ಬೆಳಗಾವಿ: ಕಾಂಗ್ರೆಸ್‌ನಲ್ಲಿ ಕೌಟುಂಬಿಕ ರಾಜಕಾರಣ ನಡೆದು ಕೇವಲ ಅಪ್ಪ-ಮಕ್ಕಳು, ಅಮ್ಮ-ಮಗನಿಗೆ ಅಧಿಕಾರ ಸಿಗುತ್ತದೆ. ಆದರೆ
ಭಾರತೀಯ ಜನತಾ ಪಾರ್ಟಿಯಲ್ಲಿ ಸಾಮಾನ್ಯ ಕಾರ್ಯಕರ್ತರೂ ಪಕ್ಷದಲ್ಲಿ ದೊಡ್ಡ ಹುದ್ದೆ ಪಡೆಯಬಹುದಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ
ಸುರೇಶ ಅಂಗಡಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ ನಡೆದ ಬೆಳಗಾವಿ ಗ್ರಾಮೀಣ ಬಿಜೆಪಿ ಮಂಡಲ ಅಧ್ಯಕ್ಷ ಧನಂಜಯ ಜಾಧವ ಅವರ ಅಧಿಕಾರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಇನ್ನೂ ಕುಟುಂಬ ರಾಜಕಾರಣ ಜೀವಂತವಾಗಿದೆ. ಬಿಜೆಪಿ ಎಲ್ಲರನ್ನೂ ಕರೆದುಕೊಂಡು ಹೋಗುತ್ತದೆ. ನಿಷ್ಠಾವಂತ ಹಾಗೂ ಪ್ರಾಮಾಣಿಕ ಕಾರ್ಯಕರ್ತರಿಗೂ ದೊಡ್ಡ ಹುದ್ದೆಗಳು ಸಿಗುತ್ತವೆ. ಚಹಾ ಮಾರುತ್ತಿದ್ದ ಬಾಲಕ ಪ್ರಧಾನಿ ಹುದ್ದೆಗೆ ಏರಿರುವುದು ನಮ್ಮ ಪಕ್ಷದ ವಿಶೇಷತೆ. ನಿಷ್ಠೆಯಿಂದ ಕಾರ್ಯ ನಿರ್ವಹಿಸಿದವರಿಗೆ ಅಧಿಕಾರ ಸಿಗುವುದರಲ್ಲಿ ಸಂದೇಹವೇ ಇಲ್ಲ ಎಂದು ಹೇಳಿದರು.
ದೇಶದಲ್ಲಿ ಅನೇಕ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಇದೆ. ಈ ಮುಂಚೆ ದೇಶದಲ್ಲಿ ಅಧಿಕಾರ ನಡೆಸಿದ ಅನೇಕ ಸರ್ಕಾರಗಳು ದ್ವೇಷದ ರಾಜಕಾರಣ ಮಾಡುತ್ತ ಬಂದಿವೆ. ಕೇವಲ ಇಬ್ಬರು ಸಂಸದರನ್ನು ಹೊಂದಿದ್ದ ಬಿಜೆಪಿ ಈಗ 303 ಸಂಸದರ ಮೂಲಕ ಇಡೀ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪಕ್ಷವಾಗಿದೆ. ಸಮಾಜದ ಬಡತನದಲ್ಲಿ ಬಿದ್ದವರನ್ನು ಎತ್ತುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದರು.
ರಾಜ್ಯಸಭಾ ಸದಸ್ಯ ಡಾ| ಪ್ರಭಾಕರ ಕೋರೆ ಮಾತನಾಡಿ, ಬಿಜೆಪಿ ಹಾಗೂ
ಕಾಂಗ್ರೆಸ್ ನಡುವೆ ಬಹಳ ವ್ಯತ್ಯಾಸ ಇದೆ. ನಾನು ಕಾಂಗ್ರೆಸ್‌ನಲ್ಲಿ ಇದ್ದಾಗ ಪ್ರಧಾನಿ ಯಾರಾಗುತ್ತಾರೆ ಎಂಬುದು ಗೊತ್ತಾಗುತ್ತಿತ್ತು. ಬಿಜೆಪಿಯಲ್ಲಿ ಮುಂದಿನ ಪ್ರಧಾನಿ ಯಾರೆಂಬುದು ತಿಳಿಯುವುದಿಲ್ಲ. ಬಿಜೆಪಿಯಲ್ಲಿ ಚಿಕ್ಕವರಿಗೂ ಅಧಿಕಾರ ಸಿಗುತ್ತದೆ. ಸಣ್ಣ ಕೆಲಸ ಮಾಡುತ್ತ ದುಡಿಯುತ್ತಿದ್ದ ವ್ಯಕ್ತಿಗೆ ಹರಿಯಾಣ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ ಎಂದರು.
ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಅಧ್ಯಕ್ಷ ಸ್ಥಾನ ಸಿಕ್ಕಾಗ ಜವಾಬ್ದಾರಿ ಹೆಚ್ಚಾಗುತ್ತ ಹೋಗುತ್ತದೆ. ಅಹಂಕಾರ ಇದ್ದರೆ ಅವನತಿಗೆ ಹಂತಕ್ಕೆ ತಲುಪಬೇಕಾಗುತ್ತದೆ. ಪಕ್ಷದಲ್ಲಿ ಸಿಗುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಬೇಕು. ನಾನು ಹಾಗೂ ಧನಂಜಯ ಸೇರಿ ಪಕ್ಷ ಬೆಳೆಸುವ ಜವಾಬ್ದಾರಿ ಹೊತ್ತುಕೊಂಡಿದ್ದೇವೆ ಎಂದರು.
ಬೆಳಗಾವಿ ಗ್ರಾಮೀಣ ಬಿಜೆಪಿ ಮಂಡಲ ಅಧ್ಯಕ್ಷ ಧನಂಜಯ ಜಾಧವ ಮಾತನಾಡಿ, ಪಕ್ಷ ಸಂಘಟನೆ ಮಾಡುವುದೇ ನಮ್ಮ ಗುರಿ. ಗ್ರಾಪಂಗಳು ಮುಂದಿನ ದೊಡ್ಡ ಚುನಾವಣೆಗಳಿಗೆ ಮೆಟ್ಟಿಲು ಇದ್ದಂತೆ ಎಂದರು. ಬುಡಾ ಅಧ್ಯಕ್ಷ ಗೂಳಪ್ಪ ಹೊಸಮನಿ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಅಧ್ಯಕ್ಷ ಮುಕ್ತಾರ ಪಠಾಣ, ಮೋಹನ ಅಂಗಡಿ, ಮನೋಹರ ಕಡೋಲಕರ, ಎಂ.ಬಿ. ಜಿರಲಿ, ಶಿವಾಜಿ ಸುಂಠಕರ, ಶಶಿ ಪಾಟೀಲ, ರಾಜೇಂದ್ರ ಹರಕುಣಿ, ಮಹೇಶ ಮೋಹಿತೆ ಇತರರು ಇದ್ದರು.