Advertisement

ಪತಿ ಕೊಂದು ಸತ್ತಂತೆ ನಟಿಸಿ, ಕಥೆ ಕಟ್ಟಿದ ಪತ್ನಿ: ಕೊಲೆಗೆ ಐಡಿಯಾ ಕೊಟ್ಟಿದ್ದ ಪ್ರಿಯತಮ

11:12 AM May 01, 2022 | Team Udayavani |

ಬೆಂಗಳೂರು: ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆ ಎಂದು ಪ್ರಿಯಕರನ ಜತೆ ಸೇರಿ ಪತ್ನಿಯೇ ಪತಿಯ ಕುತ್ತಿಗೆ ಕೊಯ್ದು ಕೊಲೆಗೈದಿರುವ ಘಟನೆ ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಮನೆಯಲ್ಲಿ ರಾತ್ರಿ ಮಲಗಿದ್ದ ಪತಿಯನ್ನು ಕೊಂದು ಸತ್ತಂತೆ ನಟಿಸಿ, ಕಥೆ ಕಟ್ಟಿದ ಪತ್ನಿ ಇದೀಗ ಕಂಬಿ ಎಣಿಸುತ್ತಿದ್ದಾಳೆ. ಯಶವಂತಪುರದಲ್ಲಿ ಖಾಸಗಿ ಕಂಪನಿ ಅಕೌಂಟೆಂಟ್‌ ಶಂಕರ್‌ ರೆಡ್ಡಿ(35) ಕೊಲೆಯಾದವರು.

ಈ ಸಂಬಂಧ ಮೃತನ ಪತ್ನಿ ದಿಲ್ಲಿ ರಾಣಿ (26) ಎಂಬಾಕೆಯನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಆಕೆಯ ಪ್ರಿಯಕರನ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಆಂಧ್ರಪ್ರದೇಶದ ಮೂಲದ ಶಂಕರ್‌ ರೆಡ್ಡಿ ಚಿತ್ತೂರು ಮೂಲದ ದಿಲ್ಲಿ ರಾಣಿಯನ್ನು ಆರೇಳು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಯಶವಂತಪುರದ ಮೋಹನ್‌ ಕುಮಾರ್‌ ನಗರದ ಬಾಡಿಗೆ ಮನೆಯಲ್ಲಿ ಕುಟುಂಬ ವಾಸವಾಗಿತ್ತು. ನಗರದ ಖಾಸಗಿ ಕಂಪನಿಯಲ್ಲಿ ಶಂಕರ್‌ ರೆಡ್ಡಿ ಅಕೌಂಟೆಂಟ್‌ ಆಗಿದ್ದರು. ಈ ಮಧ್ಯೆ ಪತಿಯೊಂದಿಗೆ ಜಗಳ ಮಾಡಿಕೊಂಡು ದಿಲ್ಲಿ ರಾಣಿ ಚಿತ್ತೂರಿನ ತವರು ಮನೆ ಸೇರಿದ್ದಳು. ಈ ವೇಳೆ ನೆರೆ ಮನೆಯ ವ್ಯಕ್ತಿ ಜತೆ ಅನೈತಿಕ ಸಂಬಂಧ ಹೊಂದಿದ್ದಳು.

ಇತ್ತೀಚೆಗೆ ಪತ್ನಿಗೆ ಕರೆ ಮಾಡಿದ್ದ ಶಂಕರ್‌, ಮನೆಗೆ ವಾಪಸ್‌ ಬರುವಂತೆ ಒತ್ತಾಯಿಸಿದ್ದು, ಆಕೆಯ ಪೋಷಕರಿಗೂ ಕರೆ ಮಾಡಿ ಆಕೆಯನ್ನು ಮನೆಗೆ ಕಳುಹಿಸುವಂತೆ ಕೇಳಿಕೊಂಡಿದ್ದ. ಶಂಕರ್‌ ಜತೆಗೆ ಬರಲು ದಿಲ್ಲಿ ರಾಣಿಗೆ ಇಷ್ಟವಿರಲಿಲ್ಲ. ಹೀಗಾಗಿ ಈ ವಿಚಾರವನ್ನು ತನ್ನ ಪ್ರಿಯಕರನಿಗೆ ತಿಳಿಸಿದ್ದಳು. ಈ ವೇಳೆ ಪ್ರಿಯಕರ ಕೊಲೆ ಮಾಡಿ ಕಥೆ ಕಟ್ಟುವ ಐಡಿಯಾ ನೀಡಿದ್ದ. ಹೀಗಾಗಿ ಮೂರು ದಿನದ ಹಿಂದೆಯಷ್ಟೇ ದಿಲ್ಲಿ ರಾಣಿ ಶಂಕರ್‌ ಮನೆಗೆ ಬಂದು, ತನ್ನ ಪತಿಯನ್ನು ಕೊಲೆಗೈದು ಜೈಲು ಸೇರಿದ್ದಾಳೆ ಎಂದು ಪೊಲೀಸರು ಹೇಳಿದರು.

Advertisement

ಇದನ್ನೂ ಓದಿ: ಭಾರಿ ಮಳೆಯಿಂದ ಮನೆಗೆ ನುಗ್ಗೆದ ನೀರು: ಹಾನಿ

ನಿದ್ರಿಸುತ್ತಿದ್ದ ಪತಿ ಕುತ್ತಿಗೆಗೆ ಚಾಕು ಇರಿದು ಕೊಲೆ

ಏ.28ರಂದು ರಾತ್ರಿ ಊಟ ಮುಗಿಸಿ ಗಾಢ ನಿದ್ರೆಯಲ್ಲಿದ್ದ ಪತಿ ಶಂಕರ್‌ ರೆಡ್ಡಿಯನ್ನು ಚಾಕುವಿನಿಂದ ಕುತ್ತಿಗೆ ಭಾಗಕ್ಕೆ ಜೋರಾಗಿ ಇರಿದು ಕೊಲೆಗೈದ ದಿಲ್ಲಿ ರಾಣಿ, ನಂತರ ತನ್ನ ಮೈ, ಕೈಗೆ ಪತಿಯ ರಕ್ತವನ್ನು ಹಚ್ಚಿಕೊಂಡಿದ್ದಾಳೆ. ಬಳಿಕ ಚಾಕುವಿನಿಂದ ತನ್ನ ಕೈಕೊಯ್ದು ಕೊಂಡು ಪ್ರಜ್ಞೆ ತಪ್ಪಿದ ಹಾಗೆ ನಾಟಕ ಮಾಡಿದ್ದಳು. ಈ ವೇಳೆ ಎಚ್ಚರಗೊಂಡ ಏಳು ವರ್ಷ ಪುತ್ರ ತಂದೆ-ತಾಯಿ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದ. ಈ ವೇಳೆ ಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಸತ್ತಂತೆ ಮಲಗಿದ್ದ ರಾಣಿ, ಪೊಲೀಸರು ತನ್ನ ಹತ್ತಿರ ಬರುತ್ತಿದ್ದಂತೆ ಎಚ್ಚರಗೊಂಡು ಗಾಬರಿ ವ್ಯಕ್ತಪಡಿಸಿದ್ದಳು. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೊಲೀಸ್‌ ವಿಚಾರಣೆ ವೇಳೆ ಯಾರೋ ಅಪರಿಚಿತ ವ್ಯಕ್ತಿ ಏಕಾಏಕಿ ಮನೆಗೆ ನುಗ್ಗಿ ನನ್ನ ಮೇಲೆ ಹಲ್ಲೆ ನಡೆಸಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಎಚ್ಚರಗೊಂಡಾಗ ಪತಿಯ ಕೊಲೆಯಾಗಿತ್ತು ಎಂದು ಹೇಳಿಕೆ ನೀಡಿದ್ದಳು.

ನಂತರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು, ಯಾರು ಅಪರಿಚಿತರು ಕೈ ಕೊಯ್ದಿಲ್ಲ. ವೈಯಕ್ತಿಕವಾಗಿ ಕೊಯ್ದುಕೊಂಡಂತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಅನುಮಾನಗೊಂಡ ಪೊಲೀಸರು ಆಕೆಯ ಮೊಬೈಲ್‌ ಶೋಧಿಸಿ, ಸಿಡಿಆರ್‌ ಸಂಗ್ರಹಿಸಿದಾಗ ಕೃತ್ಯ ಎಸಗಿದ ಬಳಿಕ ಪ್ರಿಯಕರನಿಗೆ ಮಾಹಿತಿ ನೀಡಿದ್ದಳು. ಬಳಿಕ ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಮಾಂಗಲ್ಯ ಸರವನ್ನು ತನ್ನ ಒಳ ಉಡುಪಿನಲ್ಲಿ ಇಟ್ಟುಕೊಂಡಿರುವುದು ಗೊತ್ತಾಗಿದೆ. ಈ ಸಂಬಂಧ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next