Advertisement

ಮಾಸ್ಟರ್‌ ಕ್ಲಾಸ್‌ ಮಾಲಿಂಗ ವಿಜಯದ ವಿದಾಯ

12:06 AM Jul 28, 2019 | Sriram |

ಕೊಲಂಬೊ: “ಮಾಸ್ಟರ್‌ ಕ್ಲಾಸ್‌ ಬೌಲಿಂಗ್‌’ನೊಂದಿಗೆ ಶ್ರೀಲಂಕಾದ ಯಾರ್ಕರ್‌ ಕಿಂಗ್‌ ಲಸಿತ ಮಾಲಿಂಗ ಏಕದಿನ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದರು. ಇಲ್ಲಿನ “ಆರ್‌. ಪ್ರೇಮದಾಸ ಸ್ಟೇಡಿಯಂ’ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 91 ರನ್ನುಗಳಿಂದ ಮಣಿಸಿದ ಶ್ರೀಲಂಕಾ ತನ್ನ “ಬೌಲಿಂಗ್‌ ದೊರೆ’ಯ ವಿದಾಯವನ್ನು ಸ್ಮರಣೀಯಗೊಳಿಸಿತು.

Advertisement

ಈ ಪಂದ್ಯದಲ್ಲಿ ಲಸಿತ ಮಾಲಿಂಗ ಸಾಧನೆ 38ಕ್ಕೆ 3 ವಿಕೆಟ್‌. ಇದರಲ್ಲಿ ಒಂದು ವಿಕೆಟನ್ನು ಅವರು ಮೊದಲ ಓವರಿನಲ್ಲೇ ಉರುಳಿಸಿದರು. ಉಸ್ತುವಾರಿ ನಾಯಕ ತಮಿಮ್‌ ಇಕ್ಬಾಲ್‌ ಅವರನ್ನು ಶೂನ್ಯಕ್ಕೆ ಕ್ಲೀನ್‌ಬೌಲ್ಡ್‌ ಮಾಡಿ ಲಂಕೆಗೆ ಮೇಲುಗೈ ಒದಗಿಸಿದರು. ಪಂದ್ಯದ 9ನೇ ಓವರಿನಲ್ಲಿ ಮತ್ತೂಬ್ಬ ಆರಂಭಕಾರ ಸೌಮ್ಯ ಸರ್ಕಾರ್‌ (15) ಅವರನ್ನೂ ಬೌಲ್ಡ್‌ ಮಾಡಿದರು. 3ನೇ ವಿಕೆಟನ್ನು ತನ್ನ ಕಟ್ಟಕಡೆಯ ಎಸೆತದಲ್ಲಿ ಉರುಳಿಸಿ ಲಂಕಾ ಗೆಲುವನ್ನು, ತಮ್ಮ ವಿದಾಯವನ್ನು ಒಟ್ಟೊಟ್ಟಿಗೆ ಸಾರಿದರು.

ಇದರೊಂದಿಗೆ ಲಸಿತ ಮಾಲಿಂಗ ಅವರ ಒಟ್ಟು ವಿಕೆಟ್‌ 338ಕ್ಕೆ ಏರಿತು. 337 ವಿಕೆಟ್‌ ಕಿತ್ತ ಅನಿಲ್‌ ಕುಂಬ್ಳೆ ಅವರನ್ನು ಹಿಂದಿಕ್ಕಿ ಏಕದಿನ ಬೌಲಿಂಗ್‌ ಸಾಧಕರ ಯಾದಿಯಲ್ಲಿ 9ಕ್ಕೆ ಏರಿದರು.

ಬಾಂಗ್ಲಾ 223ಕ್ಕೆ ಆಲೌಟ್‌
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ 8 ವಿಕೆಟಿಗೆ 314 ರನ್‌ ಬಾರಿಸಿದರೆ, ಬಾಂಗ್ಲಾ 41.4 ಓವರ್‌ಗಳಲ್ಲಿ 223ಕ್ಕೆ ಆಲೌಟ್‌ ಆಯಿತು. ಮುಶ್ಫಿಕರ್‌ ರಹೀಂ 67, ಶಬ್ಬೀರ್‌ ರೆಹಮಾನ್‌ 60 ರನ್‌ ಮಾಡಿದ್ದನ್ನು ಬಿಟ್ಟರೆ ಉಳಿದವರ್ಯಾರೂ ಕ್ರೀಸ್‌ ಆಕ್ರಮಿಸಿಕೊಳ್ಳಲಿಲ್ಲ. 51ಕ್ಕೆ 3 ವಿಕೆಟ್‌ ಕಿತ್ತ ನುವಾನ್‌ ಪ್ರದೀಪ್‌ ಲಂಕೆಯ ಮತ್ತೋರ್ವ ಯಶಸ್ವಿ ಬೌಲರ್‌. 111 ರನ್‌ ಬಾರಿಸಿದ ಕುಸಲ್‌ ಪೆರೆರ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್‌:
ಶ್ರೀಲಂಕಾ-8 ವಿಕೆಟಿಗೆ 314 (ಕುಸಲ್‌ ಪೆರೆರ 111, ಏಂಜೆಲೊ ಮ್ಯಾಥ್ಯೂಸ್‌ 48, ಕುಸಲ್‌ ಮೆಂಡಿಸ್‌ 43, ಸೈಫ‌ುಲ್‌ 62ಕ್ಕೆ 3, ಮುಸ್ತಫಿಜುರ್‌ 75ಕ್ಕೆ 2). ಬಾಂಗ್ಲಾದೇಶ-41.4 ಓವರ್‌ಗಳಲ್ಲಿ 223 (ರಹೀಂ 67, ಶಬ್ಬೀರ್‌ 60, ಮಾಲಿಂಗ 38ಕ್ಕೆ 3, ಪ್ರದೀಪ್‌ 51ಕ್ಕೆ 3). ಪಂದ್ಯಶ್ರೇಷ್ಠ: ಕುಸಲ್‌ ಪೆರೆರ.

Advertisement

ಮಾಲಿಂಗ ಮೈಲುಗಲ್ಲು
ಒಟ್ಟು 338 ವಿಕೆಟ್‌ ಉರುಳಿಸಿ ಶ್ರೀಲಂಕಾದ ಬೌಲಿಂಗ್‌ ಸಾಧಕರ ಯಾದಿಯಲ್ಲಿ 3ನೇ ಸ್ಥಾನ. ಮುರಳೀಧರನ್‌ (523), ವಾಸ್‌ (399) ಮೊದಲೆರಡು ಸ್ಥಾನದಲ್ಲಿದ್ದಾರೆ.
2ನೇ ಅತ್ಯುತ್ತಮ ಸ್ಟ್ರೈಕ್‌ರೇಟ್‌ ಹೊಂದಿರುವ ಲಂಕಾ ಬೌಲರ್‌ (32.4). ಅಜಂತ ಮೆಂಡಿಸ್‌ಗೆ ಅಗ್ರಸ್ಥಾನ.
ಏಕದಿನದಲ್ಲಿ 3 ಸಲ ಹ್ಯಾಟ್ರಿಕ್‌ ಸಂಪಾದಿಸಿದ ವಿಶ್ವದ ಏಕೈಕ ಬೌಲರ್‌. ಇದರಲ್ಲಿ 2 ಹ್ಯಾಟ್ರಿಕ್‌ ವಿಶ್ವಕಪ್‌ನಲ್ಲಿ ಬಂದಿದ್ದು, ಇದೊಂದು ದಾಖಲೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 4 ಹ್ಯಾಟ್ರಿಕ್‌ ಸಾಧಿಸಿದ ಕೇವಲ 2ನೇ ಬೌಲರ್‌. ವಾಸಿಮ್‌ ಅಕ್ರಮ್‌ ಮತ್ತೂಬ್ಬ ಸಾಧಕ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 4 ಎಸೆತಗಳಲ್ಲಿ 4 ವಿಕೆಟ್‌ ಹಾರಿಸಿದ ಏಕೈಕ ಬೌಲರ್‌.
ವಿಶ್ವಕಪ್‌ ಬೌಲಿಂಗ್‌ ಸಾಧಕರ ಯಾದಿಯಲ್ಲಿ 3ನೇ ಸ್ಥಾನ (29 ಪಂದ್ಯ, 56 ವಿಕೆಟ್‌). ಗ್ಲೆನ್‌ ಮೆಕ್‌ಗ್ರಾತ್‌ (71), ಮುರಳೀಧರನ್‌ (68) ಮೊದಲೆರಡು ಸ್ಥಾನದಲ್ಲಿದ್ದಾರೆ.
ವಿಶ್ವಕಪ್‌ನಲ್ಲಿ ಅತೀ ಕಡಿಮೆ 26 ಇನ್ನಿಂಗ್ಸ್‌ಗಳಲ್ಲಿ 50 ವಿಕೆಟ್‌ ಕಿತ್ತ ಸಾಧಕ.
10ನೇ ಕ್ರಮಾಂಕದಲ್ಲಿ ಆಡಲಿಳಿದು ಅರ್ಧ ಶತಕ ಹೊಡೆದ ಲಂಕೆಯ ಏಕೈಕ ಆಟಗಾರ.

Advertisement

Udayavani is now on Telegram. Click here to join our channel and stay updated with the latest news.

Next