Advertisement

Karnataka Election 2023; ಮಾಜಿ ಸಿಎಂಗಳ ಕುಡಿಗಳ ರಾಜಕಾರಣ; ಈ ಬಾರಿ 11 ಮಂದಿ ಅಖಾಡದಲ್ಲಿ

01:10 AM Apr 06, 2023 | Team Udayavani |

ಬೆಂಗಳೂರು: ರಾಜ್ಯವನ್ನಾಳಿದ ಮಾಜಿ ಮುಖ್ಯಮಂತ್ರಿಗಳ ಕುಟುಂಬ ಸದಸ್ಯರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಅಸ್ತಿತ್ವಕ್ಕಾಗಿ “ಹೋರಾಟ’ ನಡೆಸಲು ಸಜ್ಜಾಗಿದ್ದಾರೆ.

Advertisement

ಮಾಜಿ ಮುಖ್ಯಮಂತ್ರಿಗಳಾದ ಗುಂಡೂರಾವ್‌, ಎಸ್‌. ಬಂಗಾರಪ್ಪ, ಎಚ್‌.ಡಿ.ದೇವೇಗೌಡ, ಎಸ್‌.ಆರ್‌.ಬೊಮ್ಮಾಯಿ, ಜೆ.ಎಚ್‌.ಪಟೇಲ್‌, ಧರಂಸಿಂಗ್‌, ಎಚ್‌.ಡಿ.ಕುಮಾರಸ್ವಾಮಿ, ಬಿ.ಎಸ್‌.ಯಡಿಯೂರಪ್ಪ ಕುಟುಂಬ ಸದಸ್ಯರು ಚುನಾವಣಾ ಅಖಾಡದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಮಾಜಿ ಮುಖ್ಯಮಂತ್ರಿಗಳ ಕುಟುಂಬ ಸದಸ್ಯರು ರಾಜಕಾರಣ ಪ್ರವೇಶ ಕರ್ನಾಟಕದ ಮಟ್ಟಿಗೆ ಹೊಸದೇನಲ್ಲ. ದೇವರಾಜ ಅರಸು ಅವರಿಂದ ಹಿಡಿದು ಬಿ.ಎಸ್‌.ಯಡಿಯೂರಪ್ಪವರೆಗೆ ಕುಟುಂಬದ ಕುಡಿಗಳು ರಾಜಕೀಯ “ರಂಗಪ್ರವೇಶ’ ಮಾಡಿ ಸೋಲು-ಗೆಲುವು ಕಂಡಿದ್ದಾರೆ.

ಇದರ ನಡುವೆ, ಎಂ. ವೀರಪ್ಪ ಮೊಯ್ಲಿ, ಎಸ್‌.ಎಂ.ಕೃಷ್ಣ ಅವರ ಕುಟುಂಬ ಸದಸ್ಯರು ರಾಜಕೀಯ ಪ್ರವೇಶ ಮಾಡಿಲ್ಲ. ಎಸ್‌.ಎಂ.ಕೃಷ್ಣ ಅವರ ಪುತ್ರಿ ಶಾಂಭವಿ ಅವರ ಹೆಸರು ಒಮ್ಮೆ ಮದ್ದೂರು, ರಾಜರಾಜೇಶ್ವರಿನಗರ ಕ್ಷೇತ್ರದಿಂದ ಕೇಳಿಬಂದಿತ್ತಾದರೂ ಸ್ಪರ್ಧೆ ಮಾಡಿರಲಿಲ್ಲ.

ಅದೇ ರೀತಿ ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯಿಲಿ ಅವರ ಹೆಸರು ಚಿಕ್ಕಬಳ್ಳಾಪುರ ಲೋಕಸಭೆ, ದಕ್ಷಿಣ ಕನ್ನಡ ಲೋಕಸಭೆ, ಕಾರ್ಕಳ ವಿಧಾನಸಭೆಗೆ ಕೇಳಿ ಬಂದಿತ್ತಾದರೂ ಸ್ಪರ್ಧೆ ಮಾಡಿರಲಿಲ್ಲ. ಡಿ.ವಿ.ಸದಾನಂದಗೌಡ, ಜಗದೀಶ್‌ ಶೆಟ್ಟರ್‌ ಅವರ ಕುಟುಂಬ ಸದಸ್ಯರು ರಾಜಕಾರಣದಲ್ಲಿ ಇಲ್ಲ.

Advertisement

ದೇವರಾಜ ಅರಸು ಅವರ ಪುತ್ರಿ ಚಂದ್ರಪ್ರಭಾ ಅರಸು ಒಮ್ಮೆ ಹುಣಸೂರಿನಿಂದ ಶಾಸಕಿಯಾಗಿ ಮತ್ತೂಮ್ಮೆ ಮೈಸೂರು ಲೋಕಸಭೆ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿದ್ದರು.

ವೀರೇಂದ್ರಪಾಟೀಲ್‌ ಅವರ ಪುತ್ರ ಕೈಲಾಶ್‌ನಾಥ ಪಾಟೀಲ್‌ ಒಮ್ಮೆ ಚಿಂಚೋಳಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಆ ನಂತರ ಕ್ಷೇತ್ರ ಮರುವಿಂಗಡಣೆಯಲ್ಲಿ ಚಿಂಚೋಳಿ ಮೀಸಲು ಕ್ಷೇತ್ರವಾಗಿ ಮಾರ್ಪಾಟ್ಟ ಬಳಿಕ ಕಲಬುರಗಿ ದಕ್ಷಿಣದಿಂದ 2013 ರಲ್ಲಿ ಸ್ಪರ್ಧಿಸಿದರೂ ಜಯಸಿಗಲಿಲ್ಲ. ಆ ನಂತರ ರಾಜಕಾರಣದಿಂದ ದೂರವಾದರು. ರಾಮಕೃಷ್ಣ ಹೆಗಡೆ ಪುತ್ರಿ ಮಮತಾ ನಿಚ್ಚಾಣಿ ಒಮ್ಮೆ ರಾಮನಗರದಿಂದ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಿದ್ದರೂ ಗೆಲುವು ಸಿಗಲಿಲ್ಲ. ಅದಕ್ಕೂ ಮುನ್ನ ಹೆಗಡೆ ಪತ್ನಿ ಶಕುಂತಲಾ ಹೆಗಡೆ ರಾಜ್ಯಸಭೆ ಚುನಾವಣೆಗೆ ಸ್ಪರ್ಧೆ ಮಾಡಿ ಸೋತಿದ್ದರು. ಪುತ್ರ ಭರತ್‌ ಹೆಗಡೆ ಬಿಜೆಪಿ ಜತೆ ಗುರುತಿಸಿಕೊಂಡರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರಲಿಲ್ಲ.

ಜೆ.ಎಚ್‌.ಪಟೇಲ್‌ ಅವರ ಪುತ್ರ ಮಹಿಮಾ ಪಟೇಲ್‌ ಒಮ್ಮೆ ಚನ್ನಗಿರಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಆ ನಂತರ ತಮ್ಮದೇ ಆದ ರಾಜಕೀಯ ವೇದಿಕೆ ಸ್ಥಾಪಿಸಿ ನಂತರ ಜೆಡಿಯು, ಜೆಡಿಎಸ್‌ ಪಕ್ಷಗಳಲ್ಲಿ ಗುರುತಿಸಿಕೊಂಡು ಇದೀಗ ನಿತೀಶ್‌ಕುಮಾರ್‌ ಅವರ ಜೆಡಿಯು ರಾಜ್ಯಾಧ್ಯಕ್ಷರಾಗಿದ್ದಾರೆ.

ಕುಟುಂಬ ಕುಡಿಗಳು
ಎಚ್‌.ಡಿ.ದೇವೇಗೌಡರ ಪುತ್ರರಾದ ಎಚ್‌.ಡಿ.ಕುಮಾರಸ್ವಾಮಿ ಚನ್ನಪಟ್ಟಣ ಹಾಗೂ ಎಚ್‌.ಡಿ.ರೇವಣ್ಣ ಹೊಳೇನರಸೀಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.

ಗುಂಡೂರಾವ್‌ ಪುತ್ರ ದಿನೇಶ್‌ ಗುಂಡೂರಾವ್‌ ಬೆಂಗಳೂರಿನ ಗಾಂಧಿನಗರ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಬಂಗಾರಪ್ಪ ಪುತ್ರರಾದ ಮಧು ಬಂಗಾರಪ್ಪ, ಕುಮಾರ್‌ ಬಂಗಾರಪ್ಪ ಇಬ್ಬರೂ ಸೊರಬ ಕ್ಷೇತ್ರದಿಂದ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷದಿಂದ ಮುಖಾಮುಖಿಯಾಗಲಿದ್ದಾರೆ.

ಧರ್ಮಸಿಂಗ್‌ ಪುತ್ರರಾದ ಡಾ.ಅಜಯ್‌ಸಿಂಗ್‌ ಜೇವರ್ಗಿಯಿಂದ ಸ್ಪರ್ಧೆ ಮಾಡಲಿದ್ದು ವಿಜಯ್‌ಸಿಂಗ್‌ ಬಸವ ಕಲ್ಯಾಣ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ಜೆ.ಎಚ್‌.ಪಟೇಲ್‌ ಪುತ್ರ ಮಹಿಮಾ ಪಟೇಲ್‌ ಚನ್ನಗಿರಿ ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ. ಎಸ್‌.ಆರ್‌.ಬೊಮ್ಮಾಯಿ ಪುತ್ರ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವ್‌ನಿಂದಲೇ ಕಣಕ್ಕಿಳಿಯಲಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಪುತ್ರ ವಿಜಯೇಂದ್ರ ಶಿಕಾರಿಪುರ ಅಥವಾ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಇವರ ಮತ್ತೊಬ್ಬ ಪುತ್ರ ರಾಘವೇಂದ್ರ ಶಿವಮೊಗ್ಗ ಸಂಸದರೂ ಆಗಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ರಾಮನಗರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ತ್ಯಾಗವೂ ಉಂಟು…
ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಮಧುಗಿರಿ ಹಾಗೂ ರಾಮನಗರ ಕ್ಷೇತ್ರದಿಂದ ಎರಡು ಬಾರಿ ಶಾಸಕಿಯಾಗಿದ್ದರು. ಈ ಬಾರಿ ಪುತ್ರನಿಗಾಗಿ ಕ್ಷೇತ್ರ ತ್ಯಾಗ ಮಾಡಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ತಂದೆಗಾಗಿ ಕ್ಷೇತ್ರ ತ್ಯಾಗ ಮಾಡಿದ್ದಾರೆ.

ಇಬ್ಬರು ಸಿಎಂಗಳ ಮಕ್ಕಳು ಸಿಎಂ
ಎಚ್‌.ಡಿ.ದೇವೇಗೌಡರ ಪುತ್ರ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಅದೇ ರೀತಿ ಎಸ್‌.ಆರ್‌.ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಸಹ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಮಾಜಿ ಮುಖ್ಯಮಂತ್ರಿಗಳ ಕುಟುಂಬ ಸದಸ್ಯರ ಶಾಸಕ, ಸಂಸದರಾದರೂ ಮುಖ್ಯಮಂತ್ರಿ ಆಗುವ ಯೋಗ ಬಂದಿದ್ದು ಎಚ್‌.ಡಿ.ಕುಮಾರಸ್ವಾಮಿ ಹಾಗೂ ಎಸ್‌.ಆರ್‌.ಬೊಮ್ಮಾಯಿ ಅವರಿಗೆ ಮಾತ್ರ.

ಯಾರ್ಯಾರು?
-ಎಚ್‌.ಡಿ.ದೇವೇಗೌಡರ ಪುತ್ರರಾದ ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಡಿ.ರೇವಣ್ಣ
-ಗುಂಡೂರಾವ್‌ ಪುತ್ರ ದಿನೇಶ್‌ ಗುಂಡೂರಾವ್‌
-ಬಂಗಾರಪ್ಪ ಪುತ್ರರಾದ ಮಧು ಬಂಗಾರಪ್ಪ, ಕುಮಾರ್‌ ಬಂಗಾರಪ್ಪ
-ಧರ್ಮಸಿಂಗ್‌ ಪುತ್ರರಾದ ಡಾ.ಅಜಯ್‌ಸಿಂಗ್‌, ವಿಜಯ್‌ಸಿಂಗ್‌
-ಜೆ.ಎಚ್‌.ಪಟೇಲ್‌ ಪುತ್ರ ಮಹಿಮಾ ಪಟೇಲ್‌
-ಎಸ್‌.ಆರ್‌.ಬೊಮ್ಮಾಯಿ ಪುತ್ರ ಬಸವರಾಜ ಬೊಮ್ಮಾಯಿ
-ಬಿ.ಎಸ್‌.ಯಡಿಯೂರಪ್ಪ ಪುತ್ರ ವಿಜಯೇಂದ್ರ
-ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ

-ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next