Advertisement
ಮೆಣಸಿನಕಾಯಿಗೆ ಹೆಸರಾದ ಬ್ಯಾಡಗಿಯ ಹೊಲದಲ್ಲಿ, ಶೇಂಗಾ ಬೆಳೆಯುವುದಕ್ಕೆ ಆಗಷ್ಟೇ ಉಳುಮೆ ಮಾಡಿದ ಶುಷ್ಕ ಕಪ್ಪು ಮಣ್ಣಿನ ನೆಲದಲ್ಲಿ ಓಡಾಡುತ್ತಿದ್ದಾಗ, ಸರಸರ ಹರಿದಾಡುತ್ತಿದ್ದ ಓತಿಕ್ಯಾತದಂಥ ಪ್ರಾಣಿ ಕಣ್ಣಿಗೆ ಬಿತ್ತು. ಇದರ ಕತ್ತಿನ ಕೆಳಭಾಗದ ಬಣ್ಣ ಗಮನಿಸಿದಾಗ ಇದು ಓತಿಕ್ಯಾತ ಅಲ್ಲ ಎಂಬುದು ಅರಿವಾಯಿತು. ಮಣ್ಣಿನ ಗುಡ್ಡೆ ಏರಿ ನಿಂತು ಕತ್ತಿನ ಭಾಗವನ್ನು ಪುಷ್-ಅಪ್ ಮಾಡುತ್ತಿದ್ದಂತೆ ಅದರ ಗಂಟಲಿನ ವರ್ಣಮಯ ಬೀಸಣಿಕೆಯಂತಹ ಭಾಗವೇ ಹೇಳಿತು, ಇದು ಬೀಸಣಿಕೆ ಗಂಟಲಿನ ಹಲ್ಲಿ (ಫ್ಯಾನ್ ತ್ರೋಟೆಡ್ ಲಿಜಾರ್ಡ್) ಎಂದು.
Related Articles
Advertisement
ಇವು ಸುಮಾರು 26 ಮಿಲಿಯನ್ ವರ್ಷಗಳ ಹಿಂದೆಯೇ ಭೂಮಿಯಲ್ಲಿ ಕಾಣಿಸಿಕೊಂಡ ಸರೀಸೃಪಗಳು ಎನ್ನಲಾಗುತ್ತದೆ. ತಮ್ಮ ಹತ್ತಿರದ ಸಂಬಂಧಿಗಳಾದ ಕಾಂಗರೂ ಹಲ್ಲಿಗಳಿಂದ ಬೇರ್ಪಟ್ಟು ರೂಪಾಂತರಗೊಂಡ ಜೀವಿಗಳು. ಎರಡು ಗುಂಪುಗಳು ಲಕ್ಷಾಂತರ ವರ್ಷಗಳ ಹಿಂದೆ ತೇವಾಂಶವುಳ್ಳ ಕಾಡುಗಳಲ್ಲಿ ವಾಸಿಸುತ್ತಿದ್ದ ತಮ್ಮ ಪೂರ್ವಜರ ರೂಪದಿಂದ ವಿಕಸನಗೊಂಡು ಈ ರೂಪ ಪಡೆದಿವೆ ಎಂದು ನಂಬಲಾಗಿದೆ. ಭಾರತದಲ್ಲಿ ಕನಿಷ್ಠ 15 ಹಾಗೂ ಉಪಖಂಡದಲ್ಲಿ 18 ಕ್ಕೂ ಹೆಚ್ಚಿನ ಹಲ್ಲಿ ಜಾತಿಗಳಿವೆ. ಬೀಸಣಿಕೆ ಗಂಟಲಿನ ಹಲ್ಲಿಗಳು ಸೀತಾನಾ ಹಾಗೂ ಸರದಾ ಎಂಬ ಎರಡು ಕುಲಗಳಿಗೆ ಸೇರಿವೆ. ಇವು 5 ರಿಂದ 10 ಸೆಂ.ಮೀ.ಗಳಷ್ಟು ಉದ್ದವಾದ ದೇಹ ಹೊಂದಿದ್ದು, ದೇಹಕ್ಕಿಂತ ಉದ್ದವಾದ ತೆಳುವಾದ ಬಾಲವನ್ನು ಹೊಂದಿರುತ್ತವೆ. ಲೈಂಗಿಕ ದ್ವಿರೂಪತೆಯನ್ನು ಪ್ರದರ್ಶಿಸುವ ಈ ಜಾತಿಯಲ್ಲಿ ಗಂಡು ಹೆಚ್ಚು ವರ್ಣರಂಜಿತ. ಅದರ ಕೊರಳಿನ ಸುತ್ತ ಇರುವ ಚರ್ಮದ ಪ್ಲಾಪ್ ಕಪ್ಪು, ಕೆಂಪು, ನೀಲಿ ಬಣ್ಣಗಳ ಸಂಯೋಜನೆಯಿಂದಾಗಿ ಬಹಳ ಆಕರ್ಷಕವಾಗಿ ಕಾಣುತ್ತವೆ. ಹೆಣ್ಣು ಹಲ್ಲಿಗಳು ಸಾಮಾನ್ಯವಾಗಿ ಮಂದವಾದ ಬಣ್ಣ ಹೊಂದಿರುತ್ತವೆ.
ಬಾಲವೇ ವಿಶೇಷ..!
ಇರುವೆಗಳು, ಜೀರುಂಡೆಗಳು ಮತ್ತಿತರ ಸಣ್ಣ ಕೀಟಗಳೇ ಇವುಗಳ ಮುಖ್ಯ ಆಹಾರ. ಅತ್ಯುತ್ತಮ ದೃಷ್ಟಿ ಮತ್ತು ಚುರುಕುತನದಿಂದ, ತ್ವರಿತ ಹಠಾತ್ ಚಲನೆಗಳನ್ನು ಬಳಸಿಕೊಂಡು ಬೇಟೆಯಾಡುತ್ತವೆ. ಹಿಂದಿನ ಕಾಲುಗಳನ್ನು ಬಳಸಿ ಓಡುವ, ನಿಲ್ಲುವ ಸಾಮರ್ಥ್ಯ ಹೊಂದಿವೆ. ಹಗಲು ಹೊತ್ತಿನಲ್ಲಿ ಇವು ಹೆಚ್ಚು ಸಕ್ರಿಯವಾಗಿರುತ್ತವೆ. ತಮ್ಮ ಮರೆಮಾಚುವಿಕೆ ತಂತ್ರ, ವಿಷಸ್ರಾವ ಮಾಡುವುದು, ತಮ್ಮ ಬಾಲಗಳನ್ನೇ ಕಳಚಿ ಪರಭಕ್ಷಕಗಳಿಂದ ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತವೆಯಾದರೂ, ತೆರೆದ ಪ್ರದೇಶ, ಬಯಲುಗಳಲ್ಲಿಯೇ ಹೆಚ್ಚು ಓಡಾಡುತ್ತಿರುವುದರಿಂದ ಒಮ್ಮೊಮ್ಮೆ ಹಾವು, ಗಿಡುಗವೇ ಮೊದಲಾದ ಪರಭಕ್ಷಕಗಳಿಗೆ ಆಹಾರವಾಗಿ ಬಿಡುತ್ತವೆ. ಒಮ್ಮೆ ಕಳಚಿದ ಇವುಗಳ ಬಾಲ ಎಲ್ಲ ಹಲ್ಲಿಗಳಂತೆ ಮತ್ತೆ ಬೆಳೆಯುವುದೊಂದು ವಿಶೇಷ.
ಅದೃಷ್ಟದ ಸಂಕೇತ…
ಏಪ್ರಿಲ್, ಮೇ ತಿಂಗಳು ಬೀಸಣಿಕೆ ಗಂಟಲಿನ ಹಲ್ಲಿಗಳ ಸಂತಾನೋತ್ಪತ್ತಿಯ ಸಮಯ. ಹೆಣ್ಣನ್ನು ಆಕರ್ಷಿಸಲು ಗಂಡು ತನ್ನ ಗಂಟಲಿನ ಚರ್ಮವನ್ನು ಉಬ್ಬಿಸಿ ಬಣ್ಣದ ಬೀಸಣಿಕೆ ತೋರಿಸಿ ಆಕರ್ಷಿಸುತ್ತದೆ. ಯಶಸ್ವಿ ಸಂಯೋಗದ ನಂತರ ಹೆಣ್ಣು ಹಲ್ಲಿ, ಮಣ್ಣಿನ ಚಿಕ್ಕ ಚಿಕ್ಕ ಬಿಲಗಳಲ್ಲಿ ಮೊಟ್ಟೆಗಳನ್ನಿಟ್ಟು ಹಲವಾರು ವಾರಗಳ ಕಾಲ ಕಾವು ಕೊಡುತ್ತದೆ. ನಂತರದಲ್ಲಿ ಮರಿಗಳು ಹೊರಬಂದು ಹೊಸ ಜೀವನ ಆರಂಭಿಸುತ್ತವೆ. ರೈತಾಪಿ ಜನ ಬೀಸಣಿಕೆ ಗಂಟಲಿನ ಹಲ್ಲಿಯನ್ನು ಅದೃಷ್ಟದ ಸಂಕೇತವೆಂದು ನಂಬುತ್ತಾರೆ. ಇವು ಮಳೆಯ ಮುನ್ಸೂಚನೆ ನೀಡುತ್ತವೆ ಎಂದು ಭಾವಿಸುತ್ತಾರೆ. ಹೊಲ, ಗದ್ದೆಗಳಲ್ಲಿ ಕೀಟಗಳ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಇವು ಸಹಕಾರಿಯಾದ್ದರಿಂದ ರೈತರ ಪಾಲಿನ ಮಿತ್ರನೂ ಹೌದು.
–ಚಿತ್ರ-ಲೇಖನ: ಜಿ. ಆರ್. ಪಂಡಿತ್, ಸಾಗರ