ಕಾಸರಗೋಡು: ರಾಜ್ಯ ಸರಕಾರದ ಲೈಫ್ ಮಿಷನ್ ಯೋಜನೆ ಮೂಲಕ ಮನೆ ನಿರ್ಮಾಣಗೊಂಡಾಗ ನನಸಾದುದು 5 ಮಂದಿ ಸದಸ್ಯರ ಕುಟುಂಬದ ಅನೇಕ ವರ್ಷಗಳ ಕನಸು. ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್‌ನ ನೆಲ್ಲಿಯಡ್ಕ ನಿವಾಸಿ ಸಬೀನಾ ಅವರ ಕುಟುಂಬ ಈ ಮೂಲಕ ಸ್ವಂತ ಮನೆ ಪಡೆದುಕೊಂಡಿದೆ.
ಕಲಿಯುತ್ತಿರುವ ಮಕ್ಕಳು
ಪತಿ ಮಹಮ್ಮದ್ ಷರೀಫ್ ಮತ್ತು ಇನ್ನೂ ಶಾಲಾ ಕಲಿಕೆ ನಡೆಸುತ್ತಿರುವ ಇಬ್ಬರ ಸಹಿತ ಮೂವರು ಮಕ್ಕಳೊಂದಿಗೆ ಅನಾಥ ಸ್ಥಿತಿಯಲ್ಲಿ ಸಬೀನಾ ಬದುಕು ನಡೆಸುತ್ತಿದ್ದರು. ಹೃದ್ರೋಗಿಯಾಗಿರುವ ಮಹ್ಮಮದ್ ಷರೀಫ್ ಅವರಿಗೆ ದುಡಿಮೆಯ ಬದುಕು ಅಸಾಧ್ಯವಾಗಿದೆ. ಹಿಂದೆ ಕೂಲಿ ಕಾರ್ಮಿಕರಾಗಿದ್ದ ಅವರು ಇಂದು ಕೆಲಸಕ್ಕೆ ತೆರಳಲಾಗದ ಸ್ಥಿತಿಯಲ್ಲಿದ್ದಾರೆ.
ಹಿರಿಯ ಪುತ್ರ ಇರ್ಷಾದ್ ಚಾಯೋತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಕಲಿಕೆ ನಡೆಸುತ್ತಿದ್ದಾನೆ. ದ್ವಿತೀಯಳಾದ ಪುತ್ರಿ ಅಸೀಫಾ ಕೀಳ್ಮಲ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಕಿರಿಯ ಪುತ್ರಿ ಷಿದಾಗೆ ಇನ್ನೂ ನಾಲ್ಕೂವರೆ ವರ್ಷ ಪ್ರಾಯ. ಬೀಡಿ ಕಾರ್ಮಿಕರಾಗಿರುವ ಸಬೀನಾ ಅವರು ದುಡಿದು ತರುವ ಸಣ್ಣ ಆದಾಯದಲ್ಲಿ ಈ ಕುಟುಂಬ ಹೊಟ್ಟೆಹೊರೆಯಬೇಕಿದೆ. ಸಬೀನಾರಿಗೆ ತಮ್ಮ ತಂದೆಯ ಮೂಲಕ ಲಭಿಸಿದ 10 ಸೆಂಟ್ಸ್ ಜಾಗದಲ್ಲಿ ತಾತ್ಕಾಲಿಕ ಶೆಡ್ ಒಂದನ್ನು ನಿರ್ಮಿಸಿ ಈ ಕುಟುಂಬ ಬದುಕು ಸವೆಸುತ್ತಿತ್ತು.
ಸ್ಥಳೀಯ ಗ್ರಾಮ ಪಂಚಾಯತ್ ನಡೆಸಿದ ಲೈಫ್ ಮಿಷನ್ ಯೋಜನೆ ಪ್ರಕಾರದ ಸಮೀಕ್ಷೆಯಲ್ಲಿ ಇವರ ಬವಣೆಯ ಬದುಕು ಗಮನಕ್ಕೆ ಬಂದಿತ್ತು. ಇಲ್ಲಿ ಅರ್ಹರ ಪಟ್ಟಿಗೆ ಸೇರಿದ ಸಬೀನಾ ಅವರಿಗೆ 400 ಚ.ಅ. ವಿಸ್ತೀರ್ಣದ ಮನೆ ನಿರ್ಮಾಣವಾಗಿದೆ. ಯೋಜನೆ ಪ್ರಕಾರದ ಮೂರು ಲಕ್ಷ ರೂ. ಸಹಿತ 4 ಲಕ್ಷ ರೂ. ವೆಚ್ಚದಲ್ಲಿ ಈ ಮನೆಯ ನಿರ್ಮಾಣವಾಗಿದೆ. ಎರಡು ಬೆಡ್ ರೂಂ ಗಳು, ಹಾಲ್, ಶೌಚಾಲಯ ಸಹಿತ ಸೌಲಭ್ಯಗಳಿರುವ ಮನೆ ಇದಾಗಿದೆ. ಇದು ಈ ಕುಟುಂಬದ ಮಂದಿಗೆ ಸಮಾಧಾನದ ನಿಟ್ಟುಸಿರು ತಂದಿದೆ.
ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್‌ನಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ ಸಮಾರಂಭದಲ್ಲಿ ರಾಜ್ಯ ಉದ್ದಿಮೆ- ಕ್ರೀಡಾ- ಯುವಜನ ಕಲ್ಯಾಣ ಸಚಿವ ಇ.ಪಿ. ಜಯರಾಜನ್ ಅವರು ಸಬೀನಾರಿಗೆ ಮನೆಯ ಕೀಲಿಕೈ ಹಸ್ತಾಂತರಿಸಿದರು. ತಮ್ಮ ಮಕ್ಕಳನ್ನು ಅವಚಿಕೊಂಡು ಆಗಮಿಸಿದ ಸಬೀನಾ ಕಣ್ಣೀರಿನೊಂದಿಗೆ ಕೀಲಿಕೈ ಪಡೆದುಕೊಂಡರು.