Advertisement

ಪ್ರಕಾಶಮಾನ ಪ್ರೀತಿಯಲ್ಲಿ ಫ್ಯಾಮಿಲಿ ದರ್ಶನ

10:32 AM Oct 02, 2017 | |

“ನಮ್ಮ ತಂದೆ ಯಾವತ್ತೂ ಹೇಳ್ತಾ ಇದ್ರು, ಈ ಪ್ರೀತಿ ಮತ್ತು ಫ್ಯಾಮಿಲಿ ಮಧ್ಯೆ ಯಾವತ್ತೂ ಸಿಕ್ಕಿ ಹಾಕೋಬಾರ್ಧು ಅಂತ …’ ತಾರಕ್‌ ಹೀಗೆ ಹೇಳುವ ಹೊತ್ತಿಗೆ ಪ್ರೀತಿ ಹಾಗೂ ಫ್ಯಾಮಿಲಿ ಎರಡರಲ್ಲೂ ಬಹು ದೂರ ಸಾಗಿರುತ್ತಾನೆ. ಫ್ಯಾಮಿಲಿಯ ಸಹವಾಸ ಬೇಡ ಎಂದು ಬರೋಬ್ಬರಿ 22 ವರ್ಷ ತನ್ನ ಕುಟುಂವನ್ನು ಬಿಟ್ಟು ವಿದೇಶದಲ್ಲಿದ್ದ ತಾರಕ್‌ ಬರೀ ಎರಡು ತಿಂಗಳಲ್ಲಿ ಫ್ಯಾಮಿಲಿ ಸೆಂಟಿಮೆಂಟ್‌ಗೆ ಒಳಗಾಗುತ್ತಾನೆ. ಲವ್‌, ಸೆಂಟಿಮೆಂಟ್‌ ಯಾವುದೂ ಇರದೇ “ಸ್ಟ್ರಿಕ್ಟ್ ಬಿಝಿನೆಸ್‌ಮ್ಯಾನ್‌’ ಆಗಿದ್ದ ತಾರಕ್‌, ಒಂದು ಹಂತಕ್ಕೆ ಫ್ಯಾಮಿಲಿ ಸೆಂಟ್‌ಮೆಂಟ್‌ಗೆ ಬಿದ್ದು ಒದ್ದಾಡುತ್ತಾನೆ ಕೂಡಾ.

Advertisement

ತಾತನ ಪ್ರೀತಿ ಆಸೆ, ಕನಸಿನ ಮುಂದೆ ತಾರಕ್‌ನ ಸಿಟ್ಟು ಕೂಡಾ ಕರಗುತ್ತಾ ಬರುತ್ತದೆ. ಸಿಂಗಲ್‌ ಆಗಿದ್ದ ತಾರಕ್‌ ಅವಿಭಕ್ತ ಕುಟುಂಬದಲ್ಲಿ ಮಿಂಗಲ್‌ ಆಗುತ್ತಾನೆ. ಅದಕ್ಕೊಂದು ಬಲವಾದ ಕಾರಣವಿದೆ. ಅದು ತೆರೆಯ ಮೇಲೆ … ಇದು ದರ್ಶನ್‌ ಅವರ “ತಾರಕ್‌’ ಸಿನಿಮಾದ್ದೇ ಒನ್‌ಲೈನ್‌. ದರ್ಶನ್‌ ಅವರ ಪಕ್ಕಾ ಮಾಸ್‌ ಅಭಿಮಾನಿಗಳಿಗೆ ಇದು “ನಮ್‌ ಬಾಸ್‌ ಸಿನಿಮಾ ಕಥೆನಾ’ ಎಂದು ಆಶ್ಚರ್ಯವಾಗಬಹುದು. ಆದರೂ ಸತ್ಯ. ಪಕ್ಕಾ ಫ್ಯಾಮಿಲಿ ಸೆಂಟಿಮೆಂಟ್‌ ಸಿನಿಮಾದಲ್ಲಿ ದರ್ಶನ್‌ ನಟಿಸಿದ್ದಾರೆ.

ಆ್ಯಕ್ಷನ್‌ ಹೀರೋ, ಮಾಸ್‌, ಖಡಕ್‌ ಡೈಲಾಗ್‌ ಎಂಬೆಲ್ಲಾ ಟ್ಯಾಗ್‌ಲೈನ್‌ಗಳು ದರ್ಶನ್‌ ಹಾಗೂ ಅವರ ಸಿನಿಮಾಗಳಿಗೆ ಇವೆ. ಆದರೆ, “ತಾರಕ್‌’ ಅವೆಲ್ಲದರಿಂದ ಮುಕ್ತ ಮುಕ್ತ. ಆ ಮಟ್ಟಿಗೆ ದರ್ಶನ್‌ ತಮಗೆ ಅಭಿಮಾನಿಗಳು ಕೊಟ್ಟ ಇಮೇಜ್‌ ಅನ್ನು ಬಿಟ್ಟು ಹೊಸ ತರಹದ ಪ್ರಯತ್ನ ಮಾಡಿದ್ದಾರೆ. ಈ ಹಿಂದೆ ದರ್ಶನ್‌ ಹೇಳಿದಂತೆ, ನಿರ್ದೇಶಕ ಪ್ರಕಾಶ್‌ ಶೈಲಿಯ ಸಿನಿಮಾವಿದು. ಅವರ ಶೈಲಿಯಲ್ಲಿ ದರ್ಶನ್‌ ನಟಿಸಿದ್ದಾರೆ. ಹಾಗಾಗಿ, ಸಾಮಾನ್ಯವಾಗಿ ದರ್ಶನ್‌ ಸಿನಿಮಾಗಳಲ್ಲಿ ಸಿಗುವ ಹೈವೋಲ್ಟೆಜ್‌ ಫೈಟ್‌, ಮಾಸ್‌ ಡೈಲಾಗ್‌, ಫ್ರೆàಮ್‌ ಟು ಫ್ರೆàಮ್‌ ಹೀರೋಯಿಸಂ ಅನ್ನು ಇಲ್ಲಿ ನೀವು ಬಯಸುವಂತಿಲ್ಲ. 

ಮೊದಲೇ ಹೇಳಿದಂತೆ ಇದು ತುಂಬು ಕುಟುಂಬವೊಂದರಲ್ಲಿ ನಡೆಯುವ ಕಥೆ. ಮುಖ್ಯವಾಗಿ ತಾತ ಹಾಗೂ ಮೊಮ್ಮಗನ ನಡುವಿನ ಬಾಂಧವ್ಯದ ಸುತ್ತ ಸಾಗುವ ಚಿತ್ರ. ಚಿತ್ರ ಆರಂಭವಾಗೋದು ಕೂಡಾ ಮೊಮ್ಮಗನ ಬರುವಿಕೆಗಾಗಿ ದೇವಸ್ಥಾನದ ಮುಂದೆ ಹರಕೆ ಹೊತ್ತು ಕೂತಿರುವ “ಶ್ರೀಮಂತ’ ತಾತನಿಂದಲೇ. ಇಷ್ಟು ಹೇಳಿದ ಮೇಲೆ ಒಂದಷ್ಟು ಅಂಶವನ್ನು ನೀವು ಊಹಿಸಿಕೊಳ್ಳಬಹುದು. ತುಂಬು ಕುಟುಂಬದ ಹಿರಿ ಜೀವವೊಂದು 22 ವರ್ಷ ತನ್ನಿಂದ ದೂರವಿದ್ದ ಮೊಮ್ಮಗನಿಗಾಗಿ ಹಾತೊರೆಯುವ ಸನ್ನಿವೇಶಗಳ ಮೂಲಕ ಬಹುತೇಕ ಸಿನಿಮಾ ಮುಗಿದು ಹೋಗುತ್ತದೆ. ಇಲ್ಲಿ ಹೆಚ್ಚಿನದ್ದೇನನ್ನೂ ನೀವು ನಿರೀಕ್ಷಿಸುವಂತಿಲ್ಲ. ಬಹುತೇಕ ನಿಮ್ಮ ಊಹೆಯಂತೆ ನಡೆಯುತ್ತದೆ ಕೂಡಾ.

 ನಾಯಕನ ಇಂಟ್ರೋಡಕ್ಷನ್‌, ಕಥೆಯನ್ನು ಹಿನ್ನೆಲೆಯಲ್ಲಿ ಬರುವ ಫ್ಲ್ಯಾಶ್‌ಬ್ಯಾಕ್‌, ಕಥೆಯನ್ನು ಟ್ರ್ಯಾಕ್‌ಗೆ ತರುವ ಕೆಲ ದೃಶ್ಯ ಹಾಗೂ ಹಾಡಿನಲ್ಲಿ ಮೊದಲರ್ಧ ಮುಗಿದು ಹೋಗುತ್ತದೆ. ಹಾಗಾಗಿ, ಇಲ್ಲಿ ತುಂಬು ಕುಟುಂಬವೊಂದರ ಸಂಭ್ರಮ, ಸಡಗರವನ್ನಷ್ಟೇ ಕಣ್ತುಂಬಿಕೊಳ್ಳಬೇಕು. ಒಂದಷ್ಟು ಟ್ವಿಸ್ಟ್‌ಗಳೊಂದಿಗೆ ಖುಷಿಕೊಡೋದು ದ್ವಿತೀಯಾರ್ಧದಲ್ಲಿ. ಇಲ್ಲಿ ಕೆಲವು ಅನಿರೀಕ್ಷಿತ ಅಂಶಗಳು ಬರುವ ಮೂಲಕ ನಿಧಾನವಾಗಿ ಸಾಗುತ್ತಿದ್ದ ಕಥೆಗೊಂದು ವೇಗ ಸಿಗುತ್ತದೆ. ಹಾಗಾಗಿಯೇ ಆರಂಭದಲ್ಲಿ ಎದುರಾಗುವ ಪ್ರಶ್ನೆಗಳಿಗೆ, ಕುತೂಹಲಗಳಿಗೆ ಇಲ್ಲಿ ಉತ್ತರವಿದೆ. ಆ ಮಟ್ಟಿಗೆ ಪ್ರಕಾಶ್‌ ತಮ್ಮ ಕಥೆಯನ್ನು “ಸೇಫ್ ಲ್ಯಾಂಡಿಂಗ್‌’ ಮಾಡಿದ್ದಾರೆನ್ನಬಹುದು.

Advertisement

ಮೊದಲೇ ಹೇಳಿದಂತೆ ಇದು ಪ್ರಕಾಶ್‌ ಶೈಲಿಯ ಸಿನಿಮಾ. ಹಾಗಾಗಿ, ಯಾವುದೇ ಅಬ್ಬರವಿಲ್ಲದೇ, ಅತಿಯಾದ ಎಕ್ಸೆ„ಟ್‌ಮೆಂಟ್‌ ಇಲ್ಲದೇ ತಣ್ಣಗೆ ಆವರಿಸಿಕೊಳ್ಳುತ್ತದೆ. ಕಥೆಯ ವಿಚಾರದಲ್ಲಿ ಹೇಳುವುದಾದರೆ ತೀರಾ ಹೊಸದೆನಿಸದ ಕಥೆ. ಅದನ್ನು ಹೊಸ ಬಗೆಯ ಸನ್ನಿವೇಶಗಳ ಮೂಲಕ ಹೊಸ ರೀತಿಯಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ ಪ್ರಕಾಶ್‌. ಪಕ್ಕಾ ಫ್ಯಾಮಿಲಿ ಪ್ಯಾಕೇಜ್‌ ಆಗಿದ್ದರಿಂದ ಕಾಮಿಡಿ ಟ್ರ್ಯಾಕ್‌ ಕೂಡಾ ಇದೆ. ಆದರೆ, ಅದು ಹೆಚ್ಚೇನು ಮಜಾ ಕೊಡೋದಿಲ್ಲ. ಅದರ ಹೊರತಾಗಿ ಹೇಳುವುದಾದರೆ “ತಾರಕ್‌’ ಒಂದು ಫ್ಯಾಮಿಲಿ ಎಂಟರ್‌ಟೈನರ್‌.

ಒಬ್ಬ ಮಾಸ್‌ ಹೀರೋ ಆಗಿ, ದೊಡ್ಡ ಮಾಸ್‌ ಅಭಿಮಾನಿ ವರ್ಗ ತಮ್ಮ ಹಿಂದಿದ್ದರೂ, ದರ್ಶನ್‌ ಮಾತ್ರ ಮಾಸ್‌ ಅಂಶಗಳಿಂದ ಮುಕ್ತವಾದ, ಹೊಸ ಬಗೆಯ ಕಥೆ ಹಾಗೂ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದರ್ಶನ್‌ ಅವರ ಈ ಪ್ರಯತ್ನ ಮೆಚ್ಚುವಂಥದ್ದು. ಬಿಲ್ಡಪ್‌ ಇಲ್ಲದ, ಸರಳ ವ್ಯಕ್ತಿತ್ವದ ಪಾತ್ರವನ್ನು ದರ್ಶನ್‌ ಅಚ್ಚುಕಟ್ಟಾಗಿ ನಟಿಸಿದ್ದಾರೆ. ಹೊಡೆದಾಟ-ಬಡಿದಾಟಗಳಿಗೆ ಹೆಚ್ಚು ಅವಕಾಶವಿಲ್ಲದ ಈ ಚಿತ್ರದಲ್ಲಿ ದರ್ಶನ್‌ ಪರ್‌ಫಾರ್ಮೆನ್ಸ್‌ಗೆ ಹೆಚ್ಚು ಜಾಗ ಸಿಕ್ಕಿದೆ ಮತ್ತು ಅವೆಲ್ಲದರಲ್ಲೂ ದರ್ಶನ್‌ ಇಷ್ಟವಾಗುತ್ತಾರೆ. ಇನ್ನು, ಇಡೀ ಸಿನಿಮಾದಲ್ಲಿ ಗಮನಸೆಳೆಯುವ ಮತ್ತೂಂದು ಪಾತ್ರವೆಂದರೆ ಅದು ದೇವರಾಜ್‌ ಅವರದು.

ತಾತನ ಪಾತ್ರದಲ್ಲಿ ದೇವರಾಜ್‌ ಅವರ ಗೆಟಪ್‌, ಮ್ಯಾನರೀಸಂ, ನಟನೆ ಇಷ್ಟವಾಗುತ್ತದೆ. ಸಿನಿಮಾದುದ್ದಕ್ಕೂ ಸಾಗಿ ಬರುವ ಪಾತ್ರದಲ್ಲಿ ದೇವರಾಜ್‌ ಮಿಂಚಿದ್ದಾರೆ. ನಾಯಕಿಯರಾದ ಶ್ರುತಿ ಹರಿಹರನ್‌ ಹಾಗೂ ಸಾನ್ವಿಗೆ ನಟನೆ ಅವಕಾಶವಿರುವ ಪಾತ್ರ ಸಿಕ್ಕಿದೆ. ಪ್ರೀತಿ ಹಾಗೂ ಜೀವನದ ಮಹತ್ವ ಕಲಿಸುವ ಪಾತ್ರದಲ್ಲಿ ಇಬ್ಬರು ಬಂದು ಹೋಗುತ್ತಾರೆ ಮತ್ತು ಇಷ್ಟವಾಗುತ್ತಾರೆ. ಉಳಿದಂತೆ ಅವಿನಾಶ್‌, ಚಿತ್ರಾ ಶೆಣೈ, ಕುರಿ ಪ್ರತಾಪ್‌ ನಟಿಸಿದ್ದಾರೆ. ಅರ್ಜುನ್‌ ಜನ್ಯ ಚಿತ್ರದ ಮೂರು ಹಾಡು ಇಷ್ಟವಾಗುತ್ತದೆ. ಕೃಷ್ಣಕುಮಾರ್‌ ಅವರ ಛಾಯಾಗ್ರಹಣದಲ್ಲಿ “ತಾರಕ’ ಸುಂದರ. 

ಚಿತ್ರ: ತಾರಕ್‌
ನಿರ್ಮಾಣ: ದುಷ್ಯಂತ್‌
ನಿರ್ದೇಶನ: ಪ್ರಕಾಶ್‌ 
ತಾರಾಬಳಗ: ದರ್ಶನ್‌, ಸಾನ್ವಿ, ಶ್ರುತಿ ಹರಿಹರನ್‌, ದೇವರಾಜ್‌, ಅವಿನಾಶ್‌ ಮತ್ತಿತರರು. 

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next