು ನಾಲ್ಕು ಗೋಡೆಗೆ ಸೀಮಿತವಾಗಿದೆ.
ಹೊರ ಪ್ರಪಂಚದ ಸಂಪರ್ಕ ಕಡಿತಗೊಂಡಿದೆ. ಗೆಳೆಯರೊಂದಿನ ಹರಟೆ, ಗಾಸಿಪ್‌ಗ್ಳಿಗೆ ಬ್ರೇಕ್ ಬಿದ್ದಿದೆ. ಹೊಸ ವಸ್ತುಗಳು ತೆಗೆದುಕೊಂಡರೆ ಎಲ್ಲಿ , ಯಾವಾಗ, ಎಷ್ಟು ಬೆಲೆ ಎಂದು ಕೇಳುವ ಸ್ನೇಹಿತರು ಇಲ್ಲದೇ ಬದುಕು ಬಣ್ಣ ತೆಗೆದ ಕಾಮನಬಿಲ್ಲಿನಂತಾಗಿದೆ. ಬೆಂಗಳೂರಿನಲ್ಲಿ ಸುಮಾರು 67,000 ಐಟಿ ಕಂಪನಿಗಳು ನೋಂದಣಿ ಮಾಡಿಕೊಂಡಿದ್ದು, ಅವರಲ್ಲಿ ಸುಮಾರು 12,000 ಕಂಪನಿಗಳು ಸಂಪೂರ್ಣವಾಗಿ ಕಾರ್ಯಾಚರಿಸುತ್ತಿದೆ.
2017ರ ಅನ್ವಯ ಬೆಂಗಳೂರಿನ ಐಟಿ ಬಿಟಿ ಕಂಪನಿ ಸೇರಿದಂತೆ ಇತರೆ ಸಂಸ್ಥೆಗಳಲ್ಲಿ ಸುಮಾರು 1.5 ಮಿಲಿಯನ್ ಮಂದಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಲಾಕ್‌ಡೌನ್ ಬಳಿಕ ಐಟಿ-ಬಿಟಿ ಉದ್ಯೋಗದಾತರರು ತಮ್ಮ ಸಿಬಂದಿಗೆ ವರ್ಕ್ ಫ್ರಂ ಕೆಲಸವನ್ನು ನೀಡಿದ್ದಾರೆ. ಸಿಬಂದಿ ಕೊರೊನಾ ಭೀತಿ ನಡುವೆ ಇಷ್ಟವಿಲ್ಲದಿ ದ್ದರೂ ಅನಿವಾರ್ಯತೆಯಿಂದ ಹೊಂದಿಕೊಂಡಿದ್ದಾರೆ.
ಕಚೇರಿಗೆ ಕರೆಸಲು ಸಿದ್ಧತೆ : ಐಟಿ-ಬಿಟಿ ಕಂಪನಿಗಳಾದ ಟಿಸಿಎಸ್, ವಿಪ್ರೋ, ಇನ್‌ಫೋಸಿಸ್ ಸೇರಿದಂತೆ ಇತರೆ ಸಂಸ್ಥೆಗಳು ವರ್ಕ್ ಫ್ರಂ ಹೋಮ್‌ಗೆ ವಿದಾಯ ಹೇಳಲು ಮುಂದಾಗಿವೆ. ಅಂತೆಯೇ ಕೆಲ ಸಂಸ್ಥೆಗಳು ನ.29ರಿಂದಲೇ ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳಲು ಸಿದ್ಧತೆ ನಡೆಸಿಕೊಂಡಿವೆ. ಇನ್ನು ಕೆಲ ಸಂಸ್ಥೆಗಳು 2022ರ ಜನವರಿಯಲ್ಲಿ ಸಿಬ್ಬಂದಿಯನ್ನು ಕರೆಸಿಕೊಳ್ಳುಲು ಸಿದ್ಧತೆ ನಡೆಸಿವೆ. ಕೆಲವು ಕಂಪನಿಗಳು ವಾರದಲ್ಲಿ ಮೂರು ದಿನ ಕಚೇರಿಯಲ್ಲಿ, ಉಳಿದೆರಡು ದಿನ ಮನೆಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಲು ನಿರ್ಧರಿಸಿವೆ.
ರೂಪಾಂತರಿ ಒಮಿಕ್ರಾನ್ ಗುಮ್ಮ
ಇನ್ನೇನು ಕೊರೊನಾ ಎರಡನೇ ಅಲೆ ಕೊನೆಗೊಳ್ಳುತ್ತಿದೆ ಎಂದು ಜನರು ನಿರಾಳರಾಗಿ ಹೊರ ಬರುಲು ಆರಂಭಿಸಿದ್ದರು. ಕಮರ್ಷಿಯಲ್ ಏರಿಯಾದಲ್ಲಿ ಜನರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿತ್ತು. ವ್ಯಾಪಾರವು ಸ್ವಲ್ಪ ಮಟ್ಟಿಗೆ ಸುಧಾರಿಸುತ್ತಿತ್ತು. ಆದರೆ ಈಗ ಮತ್ತೂಂದು ಹೊಸ ರೂಪಾಂತರ ವೈರಸ್ ಒಮಿಕ್ರಾನ್ ವೈರಾಣು ಎಂಟ್ರಿ ಕೊಟ್ಟಿದೆ.
ಜನವರಿಯಿಂದ ಕಂಪನಿಗಳು ಉದ್ಯೋಗಿಗಳನ್ನು ಕಚೇರಿಗೆ ಕರೆಸುವ ಯೋಚನೆಯಲ್ಲಿದ್ದವರಿಗೆ ಈ ಹೊಸ ವೈರಸ್ ಅಡ್ಡಲಾಗುವುದೇ ಎನ್ನುವ ಆತಂಕ ಎದುರಾಗಿದೆ. ಆದರೆ, ರಾಜ್ಯದ ಮಟ್ಟಿಗೆ ಆತಂಕವಿಲ್ಲ, ಎಲ್ಲ ರೀತಿಯ ಮುನ್ನಚ್ಚರಿಕೆ ಕ್ರಮ ಕೈಗೊಂಡಿರುವುದಾಗಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಧೈರ್ಯ ನೀಡಿರುವುದು ಜನರಲ್ಲಿ ಆಶಾಭಾವನೆ ಮೂಡಿಸಿದೆ.
ವ್ಯವಹಾರಕ್ಕೆ ಹೊಸ ಕಳೆ
ಮೊದಲು ಕೋವಿಡ್‌ನಿಂದ ಭಯಪಡುತ್ತಿದ್ದ ಜನರು ಇತ್ತೀಚಿನ ದಿನಗಳಲ್ಲಿ ಯಾವುದೇ ಭಯವಿಲ್ಲದೇ ಓಡಾಡುತ್ತಿದ್ದಾರೆ. ಜತೆಗೆ ವರ್ಕ್ ಫ್ರಂ ಹೋಮ್ ಮುಕ್ತಾಯಗೊಳ್ಳುತ್ತಿರುವು ದರಿಂದ ಜನರು ಕಮರ್ಷಿಯಲ್ ಸ್ಟ್ರೀಟ್‌ಗಳತ್ತ ಬರುತ್ತಿದ್ದಾರೆ. ವೀಕ್ ಡೇಸ್‌ನಲ್ಲಿ ರಾತ್ರಿ 10.30ಕ್ಕೆ ವ್ಯಾಪಾರವನ್ನು ಕೊನೆಗೊಳಿಸಿದರೆ, ವೀಕೆಂಡ್‌ನಲ್ಲಿ ಮಧ್ಯರಾತ್ರಿ 11.30 ರಿಂದ 12 ಗಂಟೆವರೆಗೂ ತೆರೆಯುತ್ತೇವೆ.
ಕೊರೊನಾ ಅನಂತರ ಶೇ. 90ರಷ್ಟು ವ್ಯಾಪಾರ ನಡೆಯುತ್ತಿದೆ. ವ್ಯವಹಾರದಲ್ಲಿಯೂ ಸ್ವಲ್ಪ ಏರಿಕೆ ಕಂಡಿದೆ ಎನ್ನುತ್ತಾರೆ ಎಂಜಿ ರೋಡ್ ದಿ ಪಿಜ್ಜಾ ಬೇಕರಿ ಮ್ಯಾನೇಜರ್ ನಾಗರಾಜ್. ಸಂಜೆಯಾದರೆ ಎಂಜಿ ರೋಡ್, ಬ್ರಿಗೇಡ್, ಜಯನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಜನರು ತುಂಬಿ ತುಳುಕುತ್ತಿದ್ದಾರೆ. ಲಸಿಕೆ ಪಡೆದವರಲ್ಲಿ ಪ್ರಸ್ತುತ ಕೊರೊನಾ ಭೀತಿ ಕಡಿಮೆಯಾಗಿದ್ದು, ಧೈರ್ಯವಾಗಿ ಮಾಸ್ಕ್ ಧರಿಸಿಕೊಂಡು ಹೊರಗೆ ಬರುತ್ತಿದ್ದಾರೆ.
ಇದನ್ನೂ ಓದಿ;- ಸಾವಿನ ಮೆರವಣಿಗೆ ಮತ್ತೆ ಬೇಡ, ಯಾರೂ ಎಚ್ಚರ ತಪ್ಪುವುದು ಬೇಡ: ಕುಮಾರಸ್ವಾಮಿ ಮನವಿ
ವಾಣಿಜ್ಯ ಮಳಿಗೆಗಳು ಸಹ ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಸಾಮಾಜಿಕ ಅಂತರ, ಸ್ವತ್ಛತೆ ಹಾಗೂ ಇತರೆ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ, ಗ್ರಾಹಕರಿಗೆ ಹೊಸ ಅನುಭವವನ್ನು ನೀಡಲು ಸಿದ್ಧವಾಗಿವೆ. ಕಚೇರಿಗೆ ಬಂದು ಕೆಲಸ ಮಾಡುವುದು ಪ್ರಾರಂಭವಾದರೆ ವಾಣಿಜ್ಯ ಚಟುವಟಿಕೆಗಳು ಗರಿಗೆದರಲಿದೆ ಎಂದು ವ್ಯಾಪಾರಿಗಳು ಅಭಿಪ್ರಾಪಟ್ಟಿದ್ದಾರೆ.
ಹೊಸ ನಿರೀಕ್ಷೆಯಲ್ಲಿ
ವರ್ಕ್ ಫ್ರಂ ಹೋಮ್‌ನಿಂದಾಗಿ ಉದ್ಯೋಗಿಗಳನ್ನು ನೆಚ್ಚಿಕೊಂಡ ರಿಕ್ಷಾ ಹಾಗೂ ಕಾರ್ ಕ್ಯಾಬ್, ಶಾಂಪಿಂಗ್ ಸೆಂಟರ್, ಹೊಟೇಲ್, ಕಮರ್ಶಿಯಲ್ ಸ್ಟ್ರೀಟ್‌ಗಳಲ್ಲಿನ ವ್ಯಾಪಾರಕ್ಕೆ ಭಾರೀ ಹೊಡೆತ ಉಂಟಾಗಿತ್ತು.
ಕಳೆದ ಒಂದೂವರೆ ವರ್ಷದಿಂದ ವ್ಯಾಪಾರ ವಹಿವಾಟು ನಡೆಯದೆ ಬಣಗುಡುತ್ತಿದೆ. ಕೊರೊನಾ ಎರಡನೇ ಲಾಕ್‌ಡೌನ್ ಬಳಿಕ ವಹಿವಾಟು ಪ್ರಾರಂಭಗೊಂಡರೂ, ಹಿಂದಿನ ಸ್ಥಿತಿಗೆ ಇನ್ನೂ ಬಂದಿಲ್ಲ. ಇದೀಗ ವರ್ಕ್ ಫ್ರಂ ಹೋಮ್ ಮುಕ್ತಾಯಗೊಳ್ಳುತ್ತಿರುವುದು ವ್ಯಾಪಾರಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ಪ್ರಯಾಣಿಕರ ಸಂಖ್ಯೆ ಏರಿಕೆ
ಪ್ರಸ್ತುತ ಬಿಎಂಟಿಸಿ ಬಸ್‌ನಲ್ಲಿ ನಿತ್ಯ 25 ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ. ಕೊರೊನಾ ಲಾಕ್‌ಡೌನ್ ಮುನ್ನ ಸುಮಾರು 35 ಲಕ್ಷ ಪ್ರಯಾಣಿಕರು ಬಸ್‌ನಲ್ಲಿ ಸಂಚರಿಸುತ್ತಿದ್ದರು. ಲಾಕ್‌ಡೌನ್ ತೆರವುಗೊಂಡ ಬಳಿಕ ಬಸ್‌ನಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ವರ್ಕ್ ಫ್ರಂ ಹೋಮ್ ಮುಕ್ತಾಯಗೊಂಡರೆ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.
“ಸಾರಿಗೆ ವ್ಯವಸ್ಥೆಗಳು ಹಂತ ಹಂತವಾಗಿ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದೆ. 2020ರ ಮಾರ್ಚ್ ಪೂರ್ವದಲ್ಲಿನ ಸ್ಥಿತಿಗೆ ತಲುಪಲು ಸಮಯ ಬೇಕಾಗಿದೆ. ಪ್ರಸ್ತುತ ಬೆಳಗ್ಗೆಯಿಂದ ಸಂಜೆ 7.30ರ ವರೆಗೆ ಜನರು ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್‌ಗಳನ್ನು ಬಳಸುತ್ತಿದ್ದಾರೆ.
ನವೆಂಬರ್ ತಿಂಗಳಿನಲ್ಲಿ ವರ್ಕ್ ಫ್ರಂ ಹೋಮ್ ಕೊನೆಗೊಳಿಸುವುದಾಗಿ ಮಾಹಿತಿ ದೊರಕಿದೆ. ಆದರೆ, ಇದುವರೆಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಒಮ್ಮೆ ಐಟಿ-ಬಿಟಿ ಕಂಪನಿಗಳು ಕಾರ್ಯಾರಂಭಿಸಿದರೆ ಟ್ಯಾಕ್ಸಿ-ಮ್ಯಾಕ್ಸಿ ಕ್ಯಾಬ್ ಸೇವೆ ಪುನಾರಂಭವಾಗಲಿದೆ. ”
– ರಾಧಾಕೃಷ್ಣ ಹೊಳ್ಳ ಅಧ್ಯಕ್ಷ , ರಾಜ್ಯ ಪ್ರವಾಸಿ ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಮಾಲೀಕರ ಸಂಘ.
ವರ್ಕ್ ಫ್ರಂ ಹೋಮ್ ಮುಕ್ತಾಯವಾಗುತ್ತಿದೆ. ಜನವರಿ ಬಳಿಕ ವಾರದಲ್ಲಿ ಮೂರುದಿನ ಕಚೇರಿಗೆ ಬಂದು ಕೆಲಸ ಮಾಡಲು ತಿಳಿಸಿದ್ದಾರೆ. ಆದರೆ, ಇನ್ನೂ ಅಧಿಕೃತವಾಗಿ ಆದೇಶ ಸಿಕ್ಕಿಲ್ಲ. ಕೊರೊನಾ ವೇಳೆ ಸ್ವಲ್ಪ ಕಷ್ಟವಾದರೂ ಕಚೇರಿಗೆ ಬಂದು ಕೆಲಸ ಮಾಡುವುದು ನೆಮ್ಮದಿ ಎನಿಸುತ್ತದೆ. ಆದರೆ, ಪ್ರತಿನಿತ್ಯ ಮನೆಯಲ್ಲಿ ಕೆಲಸ ಮಾಡೋದು ಎಂದರೆ ಹಿಂಸೆಯಾಗುತ್ತಿದೆ. ಯಾವಾಗ ವರ್ಕ್ ಫ್ರಂ ಹೋಮ್‌ಗೆ ಮುಕ್ತಿ ಸಿಗುತ್ತದೆಯೋ ಎನ್ನುವಂತಾಗಿದೆ.
– ಶಶಾಂಕ್ ಪಿ.ಎಸ್, ಐಟಿ ಕಂಪನಿ ಉದ್ಯೋಗಿ
ಕೊರೊನಾ ಲಾಕ್‌ಡೌನ್ ಬಳಿಕ ರಾತ್ರಿ 10ರೊಳಗೆ ಜನರು ಮನೆ ಸೇರುತ್ತಿದ್ದರು. ಇದೀಗ ಜನರು ಹೆಚ್ಚಾಗಿ ಕಮರ್ಷಿಯಲ್ ಸ್ಟ್ರೀಟ್‌ಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಕಳೆದೊಂದು ತಿಂಗಳಿನಿಂದ ಶನಿವಾರ-ಭಾನುವಾರ ರಾತ್ರಿ 12ರ ವರೆಗೆ ಬಾಡಿಗೆ ಸಿಗುತ್ತಿದೆ. ಒಮ್ಮೆ ಐಟಿ-ಬಿಟಿ ಕಂಪನಿಗಳ ಸಿಬಂದಿ ಕಚೇರಿಗೆ ಬರಲಾಂಭಿಸಿದರೆ ಆಟೋಗಳ ಬೇಡಿಕೆ ಹೆಚ್ಚಾಗಲಿದೆ.
ಎರಡನೇ ಲಾಕ್‌ಡೌನ್ ನಂತರ ನಿತ್ಯ 1,000 ರೂ. ಬಾಡಿಗೆಯಾಗು ತ್ತಿದೆ. ಆದರೆ, ಈ ಹಿಂದೆ ಲಾಕ್‌ಡೌನ್ ಪೂರ್ವದಲ್ಲಿ ಎಲ್ಲ ಖರ್ಚು ಹೋಗಿ ಸುಮಾರು 1,500ರೂ. ಉಳಿಕೆಯಾಗುತ್ತಿತ್ತು.
– ಶಂಕರ್, ಆಟೋ ಚಾಲಕ, ಎಂಜಿ ರೋಡ್
ಸಾಮಾನ್ಯ ಶನಿವಾರ-ಭಾನುವಾರ ಗ್ರಾಹಕರ ಸಂಖ್ಯೆ ಹೆಚ್ಚಿರುತ್ತದೆ. ಕೊರೊನಾ ವೇಳೆ ಜನರು ಹೋಟೆಲ್ ಕಡೆಗೆ ಮುಖ ಮಾಡುವವರ ಸಂಖ್ಯೆ ಕಡಿಮೆಯಾಗಿತ್ತು. ಇದೀಗ ಐಟಿ-ಬಿಟಿ ಕಂಪನಿಗಳು ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಳ್ಳುತ್ತಿದೆ. ಅವರು ಮುಂದಿನ ದಿನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೋಟೆಲ್ ಗಳತ್ತ ಮುಖ ಹಾಕುವ ನಿರೀಕ್ಷೆ ಇದೆ. – ನಾಗರಾಜ್, ಮ್ಯಾನೇಜರ್, ಎಂಜಿ ರೋಡ್ ದಿ ಪಿಜ್ಜಾ ಬೇಕರಿ
– ತೃಪ್ತಿ ಕುಮ್ರಗೋಡು /ಭಾರತಿ ಸಜ್ಜನ್