Advertisement

ಜಿಲ್ಲೆಯಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣ ಇಳಿಮುಖ

10:56 PM Mar 13, 2020 | mahesh |

ಉಡುಪಿ: ಜಿಲ್ಲೆಯಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. 2007ರಿಂದ 19ರ ವರೆಗೆ ಒಟ್ಟು 358 ಪ್ರಕರಣಗಳು ದಾಖಲಾಗಿವೆ. 2019-20ನೇ ಸಾಲಿನಲ್ಲಿ ಒಟ್ಟು 39 ಪ್ರಕರಣಗಳು ದಾಖಲಾಗಿದ್ದು, 21 ಪ್ರಕರಣಗಳು ಇತ್ಯರ್ಥವಾಗಿವೆ. 14 ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು 4 ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿಯಿವೆ.

Advertisement

2016-17ನೇ ಸಾಲಿನಲ್ಲಿ 40 ಪ್ರಕರಣ, 2017-18ರಲ್ಲಿ 62, 2018-19ರಲ್ಲಿ 67 ಪ್ರಕರಣಗಳು ದಾಖಲಾಗಿವೆ. 2019-20ರ ವರೆಗೆ ದಾಖಲಾದ ಪ್ರಕರಣಗಳ ಸಂಖ್ಯೆ ಕೇವಲ 39. ಈ ಪೈಕೆ 2016-17ನೇ ಸಾಲಿನಲ್ಲಿ 11, 2017-18ನೇ ಸಾಲಿನಲ್ಲಿ 17, 2018-19ನೇ ಸಾಲಿನಲ್ಲಿ 10 ಪ್ರಕರಣಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಒಟ್ಟು 190 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.

ಒಬ್ಬ ವ್ಯಕ್ತಿಯ ಮೇಲೆ ದೈಹಿಕ, ಮಾತಿನ ಮೂಲಕ ಭಾವನಾತ್ಮಕವಾಗಿ ನಡೆಯುವ ಹಿಂಸೆಯನ್ನು ಕೌಟುಂಬಿಕ ದೌರ್ಜನ್ಯ ಎನ್ನಲಾಗುತ್ತದೆ. ಇದರಿಂದ ಬಳಲುತ್ತಿರುವವರಲ್ಲಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಭಾರತದಲ್ಲಿ ಕೌಟುಂಬಿಕ ದೌರ್ಜನ್ಯಗಳು ಹೆಚ್ಚುತ್ತಿರುವ ಬಗ್ಗೆ ಸರಕಾರವು 2005ರಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯನ್ನು ಜಾರಿಗೆ ತಂದಿತ್ತು. ಅನಂತರ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಹತೋಟಿಗೆ ಬರತೊಡಗಿತ್ತು.

ಪುರುಷರ ಮೇಲೂ ದೌರ್ಜನ್ಯ
ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ಮಹಿಳೆಯರ ಮೇಲೆಯೇ ನಡೆಯುತ್ತಿವೆ. ಹಾಗೆಯೇ ಈ ಕಾನೂನಿನ ದುರ್ಬಳಕೆಯೂ ಆಗುತ್ತಿದೆ. ದೌರ್ಜನ್ಯ ನಡೆಸದಿದ್ದರೂ ಜೀವನಾಂಶಕ್ಕಾಗಿ ದೌರ್ಜನ್ಯದ ಆರೋಪ ಹೊರಿಸುವ ಘಟನೆಗಳೂ ಜಿಲ್ಲೆಯಲ್ಲಿ ನಡೆದಿವೆ.ಆದರೆ ಪುರುಷರ ಮೇಲೆ ನಡೆದ ಕೌಟುಂಬಿಕ ದೌರ್ಜನ್ಯ ಕಾಯ್ದೆಯ ವಿರುದ್ಧ ಹೋರಾಡಲು ಯಾವುದೇ ಸೂಕ್ತ ಕಾನೂನು ಇಲ್ಲದ ಕಾರಣ ಅವುಗಳು ಬೆಳಕಿಗೆ ಬರುತ್ತಿಲ್ಲ.

ಸಖಿ ಸೆಂಟರ್‌ ಮೂಲಕ ನೆರವು
ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಖಿ ಸೆಂಟರ್‌, ಸಾಂತ್ವನ ಕೇಂದ್ರಗಳ ಮೂಲಕ ಸಮಸ್ಯೆ ನಿವಾರಿಸುವ ಕೆಲಸ ಮಾಡಲಾಗುತ್ತಿದೆ. ಲೈಂಗಿಕ ದೌರ್ಜನ್ಯ, ಮಾನಸಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಸಖೀ ಒನ್‌ ಸೆಂಟರ್‌ ಮೂಲಕ ಮಾಹಿತಿ ನೀಡಲಾಗುತ್ತಿದೆ. ಅಲ್ಲದೆ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಕಡೆ ಆರೋಗ್ಯ, ಕಾನೂನು, ವಸತಿ ಮತ್ತು ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಸಖೀ ವನ್‌ ಸ್ಟಾಪ್‌ ಸೆಂಟರ್‌ ಕಾರ್ಯನಿರ್ವಹಿಸುತ್ತಿದೆ.

Advertisement

ಪ್ರಕರಣಗಳ ಇತ್ಯರ್ಥಕ್ಕೆ ಯತ್ನ
ಕೌಟುಂಬಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯಿಂದ ಕೌನ್ಸೆಲಿಂಗ್‌ ಮಾಡುವಂತಹ ಕೆಲಸಗಳು ನಡೆಯುತ್ತಿವೆ. ಸಾಂತ್ವನ ಕೇಂದ್ರಗಳ ಮೂಲಕ ಅಧಿಕಾರಿಗಳು ದೌರ್ಜನ್ಯಕ್ಕೊಳಗಾದವರೊಂದಿಗೆ ಚರ್ಚಿಸಿ ಪ್ರಕರಣವನ್ನು ಇತ್ಯರ್ಥಪಡಿಸಲು ಯತ್ನಿಸುತ್ತಿದೆ.
-ಶೇಷಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next