ನವದೆಹಲಿ: ಭಾರತದ ಖ್ಯಾತ ಮಹಿಳಾ ವೇಟ್‌ಲಿಫ್ಟರ್, ಎರಡು ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತೆ ಸಂಜಿತಾ ಚಾನುಗೆ 4 ವರ್ಷಗಳ ನಿಷೇಧ ಹೇರಲಾಗಿದೆ. ನಾಡಾ (ರಾಷ್ಟ್ರೀಯ ಉದ್ದೀಪನ ನಿಗ್ರಹ ಸಂಸ್ಥೆ) ಕಳೆದ ವರ್ಷ ನಡೆಸಿದ ಉದ್ದೀಪನ ಸೇವನೆ ಪರೀಕ್ಷೆಯಲ್ಲಿ ಸಂಜಿತಾ ವಿಫಲರಾದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. 29 ವರ್ಷದ ಸಂಜಿತಾ ಡ್ರಾಸ್ಟಾನೊಲೊನ್ ಮೆಟಾಬೊಲೈಟ್ ಎಂಬ ಅನಾಬೊಲಿಕ್ ಸ್ಟೆರಾಯ್ಡ ಸೇವಿಸಿದ್ದು ಹೌದೆಂದು ಖಾತ್ರಿಯಾಗಿದೆ.
ಅವರ ಉದ್ದೀಪನ ಮಾದರಿಯನ್ನು 2022, ಸೆ.20ರಂದು ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಡೆದುಕೊಳ್ಳಲಾಗಿತ್ತು. ಅವರ ಶಿಕ್ಷಾವಧಿ 2022, ನ.12ರಿಂದಲೇ ಆರಂಭವಾಗುತ್ತದೆ. ಈ ವರ್ಷ ಏಷ್ಯನ್ ಗೇಮ್ಸ್, ಮುಂದಿನ ವರ್ಷ ಒಲಿಂಪಿಕ್ಸ್ ಇದೆ. ಇದೇ ಹೊತ್ತಿನಲ್ಲಿ ಹೀಗೊಂದು ನಿಷೇಧಕ್ಕೆ ತುತ್ತಾಗಿರುವುದರಿಂದ ಸಂಜಿತಾ ಕ್ರೀಡಾಜೀವನವೇ ಮುಗಿಯಬಹುದೆನ್ನುವ ಆತಂಕ ಶುರುವಾಗಿದೆ. ಈ ಬಗ್ಗೆ ಸಂಜಿತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ನಾಡಾದ ತೀರ್ಪಿನ ವಿರುದ್ಧ ಅಲ್ಲಿನ ಶಿಸ್ತುಸಮಿತಿಗೆ ದೂರು ಸಲ್ಲಿಸಬಹುದು. ಬಹುತೇಕ ಸಂದರ್ಭಗಳಲ್ಲಿ ಇಂತಹ ಅರ್ಜಿಗಳು ಅಥ್ಲೀಟ್‌ಗಳಿಗೆ ನೆರವಾಗಿಲ್ಲ.
ಒಂದು ವೇಳೆ ನಾಡಾದಲ್ಲಿ ಅವರಿಗೆ ಗೆಲುವಾದರೂ, ಮುಂದದು ವಾಡಾದಿಂದ (ವಿಶ್ವ ಉದ್ದೀಪನ ನಿಗ್ರಹ ಸಂಸ್ಥೆ) ಪ್ರಶ್ನಿಸಲ್ಪಡುತ್ತದೆ. ಒಟ್ಟಾರೆ ಈ ಪ್ರಕ್ರಿಯೆ ಸುದೀರ್ಘವಾಗಿರುವುದರಿಂದ ಸಂಜಿತಾ ಏನು ಮಾಡುತ್ತಾರೆ ಎನ್ನುವ ಕುತೂಹಲವಿದೆ.