Advertisement
ಇವತ್ತು ಒಂದು ಬಗೆಯ ಸಂಕೀರ್ಣ ದಿನಮಾನ. ಗಂಡಸರೂ ಹೆಂಗಸರೂ ಮನೆಯಲ್ಲಿಯೇ ಇದ್ದು ದುಡಿಯುವ ಕಾಲವೊಂದಿತ್ತು. ಮೊದಲು ಗಂಡಸು ಹೊರಗೆ ನೌಕರಿಶಾಹಿಯಲ್ಲಿ ದುಡಿಯಲಾರಂಭಿಸಿದ. ಹೊರಗೆ ಹೋಗಿ ಬರುವ ಗಂಡಂದಿರ ಮೇಲೆ ಹೆಂಡತಿಯರು ಸಂಶಯ ತಾಳಲಿಲ್ಲ. ಗಂಡ ಕೆಲಸ ಮುಗಿಸಿ ತಡವಾಗಿ ಬರುವುದು ಬಹಳ ಸಾಮಾನ್ಯವಾದರೂ ಆಕ್ಷೇಪಿಸಲಿಲ್ಲ. ನಿಧಾನವಾಗಿ ಹೆಂಗಸರೂ ಕೂಡ ಹೊರಗೆ ದುಡಿಯಲಾರಂಭಿಸಿದರು. ಇಬ್ಬರೂ ನೌಕರಿಗೆ ಹೋಗಲಾರಂಭಿಸಿದಾಗ ಮನೆ ಖಾಲಿ ಬೀಳಲಾರಂಭಿಸಿತು. ಸಂಜೆ ಮನೆಗೆ ಮರಳುವಾಗ ಸ್ವಾಗತಿಸಲು ಹೆಂಡತಿ ಇಲ್ಲ. ಹೆಂಡತಿಯನ್ನು ಸ್ವಾಗತಿಸಲು ಗಂಡನೂ ಕೆಲಸಕ್ಕೆ ಹೋಗಿದ್ದಾನೆ. ಹೀಗಾಗಿ, ಮನಸ್ಸುಗಳ ನಡುವೆ ಸಣ್ಣದೊಂದು ಕಂದಕ ಏರ್ಪಡುತ್ತದೆ.
Related Articles
Advertisement
ಅನನ್ಯಾಳ ಪತ್ತೇದಾರಿಕೆ !ಇದೊಂದು ಅತೀ ಸೂಕ್ಷ್ಮದ ವಿಷಯ, ನಾಲ್ಕು ಗೋಡೆಗಳ ಮಧ್ಯೆ ಇರಬೇಕಾದ್ದೇ ಹೊರತು, ಹೊರಗಲ್ಲ ! ಅನನ್ಯಾ-ಆಕಾಶ್ ದಂಪತಿಯ ದುರಂತ ಕಥೆ. ಆಕಾಶ್‌ನ ಜ್ಞಾನ, ಕೌಶಲ ಎಲ್ಲವೂ ಉತ್ತಮ. ಅವನ ಪಂಚಪ್ರಾಣದಂಥ ಹವ್ಯಾಸವೆಂದರೆ ದೇಶಗಳನ್ನು ಸುತ್ತೋದು, ಅದೆಷ್ಟು ದೇಶಗಳ್ಳೋ, ವರ್ಷಕ್ಕೆಷ್ಟು ರಜೆಗಳನ್ನು ತಗೊತ್ತಿದ್ದನೋ ! ಅವನಿಗೆ ಮದುವೆ ಮಾಡಲು ಹೊರಟರು ಅವನ ಹೆತ್ತವರು. ಅವನಿಗೆ ಸುತಾರಾಂ ಮನಸ್ಸಿಲ್ಲ. ಕೊನೆಗೆ ಹೇಗೋ ಒಪ್ಪಿಗೆ ಕೊಟ್ಟ. ಅನನ್ಯಾಳೊಂದಿಗೆ ಮದುವೆಯಾಯಿತು.
ಮದುವೆಯಾದ ಒಂದು ವರ್ಷ ಸರಿಯಾಗಿದ್ದರು. ಅದೊಂದು ದಿನ ಆಕಾಶ್‌ನ ಸಹೋದ್ಯೋಗಿ ಸುರೇಖಾಳಿಗೆ ಅನನ್ಯಾಳಿಂದ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂತು, ಅವಳು ಅಕ್ಸೆಪ್ಟ್ ಮಾಡಿದಳು. ಸ್ವಲ್ಪ ಹೊತ್ತಿನಲ್ಲಿಯೇ ಫೇಸ್‌ಬುಕ್ ಮೆಸೆಂಜರ್‌ನಿಂದ ಕಾಲ್ ಬರೋಕೆ ಶುರುವಾಯಿತು. “ಇದೇನಪ್ಪ ತಪ್ಪಿ ಮಾಡ್ತಿದ್ದಾಳ್ಳೋ’ ಅಂತ ಫೋನ್ ರಿಸೀವ್ ಮಾಡಲಿಲ್ಲ ಸುರೇಖಾ. ಹಾಗೆ ಮತ್ತೆ ಅದೇ ದಿನ ಸಂಜೆ, ಅನನ್ಯಾಳಿಂದ ಮೆಸೇಜ್ ಬಂತು. “ಅರ್ಜೆಂಟ್ ಆಗಿ ನಿನ್ನತ್ರ ಮಾತಾಡಬೇಕು, ನಂಬರ್ ಕೊಡ್ತೀಯ’ ಅಂತ. ಸುಮ್ಮನೆ ಹೀಗೆ ಕೇಳುತ್ತಿರಬಹುದು ಎಂದು ನಂಬರ್ ಕೊಟ್ಟಳು ಸುರೇಖಾ. ಫೋನ್ ಮಾಡಿದಳು. ಕುಶಲೋಪರಿ ವಿಚಾರಿಸಿದ ಅನನ್ಯಾ ನಂತರ ಆಕಾಶ್ ಬಗ್ಗೆ ಸುರೇಖಾ ಹತ್ತಿರ ಕೇಳ್ಳೋಕೆ ಶುರು ಹಚ್ಚಿಕೊಂಡಳು. ಸುರೇಖಾಳಿಗೆ ಆಶ್ಚರ್ಯವೋ ಆಶ್ಚರ್ಯ! ಆಕಾಶ್‌ನ ಆಫೀಸಿನ ಚಟುವಟಿಕೆಗಳ ಬಗ್ಗೆ ಅವಳು ತಾನೆ ಹೇಗೆ ಹೇಳಿಯಾಳು! ಆಫೀಸಿನಿಂದ ಅವನನ್ನು ಅಮೆರಿಕಕ್ಕೆ ಕಳಿಸುವವರಿದ್ದರು. ಎಷ್ಟು ಸಮಯಕ್ಕೆ ಅಮೆರಿಕಕ್ಕೆ ಹೋಗ್ತಿದ್ದಾನೆ, ಯಾರೆಲ್ಲ ಅಂತೆಲ್ಲ. ಸುರೇಖಾ ತನಗೆ ಬಂದ ಕೋಪವನ್ನು ಅದುಮಿಟ್ಟುಕೊಂಡು ಅಂದಳು. “ನೋಡಮ್ಮ, ನೀನು ನನ್ನತ್ರ ಕೇಳ್ಳೋದು ತಪ್ಪು, ನಿನ್ನ ಗಂಡನ ಬಗ್ಗೆ ನಿನಗೆ ಚೆನ್ನಾಗಿ ಗೊತ್ತಿರುತ್ತದೆ. ನಾನು ಅವರ ಬಗೆಗೆ ಹೇಳ್ಳೋದು ತಪ್ಪಾಗುತ್ತದೆ’ ಎಂದು ಹೇಳಿದ್ದಕ್ಕೆ, ಅನನ್ಯಾ, “ಪ್ಲೀಸ್ ಸುರೇಖಾ, ನನಗೆ ಮಾಹಿತಿಯಿಲ್ಲ, ಅವನೂ ಅವನ ಹೆತ್ತವರೂ ಸುಳ್ಳು ಹೇಳ್ತಿದ್ದಾರೆ’ ಹೀಗೆಲ್ಲ ಮಸ್ಕಾ ಹೊಡೆದು ಸುರೇಖಾಳಿಂದ ಬಾಯಿ ಬಿಡಿಸಿದಳು. ಇದಾಗಿ ಮೂರು ತಿಂಗಳಿಗೆ ಅವಳದ್ದು ಮತ್ತೂಂದು ಕಾಲ… ಬಂತು. ಸುರೇಖಾಳಿಗೆ ಕೆಂಡಾಮಂಡಲ ಕೋಪ ಬಂದು, ಈ ವಿಷಯವನ್ನು ಆಕಾಶ್‌ಗೆ ತಲುಪಿಸಿದಳು. ಕೇಳಿ ಚಕಿತನಾದ ಆಕಾಶ್, “”ದಯವಿಟ್ಟು ಕ್ಷಮಿಸಿ ಸುರೇಖಾ, ನನ್ನ ಬಗ್ಗೆ ಅವಳಿಗೇನೂ ಹೇಳಬೇಡಿ, ನಾನು ಅನನ್ಯಾ ಈಗಾಗಲೇ ದೂರ ದೂರವಾಗಿದ್ದೇವೆ, ಗರ್ಭದಲ್ಲಿದ್ದ ಮಗುವನ್ನು ಕಳೆದುಕೊಂಡ ಕಾರಣ ಅವಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ” ಅನನ್ಯಾ ಪತ್ತೇದಾರಿಕೆ ಮಾಡಲು ನನ್ನ ಎಳೆದಳಾ ಎಂದು ಸುರೇಖಾಳಿಗೆ ಬೇಸರವಾಯಿತು.
ಯಾರದ್ದು ತಪ್ಪು ಯಾರದು ಸರಿ ಎಂದು ಗೊತ್ತಾಗಲಿಲ್ಲ ಸುರೇಖಾಳಿಗೆ. ಸತಿಪತಿಯ ಮೇಲೆ ಅನುಮಾನ ಪಡುವುದು, ಪತಿಗೆ ಸತಿಯ ಬಗೆಗೆ ಸಂಶಯ ಉಂಟಾಗುವುದು- ಇವುಗಳೆಲ್ಲ ಸರ್ವೇಸಾಮಾನ್ಯ ಇತ್ತೀಚೆಗೆ. ಇಂತಹುದಕ್ಕೆಲ್ಲ ಮನೆಯಲ್ಲಿಯೇ ಪರಿಹಾರ ಆಗಬೇಕು, ಅಲ್ಲವೆ? ನಮ್ಮ ವೈವಾಹಿಕ ಜೀವನದ ಬಗ್ಗೆ ನಮಗೆ, ಹೊರಗಿನವರು ಪರಿಹಾರ ಸೂಚಿಸಲು ಸಾಧ್ಯವೆ? ಪರಸ್ಪರ ಅನುಮಾನ ಬಂದ ತತ್‌ಕ್ಷಣವೇ ಅದನ್ನು ಅಲ್ಲಿಯೇ ಚರ್ಚಿಸಬೇಕು. ಪರಿಹಾರ ಕಾಣಬೇಕು. ಮೂರನೆಯವರ ಬಳಿ ಹೇಳಿಕೊಳ್ಳಬಾರದು. ಹೊಸತಾಗಿ ಮದುವೆಯಾದ ಅನನುಭವಿ ದಂಪತಿಗಳಿಗೆ ಬೇರೆ ಯಾರ ಹತ್ತಿರವಾದರೂ ತಮ್ಮ ಅಂತರಂಗವನ್ನು ಹಂಚಿಕೊಳ್ಳಬೇಕೆಂದು ಮೊದ ಮೊದಲು ಅನ್ನಿಸುವುದು ಸಹಜ, ಆದರೆ ಅದು ಕೂಡ ಹಿತಮಿತವಾಗಿದ್ದರೆ ಚೆನ್ನ. ತೀರಾ ವೈಯಕ್ತಿಕ ವಿಷಯಗಳನ್ನು ಮೂರನೆಯವರ ಬಳಿ ಹೇಳಿಕೊಳ್ಳುವುದು ಅಪಾಯಕಾರಿ. ಇಂತಹ ಕ್ಷಣಗಳಿಗಾಗಿಯೇ ಕೆಲವರು ಕಾದಿರುತ್ತಾರೆ. ಗಂಡ ಹೆಂಡತಿ ನಗು ನಗುತ್ತ ಬಾಳುವಾಗ ಹೊಟ್ಟೆ ಉರಿದುಕೊಳ್ಳುವವರು, ಗಂಡ-ಹೆಂಡತಿ ಮಧ್ಯೆ ಬಿರುಕು ಬಿಟ್ಟಾಗ ಹೊಟ್ಟೆಗೆ ಮಜ್ಜಿಗೆ ಹಾಕಿಕೊಂಡಷ್ಟು ತಂಪು ಅನುಭವಿಸುವವರಿದ್ದಾರೆ. ಹೀಗಿರುವವರ ಬಳಿ ಸ್ವಂತ ವಿಷಯಗಳನ್ನು ಹೇಳಿಕೊಂಡರೆ, ಸತಿಪತಿಯರಿಬ್ಬರು ಮತ್ತಷ್ಟು ದೂರವಾಗುತ್ತಾರೆ. ಆದ್ದರಿಂದ ಸ್ವಂತ ವಿಷಯಗಳನ್ನು ಹೇಳಿಕೊಳ್ಳಬೇಕೇ, ಬೇಡವೇ ಎಂಬುದನ್ನು ಪರಿಸ್ಥಿತಿ, ಸುತ್ತಮುತ್ತಲಿನ ವಾತಾವರಣ, ಜನರನ್ನು ನೋಡಿ ನಿರ್ಧರಿಸುವುದು ಒಳಿತು. ಹಾಗೆ ನೋಡಿದರೆ ಅದೆಷ್ಟೇ ಕಷ್ಟಗಳಿರಲಿ, ಮೊದಲು ತಮ್ಮಲ್ಲಿಯೇ ಅದಕ್ಕೊಂದು ಉತ್ತರ ದೊರಕಿಸುವ ದಾರಿ ಹುಡುಕಬೇಕು. ಸುಪ್ರೀತಾ ವೆಂಕಟ್