ನಟ ದರ್ಶನ್ ಅವರ ಹುಟ್ಟುಹಬ್ಬ ಕಳೆದ ವರ್ಷದಂತೆ ಈ ಬಾರಿಯೂ ಅರ್ಥಪೂರ್ಣ ವಾಗಿ ನಡೆದಿದೆ. ಕೇಕ್, ಹಾರಗಳ ಅಬ್ಬರ ವಿಲ್ಲದೇ, ದವಸ-ಧಾನ್ಯಗಳ ಉಡುಗೊರೆಯೊಂದಿಗೆ ಅಭಿಮಾನಿಗಳ ಪಾಲಿನ “ಡಿ ಬಾಸ್’ ದರ್ಶನ್ ಭಾನುವಾರ ಹುಟ್ಟುಹಬ್ಬ ಆಚರಿಸಿಕೊಂಡರು. ಕೇಕ್ ಕಟ್ ಮಾಡದೇ, ದೂರದ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂದ ಅಭಿಮಾನಿಗಳ ಜೊತೆ ಬೆರೆಯುವ ಮೂಲಕ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಂಡರು.
ಸರತಿ ಸಾಲಿನಲ್ಲಿ ಬಂದ ಅಭಿಮಾನಿಗಳ ಕೈ ಕುಲುಕುವ ಮೂಲಕ ಅವರ ಖುಷಿಗೆ ಕಾರಣವಾದ ದರ್ಶನ್ ತಮ್ಮ ಹುಟ್ಟುಹಬ್ಬದ ದಿನವನ್ನು ಅಭಿಮಾನಿಗಳಿಗೆ ಮೀಸಲಿಟ್ಟಿದ್ದರು. ಸಾಮಾನ್ಯವಾಗಿ ಸ್ಟಾರ್ ನಟರ ಬರ್ತ್‌ಡೇ ಅಂದರೆ ಕೇಕ್, ಹಾರಗಳ ರಾಶಿ ಬಿದ್ದಿರುತ್ತದೆ. ಆದರೆ, ದರ್ಶನ್ ಅಭಿಮಾನಿಗಳಿಗೆ ಕೇಕ್, ಹಾರ ತರಬಾರದು ಎಂದು ಹೇಳಿದ್ದರಿಂದ ದರ್ಶನ್ ಮನೆ ಸುತ್ತಮುತ್ತ ಕೇಕ್, ಹಾರವಿರ ಲಿಲ್ಲ. ಇದು ದರ್ಶನ್‌ಗೆ ಖುಷಿ ಕೊಟ್ಟಿದೆ.
“ಕೇಕ್, ಹಾರವಿಲ್ಲದೇ ಇಡೀ ವಠಾರ ಕ್ಲೀನ್ ಇದೆ. ಇಲ್ಲಾಂದ್ರೆ ರಾಶಿ ರಾಶಿ ಬಿದ್ದಿರುತ್ತಿತ್ತು. ಕಳೆದ ವರ್ಷಕ್ಕಿಂತಲೂ ಹೆಚ್ಚು ದವಸ-ಧಾನ್ಯ ಗಳು ಬಂದಿವೆ. ಒಂದಷ್ಟು ವೃದ್ಧಾಶ್ರಮ, ಅನಾಥಶ್ರಮಗಳು ತುಂಬುತ್ತವೆ. ಅದೇ ಖುಷಿ. ಇದು ಅಭಿಮಾನಿಗಳ ದಿನ. ಅವರ ಪ್ರೀತಿಗೆ ಬೆಲೆ ಕಟ್ಟಲಾಗದು’ ಎನ್ನುವ ಮೂಲಕ ಅಭಿಮಾನಿಗಳ ಕಾರ್ಯವನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಅಭಿಮಾನಿಗಳಿಂದ ಗಿಫ್ಟ್: ದವಸ- ಧಾನ್ಯಗಳ ಜೊತೆಗೆ ಒಂದಷ್ಟು ಅಭಿಮಾನಿಗಳು ದರ್ಶನ್‌ಗೆ ಮೊಲ, ಬಾತುಕೋಳಿ, ಕರುವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ದಾಸನ ಪ್ರಾಣಿ ಪ್ರೀತಿಗೆ ಅಭಿಮಾನಿಗಳು ಸಾಥ್ ನೀಡಿದ್ದಾರೆ. ದರ್ಶನ್ ಇದನ್ನು ಮೈಸೂರಿನ ಲ್ಲಿರುವ ತೋಟಕ್ಕೆ ಸಾಗಿಸಲಿದ್ದಾರೆ. ದರ್ಶನ್ ಅವರ ಕೆಲವು ಅಭಿಮಾನಿ ಸಂಘಗಳು ವೀಲ್‌ಚೇರ್ ಕೂಡಾ ವಿತರಿಸಿದೆ.
ಇನ್ನು, ದರ್ಶನ್ ಹುಟ್ಟುಹಬ್ಬ ದಿನ ಅಭಿಮಾನಿಗಳೊಂದಿಗೆ ಬೆರೆಯುವ ಜೊತೆಗೆ ಸಿನಿಮಾ ಕೆಲಸದಲ್ಲೂ ನಿರತರಾಗಿರುತ್ತಾರೆ. ಈ ಬಾರಿಯೂ ಕೊಂಚ ಬಿಡುವು ಮಾಡಿಕೊಂಡು “ರಾಬರ್ಟ್’ ಚಿತ್ರದ ಡಬ್ಬಿಂಗ್ ಮಾಡಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಮಾತನಾಡುವ ದರ್ಶನ್, “ಟೀಸರ್‌ನಲ್ಲಿ ನೋಡಿರೋದು ಬರೀ ಶೇ 10. ಸಿನಿಮಾ ಬೇರೇನೇ ಇದೆ. ತರುಣ್ ಏನು ಅಂದುಕೊಂಡಿದ್ದರೋ ಅದನ್ನು ಮಾಡಿದ್ದಾರೆ. ಚಿತ್ರ ಏಪ್ರಿಲ್‌ನಲ್ಲಿ ತೆರೆಗೆ ಬರಲಿದೆ’ ಎನ್ನುತ್ತಾರೆ.
ಕಳೆದ ವರ್ಷಕ್ಕಿಂತಲೂ ಹೆಚ್ಚು ದವಸ-ಧಾನ್ಯಗಳು ಬಂದಿವೆ. ಒಂದಷ್ಟು ವೃದ್ಧಾಶ್ರಮ, ಅನಾಥಶ್ರಮಗಳು ತುಂಬುತ್ತವೆ. ಅದೇ ಖುಷಿ. ಇದು ಅಭಿಮಾನಿಗಳ ದಿನ. ಅವರ ಪ್ರೀತಿಗೆ ಬೆಲೆ ಕಟ್ಟಲಾಗದು.
-ದರ್ಶನ್