ಬಾಯಲ್ಲಿ ನೀರೂರಿಸುವ ಗರಿಗರಿಯಾದ ಮಸಾಲೆ ದೋಸೆ ತಿನ್ನಲು ನೀವು ಬರಲೇಬೇಕಾದ ಹೋಟೆಲ್ ಮೈಸೂರಿನ ಗಾಯತ್ರಿ ಟಿಫಿನ್ ರೂಂ. ಶಾರ್ಟ್ ಫಾರ್ಮ್ನಲ್ಲಿ ಜಿಟಿಆರ್ ಎಂದೇ ಈ ಹೋಟೆಲ್ ಹೆಸರಾಗಿದೆ.
Advertisement
ಚಾಮುಂಡಿಪುರಂ ಮುಖ್ಯರಸ್ತೆಯಲ್ಲಿರುವ ಗಾಯತ್ರಿ ಹೋಟೆಲ್‌ಗೆ ಐದೂವರೆ ದಶಕದ ಇತಿಹಾಸವಿದೆ. 60ರ ದಶಕದಲ್ಲಿ ಮೈಸೂರು ಅಷ್ಟೇನೂ ಅಭಿವೃದ್ಧಿ ಹೊಂದಿರಲಿಲ್ಲ. ಆಗ ಮೈಲಿಗಟ್ಟಲೆ ನಡೆದು ಬಂದು ಇಲ್ಲಿ ತಿಂಡಿ ತಿಂದು, ಕಾಫಿ ಕುಡಿದು ಹೋಗುತ್ತಿದ್ದರಂತೆ. ಈಗ ಮೈಸೂರು ಸಾಕಷ್ಟು ಬೆಳೆದು, ಕಣ್ಣು ಹಾಯಿಸಿದ್ದಲ್ಲೆಲ್ಲಾ ಹೋಟೆಲ್‌ಗಳು ಕಾಣಸಿಕ್ಕರೂ ಜಿಟಿಆರ್‌ನ ರುಚಿಗೆ ಮಾರು ಹೋಗಿರುವ ಗ್ರಾಹಕರುನಾಲಗೆ ರುಚಿ ತಣಿಸಲು ಈ ಹೋಟೆಲ್‌ಅನ್ನು ಹುಡುಕಿಕೊಂಡು ಬರುವುದುಂಟು.
Related Articles
Advertisement
1960ರಲ್ಲಿ ಉಡುಪಿಯಿಂದ ಮೈಸೂರಿಗೆ ವಲಸೆ ಬಂದ ಸುಬ್ರಾಯ ಭಟ್ ಅವರು ಚಾಮುಂಡಿಪುರಂನಲ್ಲಿ ಸಣ್ಣದಾಗಿ ಬ್ರಾಹ್ಮಣರ ಫಲಹಾರ ಮಂದಿರ ಹೆಸರಿನಲ್ಲಿ ಈ ಹೋಟೆಲ್ ಆರಂಭಿಸಿದರು. ನೆಲದ ಮೇಲೆ ಮಣೆ ಹಾಕಿ ಗ್ರಾಹಕರನ್ನು ಕೂರಿಸಿ ಬಾಳೆಎಲೆಯಲ್ಲಿ ತಿನಿಸುಗಳನ್ನು ಬಡಿಸುತ್ತಿದ್ದರು. ಗುಣಮಟ್ಟದ ಸೇವೆಗಳಿಂದಾಗಿ ಕೆಲವೇ ವರ್ಷಗಳಲ್ಲಿ ಈ ಹೋಟೆಲ್ ಜನಪ್ರಿಯವಾಯಿತು. ಆ ನಂತರ ಗ್ರಾಹಕರು ಹೆಚ್ಚು ಬರತೊಡಗಿದ್ದರಿಂದ ಭಟ್ಟರು, ಈ ಕಟ್ಟಡದಲ್ಲೇ 1964ರಲ್ಲಿ ಗಾಯತ್ರಿ ಟಿಫಿನ್ ರೂಂ ಆರಂಭಿಸಿದರು. 54 ವರ್ಷಗಳಿಂದಲೂ ಹೋಟೆಲ್ ಜಿಟಿಆರ್, ಅದೇ ಶುಚಿ-ರುಚಿಯನ್ನು ಕಾಯ್ದುಕೊಂಡು ಗ್ರಾಹಕರನ್ನು ಸೆಳೆಯುತ್ತಿದೆ.
ಸುಬ್ರಾಯಭಟ್ಟರ ನಿಧನಾನಂತರ ಅವರ ನಾಲ್ಕು ಜನ ಗಂಡು ಮಕ್ಕಳೂ ಹೋಟೆಲ್ ವ್ಯವಹಾರ ನೋಡಿಕೊಳ್ಳುತ್ತಿದ್ದರು. ನಾಲ್ವರು ಗಂಡು ಮಕ್ಕಳ ಪೈಕಿ ರಾಮಚಂದ್ರರಾವ್, ಶ್ರೀನಿವಾಸನ್ ಹಾಗೂ ರಾಘವೇಂದ್ರ ಅವರು ತೀರಿಕೊಂಡಿದ್ದು, ಸುಬ್ರಾಯಭಟ್ಟರ ಮೂರನೇ ಮಗ ಗುರುರಾಜ್ ಮತ್ತು ಶ್ರೀನಿವಾಸನ್ ಅವರ ಮಗ ವಿಜಯೇಂದ್ರ ಅವರು ಪ್ರಸ್ತುತ ಜಿಟಿಆರ್ ಹೋಟೆಲ್‌ಅನ್ನು ಮುನ್ನಡೆಸುತ್ತಿದ್ದಾರೆ.ಮೈಸೂರಿಗೆ ಬಂದರೆ ಜಿಟಿಆರ್ ಮಸಾಲೆ ದೋಸೆ ಸವಿಯೋದನ್ನು ಮರೆಯಬೇಡಿ. – ಗಿರೀಶ್ ಹುಣಸೂರು