ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ, ನಟಿ, ನಮ್ಮ ಮೆಟ್ರೋ ಧ್ವನಿಯಾಗಿದ್ದ ಬಹುಮುಖ ಪ್ರತಿಭೆ ಅಪರ್ಣಾ ವಸ್ತಾರೆ (Aparna Vastarey) (58) ಅವರು ಗುರುವಾರ (ಜುಲೈ 11) ರಾತ್ರಿ ಅಸುನೀಗಿದ್ದಾರೆ. ಕಳೆದೆರಡು ವರ್ಷಗಳೊಂದಿಗೆ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಪರ್ಣಾ ಇಹಲೋಕದ ಯಾತ್ರೆ ಮುಗಿಸಿದ್ದಾರೆ.
1984ರಲ್ಲಿ ತೆರೆಕಂಡ ಪುಟ್ಟಣ ಕಣಗಾಲ್ ಅವರ ನಿರ್ದೇಶನದ ಮಸಣದ ಹೂವು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅಪರ್ಣಾ ಬಳಿಕ ಬಹುಮುಖಿ ಪ್ರತಿಭೆಯ ಮೂಲಕ ಕನ್ನಡಿಗರ ಮನೆಮಾತಾದವರು.
ಅಂಬರೀಶ್, ಜಯಂತಿ ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರದಲ್ಲಿ ಅಪರ್ಣಾ ಅವರಿಗೂ ಪ್ರಮುಖ ಪಾತ್ರವಿತ್ತು. ಚಿತ್ರದಲ್ಲಿ ಪಾರ್ವತಿ ಪಾತ್ರದಲ್ಲಿ ಅವರು ಮಿಂಚಿದ್ದರು. ಪುಟ್ಟಣ್ಣ ಅವರ ಗರಡಿಯಲ್ಲಿ ಬೆಳೆದ ಅಪರ್ಣಾ ಆ ನಂತರ ಕನ್ನಡದ ಬಹುತೇಕ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು. ಸಂಗ್ರಾಮ, ಒಂಟಿ ಸಲಗ, ಇನ್ಸ್‌ಪೆಕ್ಟರ್ ವಿಕ್ರಮ್, ಒಲವಿನ ಆಸರೆ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ರಂಗದಲ್ಲಿ ಬೇಡಿಕೆ ಇದ್ದರೂ ನಿರೂಪಣೆಯತ್ತ ಅವರು ಹೆಚ್ಚು ಒಲವು ತೋರಿದ್ದರು.
ವಿಮಾನ ನಿಲ್ದಾಣ, ಮೆಟ್ರೋದಲ್ಲಿ ಧ್ವನಿ!
ಪ್ರಮುಖವಾಗಿ ನಮ್ಮ ಮೆಟ್ರೋದಲ್ಲಿ ನಿಲುಗಡೆ ಮತ್ತು ಇತರೆ ಮಾಹಿತಿ ನೀಡುವ ಧ್ವನಿಯೂ ಇವರದ್ದೇ ಆಗಿದೆ. ಇದರ ಜತೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಇವರ ಧ್ವನಿಯನ್ನು ಕೇಳಬಹುದು.
ರಿಯಾಲಿಟಿ ಶೋ ಸೇರಿ ಧಾರಾವಾಹಿಯಲ್ಲಿ ನಟನೆ
ಸಿನಿಮಾ, ನಿರೂಪಣೆಯ ಜತೆಗೆ ಕಿರುತೆರೆಯಲ್ಲೂ ಅಪರ್ಣಾ ತೊಡಗಿಸಿಕೊಂಡಿದ್ದರು. ಮೂಡಲ ಮನೆ, ಮುಕ್ತ ಸೇರಿದಂತೆ ಅನೇಕ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಇದರ ಜತೆಗೆ 2013ರಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಸ್ಪರ್ಧಿಯಾಗಿದ್ದರು.
ಮಜಾ ಟಾಕೀಸ್‌ನ “ವರೂ’ ಎಂದೇ ಖ್ಯಾತಿ
2015 ಮತ್ತು 2021ರ ನಡುವೆ ನಟ ಸೃಜನ್ ಲೊಕೇಶ್ ಅವರು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನಡೆಸಿಕೊಡುತ್ತಿದ್ದ “ಮಜಾ ಟಾಕೀಸ್’ನಲ್ಲಿ ವರಲಕ್ಷ್ಮೀ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಸಿನಿಮಾ, ಧಾರಾವಾಹಿಯಿಂದ ಸಾಕಷ್ಟು ಅವಕಾಶಗಳು ಅಪರ್ಣಾ ಅವರಿಗೆ ಬರುತ್ತಿದ್ದರೂ ತಮ್ಮ ಆರೋಗ್ಯದ ಕಾರಣದಿಂದ ದೂರವೇ ಉಳಿದಿದ್ದರು.
ಸತತ 8 ಗಂಟೆ ನಿರೂಪಣೆ
1990ರ ದಶಕದಲ್ಲಿ ದೂರದರ್ಶನದಲ್ಲಿ ವಿವಿಧ ಕಾರ್ಯಕ್ರಮಗಳ ನಿರೂಪಕಿಯಾಗಿ ಅಪರ್ಣಾ ಕಾರ್ಯ ನಿರ್ವಹಣೆ ಮಾಡಿದ್ದರು. 1998ರಲ್ಲಿ ನಡೆದ ದೀಪಾವಳಿ ಕಾರ್ಯಕ್ರಮವೊಂದನ್ನು ಸತತ 8 ಗಂಟೆ ನಿರೂಪಣೆ ಮಾಡಿ ಅಪರ್ಣಾ ದಾಖಲೆ ಬರೆದಿದ್ದರು.