ಹುಬ್ಬಳ್ಳಿ: ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಇದ್ದರೆ ವಂಶಾವಳಿ ಮೂಲಕ ಇತರೆ ಸದಸ್ಯರಿಗೂ ಬರುವ ಸಾಧ್ಯತೆ ಇರುವುದರಿಂದ ಕುಟುಂಬ ಕ್ಯಾನ್ಸರ್ ರಿಸ್ಕ್ ಕ್ಲಿನಿಕ್ ಹಾಗೂ ಆಪ್ತ ಸಮಾಲೋಚನೆ ಆರಂಭಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಅಗತ್ಯ ಇದ್ದವರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಮಂಗಳವಾರ ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಇಲ್ಲಿನ ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಸೆಂಟರ್‌ನಲ್ಲಿ ಕುಟುಂಬ ಕ್ಯಾನ್ಸರ್ ರಿಸ್ಕ್ ಕ್ಲಿನಿಕ್ ಹಾಗೂ ಆಪ್ತ ಸಮಾಲೋಚನೆ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಸೆಂಟರ್ ಈ ಕ್ಲಿನಿಕ್ ಆರಂಭಿಸುವ ಮೂಲಕ ಕ್ಯಾನ್ಸರ್ ರೋಗಿಯ ಕುಟುಂಬದ ಪರವಾಗಿ ಕೆಲಸ ಮಾಡಿದಂತಾಗಿದೆ. ತಪಾಸಣೆಯೊಂದಿಗೆ ಕುಟುಂಬದವರನ್ನು ಆಪ್ತ ಸಮಾಲೋಚನೆ ಮಾಡಿ ಆ ಮೂಲಕ ಧೈರ್ಯ ತುಂಬುವಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ| ರವಿ ಕಲಘಟಗಿ ಮಾತನಾಡಿ, ವಂಶಾವಳಿಯಿಂದ ಕ್ಯಾನ್ಸರ್ ಬರುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ ಲಕ್ಷಣಗಳು ಪತ್ತೆಯಾಗುವುದಕ್ಕಿಂತ ಮುಂಚಿತವಾಗಿಯೇ ತಪಾಸಣೆ ಮಾಡಿಕೊಳ್ಳುವುದು ಉತ್ತಮ. 40 ವರ್ಷ ದಾಟಿದ ನಂತರ ಮಧುಮೇಹ ತಪಾಸಣೆ ಮಾಡಿಸಿಕೊಳ್ಳುವಂತೆ ಕ್ಯಾನ್ಸರ್ ತಪಾಸಣೆ ಮಾಡಿಕೊಳ್ಳುವುದು ಉತ್ತಮ. ಆರಂಭದಲ್ಲಿಯೇ ಇದನ್ನು ಪತ್ತೆ ಹಚ್ಚಿ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಕ್ಯಾನ್ಸರ್‌ನಿಂದ ವಾಸಿಯಾಗಬಹುದಾಗಿದೆ. ಕೌಟುಂಬಿಕ ಸಲಹಾ ಕೇಂದ್ರದಲ್ಲಿ ಉಚಿತವಾಗಿ ಸೇವೆ ನೀಡಲಾಗುವುದು ಎಂದು ಹೇಳಿದರು.
ಸಿಒಒ ಜೈಕಿಶನ್ ಅಗಿವಾಲ ಮಾತನಾಡಿ, ಈಗಾಗಲೇ 18,000 ಕ್ಯಾನ್ಸರ್ ರೋಗಿಗಳ ಕುಟುಂಬದವರನ್ನು ಸಂಪರ್ಕಿಸಲಾಗಿದೆ. ಸುಮಾರು 9 ಸಾವಿರ ಕುಟುಂಬ ತಪಾಸಣೆ ಹಾಗೂ ಆಪ್ತ ಸಮಾಲೋಚನೆಗೆ ಒಪ್ಪಿಕೊಂಡಿದ್ದಾರೆ. ಈ ಕುರಿತು ಮೂರು ತಿಂಗಳುಗಳ ಕಾಲ ವಿವಿಧ ಜಾಗೃತಿ ಕಾರ್ಯಕ್ರಗಳ ಮೂಲಕ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ. ಕುಟುಂಬದಲ್ಲಿ ಯಾರಾದರೂ ಕ್ಯಾನ್ಸರ್ ನಿಂದ ಬಳಲುತ್ತಿದ್ದರೆ ಇದನ್ನು ನಿರ್ಲಕ್ಷಿಸದೆ ತಪಾಸಣೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ಲಕ್ಷಣ ಪತ್ತೆಯಾದರೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.
ಲಯನ್ಸ್ ಕ್ಲಬ್ ಹುಬ್ಬಳ್ಳಿ ಪರಿವಾರದ ಅಧ್ಯಕ್ಷ ಶಶಿ ಸಾಲಿ ಮಾತನಾಡಿ, ಈ ಆಸ್ಪತ್ರೆ ಸಹಯೋಗದೊಂದಿಗೆ ಕ್ಲಬ್ ವತಿಯಿಂದ ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಡಾ| ಸಂಜಯ ಮಿಶ್ರಾ, ಡಾ| ರುದ್ರೇಶ ತಬಾಲಿ, ಡಾ| ಪ್ರಸಾದ ಗುಣಾರಿ, ಪತ್ರಕರ್ತೆ ಕೃಷಿ¡ ಶಿರೂರ, ಮಹೇಂದ್ರ ಸಿಂಘಿ, ಸುಧೀರ ಸರಾಫ ಇನ್ನಿತರರಿದ್ದರು.