ಸೂರತ್ (ಗುಜರಾತ್): ನಗರದ ಅಪಾರ್ಟ್ಮೆಂಟ್ ವೊಂದರಲ್ಲಿ ಮೂವರು ಮಹಿಳೆಯರು ಮತ್ತು ಪುರುಷನೊಬ್ಬ ಶನಿವಾರ ಶವವಾಗಿ ಪತ್ತೆಯಾಗಿದ್ದಾರೆ.
ಮೇಲ್ನೋಟಕ್ಕೆ, ಅನಿಲ ಚಾಲಿತ ಗೀಸರ್ ಚಾಲನೆಯಲ್ಲಿದ್ದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆದರೆ ಸಾವಿಗೆ ನಿಖರವಾದ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ ಎಂದು ಡಿಸಿಪಿ ಆರ್.ಪಿ. ಬರೋಟ್ ಹೇಳಿದ್ದಾರೆ.
ಬೆಳಗ್ಗೆ 9 ಗಂಟೆ ಸುಮಾರಿಗೆ ನಾಲ್ವರು ಮೃತಪಟ್ಟಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಫ್ಲಾಟ್ ಮಾಲಕಿ ಜಸುಬೆನ್ ವಧೇಲ್, ಆಕೆಯ ಸಹೋದರಿಯರಾದ ಶಾಂತಬೆನ್ ವಧೇಲ್ (53), ಗೌರಿಬೆನ್ ಮೇವಾಡ್ (55) ಮತ್ತು ಗೌರಿಬೆನ್ ಅವರ ಪತಿ ಹೀರಾಭಾಯಿ (60) ಅವರ ಶವಗಳು ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸಂತ್ರಸ್ತರು ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಮಲಗಿದ್ದರು. ಜಸುಬೆನ್ ಅವರ ಮಗ ಬೆಳಗ್ಗೆ 8 ಗಂಟೆಯ ಸುಮಾರಿಗೆ ಅವರನ್ನು ಪರೀಕ್ಷಿಸಲು ಹೋದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ಸಂತ್ರಸ್ತರು ವಾಂತಿ ಮಾಡಿಕೊಂಡಿದ್ದರು. ಘಟನಾ ಸ್ಥಳದಿಂದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಬರೋಟ್ ಹೇಳಿದರು.
ಸಾವಿಗೆ ನಿಖರವಾದ ಕಾರಣ ಇನ್ನೂ ಪತ್ತೆಯಾಗಿಲ್ಲ, ಅನಿಲ ಚಾಲಿತ ಗೀಸರ್ ಚಾಲನೆಯಲ್ಲಿತ್ತು, ಉಸಿರುಕಟ್ಟುವಿಕೆಯಿಂದಾಗಿ ಕುಟುಂಬ ಸದಸ್ಯರು ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ಆತ್ಮಹತ್ಯೆಯ ಸಾಧ್ಯತೆ ಕ್ಷೀಣವಾಗಿ ಕಂಡುಬಂದಿದೆ, ಆದರೆ ಪೊಲೀಸರು ಎಲ್ಲಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಬರೋಟ್ ಹೇಳಿದರು.