Advertisement

ಕುಡಿಯುವ ನೀರಿಗಾಗಿ ಕುಟುಂಬಗಳ ಪರದಾಟ

09:48 PM Dec 16, 2019 | Team Udayavani |

ಕೋಟ: ವಡ್ಡರ್ಸೆ ಗ್ರಾ.ಪಂ. ವ್ಯಾಪ್ತಿಯ ವಡ್ಡರ್ಸೆ ಎಂ.ಜಿ. ಕಾಲನಿಯಲ್ಲಿ ವಾಸವಿರುವ ಸುಮಾರು 8 ಗಿರಿಜನ ಕುಟುಂಬಗಳು ಕುಡಿಯುವ ನೀರಿಗಾಗಿ ಪರದಾಡಬೇಕಾದ ಸ್ಥಿತಿ ಉಂಟಾಗಿದೆ.

Advertisement

ಈ ಕುಟುಂಬಗಳು ಗ್ರಾ.ಪಂ. ನ ನೀರನ್ನೇ ಅವಲಂಬಿಸಿದೆ. ಹೀಗಾಗಿ ಇವರಿಗೆ ಸಮಗ್ರ ಗಿರಿಜನ ಅಭಿವೃದ್ಧಿ (ಐ.ಟಿ.ಡಿ.ಪಿ.) ಯೋಜನೆ ಮೂಲಕ 12 ಲಕ್ಷ ರೂ. ವೆಚ್ಚದಲ್ಲಿ ಬಾವಿ, ಟ್ಯಾಂಕ್‌, ಪೈಪ್‌ಲೈನ್‌ ನಿರ್ಮಿಸಿ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡುವ ಕಾಮಗಾರಿ 2016-17ನೇ ಸಾಲಿನಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಕಾಮಗಾರಿ ಆರಂಭವಾಗಿ ಎರಡು ವರ್ಷ ಕಳೆದರು ಇನ್ನೂ ಪೂರ್ಣಗೊಂಡಿಲ್ಲ ಹಾಗೂ ಇಲ್ಲಿನ ನಿವಾಸಿಗಳ ಕುಡಿಯುವ ನೀರಿನ ಬವಣೆ ದೂರವಾಗಿಲ್ಲ.

ವಿದ್ಯುತ್‌ ಸಂಪರ್ಕದ ಸಮಸ್ಯೆ
ಬಾವಿ ನಿರ್ಮಾಣ ಸಂಪೂರ್ಣಗೊಂಡಿದ್ದು ಪೈಪ್‌ಲೈನ್‌ ಅಳವಡಿಸಲಾಗಿದೆ. ಆದರೆ ಬಾವಿಯ ನೀರು ಮೇಲೆತ್ತಲು ಮೋಟಾರ್‌ ಅಳವಡಿಸುವುದಕ್ಕಾಗಿ ವಿದ್ಯುತ್‌ ಸಂಪರ್ಕವನ್ನು ಪಕ್ಕದ ಹೌಸ್‌ ಕಲೆಕ್ಷನ್‌ನ ಕಂಬದಿಂದ ಪಡೆಯಲು ಆರಂಭದಲ್ಲಿ ಯೋಜನೆ ರೂಪಿಸಲಾಗಿತ್ತು. ಆದರೆ ಮೋಟಾರ್‌ಗೆ ಹೆಚ್ಚಿನ ವೋಲ್ಟ್ ಅಗತ್ಯವಿದ್ದರಿಂದ ಅದರಿಂದ ಸಂಪರ್ಕ ಪಡೆಯಲು ಮೆಸ್ಕಾಂ ಅನುಮತಿ ನೀಡಿರಲಿಲ್ಲ. ಹೀಗಾಗಿ ಹೊಸ ಲೈನ್‌, ಪರಿವರ್ತಕ ಅಳವಡಿಸುವುದು ಅನಿವಾರ್ಯವಾಯಿತು ಮತ್ತು ಇದಕ್ಕಾಗಿ 2.50 ಲಕ್ಷ ರೂ ಹೆಚ್ಚುವರಿ ಅನುದಾನ ಅಗತ್ಯವಿತ್ತು. ಈ ಹೆಚ್ಚುವರಿ ಅನುದಾನ ಮಂಜೂರಾಗದೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿತು.

ಅನುದಾನ ಮಂಜೂರಾಗಿದೆ
ವಿದ್ಯುತ್‌ ಸಂಪರ್ಕಕ್ಕೆ ಅನುಮತಿ ದೊರೆಯದೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಇದೀಗ ಸಂಬಂಧಪಟ್ಟ ಇಲಾಖೆ ಹೆಚ್ಚುವರಿ ಅನುದಾನ ಮಂಜೂರು ಮಾಡಿದೆ. ಹೀಗಾಗಿ ಪರಿವರ್ತಕ, ಲೈನ್‌ ಅಳವಡಿಸಲು ಅನುಮತಿ ಕೋರಲಾಗಿದೆ. ಅನುಮತಿ ಸಿಕ್ಕಿದ ತತ್‌ಕ್ಷಣ ಕಾಮಗಾರಿ ಪೂರ್ತಿಗೊಳಿಸಲಾಗುವುದು.
– ಹೇಮಂತ್‌, ಅಭಿಯಂತರರು ಕೆ.ಆರ್‌.ಐ.ಡಿ. ಎಲ್‌.

ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ
ಎರಡು ವರ್ಷದಿಂದ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿರುವುದು ಹಾಗೂ ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವ ಕುರಿತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇನೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜತೆ ಅವರು ಚರ್ಚೆ ನಡೆಸಿದ್ದಾರೆ.
– ಕೋಟಿ ಪೂಜಾರಿ, ಸದಸ್ಯರು ವಡ್ಡರ್ಸೆ ಗ್ರಾ.ಪಂ.

Advertisement

ಶೀಘ್ರ ಕಾಮಗಾರಿ ನಡೆಸಿ
ನೀರಿಗಾಗಿ ಹಲವು ವರ್ಷಗಳಿಂದ ಪರದಾಡುತ್ತಿದ್ದೇವೆ. ಈ ಕಾಮಗಾರಿ ಆರಂಭವಾದಗ ನೀರಿನ ಸಮಸ್ಯೆ ದೂರವಾಗುವುದು ಎಂಬ ಭರವಸೆ ಇತ್ತು. ಆದರೆ ಅರ್ಧಕ್ಕೆ ಕಾಮಗಾರಿ ಸ್ಥಗಿತಗೊಂಡಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
– ಜಯಂತಿ, ಸ್ಥಳೀಯ ನಿವಾಸಿ

ಸ್ಪಂದನೆ ಇಲ್ಲ
ಬೇಸಗೆಯಲ್ಲಿ ನಳ್ಳಿ ನೀರಿನ ಪೂರೈಕೆ ವ್ಯತ್ಯಯವಾದಾಗ ಕಾಲನಿಯ ನಿವಾಸಿಗಳು ಕುಡಿಯುವ ನೀರಿಗಾಗಿ ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಹಿರಿಯ ನಾಗರಿಕರು, ಅನಾರೋಗ್ಯ ಪೀಡಿತರು ತ್ರಾಸಪಟ್ಟು ಅಕ್ಕ-ಪಕ್ಕದ ದೂರದ ಮನೆಗಳಿಗೆ ತೆರಳಿ ನೀರು ತರುತ್ತಾರೆ. ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿದರೂ ಸಮರ್ಪಕ ಸ್ಪಂದನೆ ವ್ಯಕ್ತವಾಗಿಲ್ಲ ಎಂದು ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

-  ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next