ಕುಷ್ಟಗಿ: ಪಟ್ಟಣದ ಹೊರವಲಯದ ಮಾರುತಿ ನಗರದಲ್ಲಿ ಕಳೆದ ನಾಲ್ಕು ದಿನಗಳಿಂದ ರಾತ್ರಿ ನಿರಂತರವಾಗಿ ನಾಲ್ಕೈದು ಮನೆಗಳ ಮೇಲೆ ಮಾತ್ರ ಕಲ್ಲು ಬೀಳುತ್ತಿದೆ. ಈ ಘಟನೆ ಮನೆಯವರು ಹಾಗೂ ಸ್ಥಳೀಯರನ್ನು ಬೆಚ್ಚಿ ಬೀಳಿಸಿದ್ದು, ಭಾನಾಮತಿ ಶಂಕೆ ವ್ಯಕ್ತವಾಗಿದೆ.
ಪಟ್ಟಣದ ಕಂದಕೂರು ರಸ್ತೆಯ ಕೊಳಚೆ ನಿರ್ಮೂಲನೆ ಮಂಡಳಿ ನಿರ್ಮಿಸಿದ 200 ಗುಂಪು ಮನೆಗಳಿದ್ದು, (ಮಾರುತಿ ನಗರ) ಕೆಲವರು ತಾತ್ಕಾಲಿಕ ಜೋಪುಡಿಯಲ್ಲಿ ವಾಸವಾಗಿದ್ದಾರೆ. ಸದರಿ ಬಡಾವಣೆಯಲ್ಲಿ ಕೃಷಿಕರು, ಕೂಲಿಕಾರರು, ಸಣ್ಣ ಪುಟ್ಟ ವ್ಯಾಪಾರಸ್ಥರು ವಾಸವಾಗಿದ್ದಾರೆ. ಇದು ಪುರಸಭೆಯ 1ನೇ ವಾರ್ಡ್ ವ್ಯಾಪ್ತಿಯಲ್ಲಿದೆ. ಕಳೆದ ಶುಕ್ರವಾರದಿಂದ ಉಮೇಶ ಹಿರೇಮಠ, ಶಾರದಮ್ಮ ಗೊಂದಳಿ, ಅಶೋಕ ಗೊಂದಳಿ, ನಾರಾಯಣಪ್ಪ ಗೊಂದಳಿ ಹಾಗೂ ಮಹಿಬೂಬಸಾಬ್ ದೋಟಿಹಾಳ ಅವರ ಮನೆಯ ಮೇಲ್ಚಾವಣೆಯ ಮೇಲೆ ರಾತ್ರಿ 2ರಿಂದ 4ಗಂಟೆಯ ಸಮಯದಲ್ಲಿ ಮಾತ್ರ ಕಲ್ಲು ಬೀಳುತ್ತಿವೆ.
ಕಲ್ಲುಗಳು 40 ಮಿ.ಮೀ ಗಾತ್ರವಿದ್ದು, ಯಾರೋ ಕಿಡಗೇಡಿಗಳ ಕೃತ್ಯ ಎಂಬುದು ಮೇಲ್ನೋಟಕ್ಕೆ ಕಂಡು ಬಂದರೂ, ಸ್ಥಳೀಯರಲ್ಲಿ ಇದು ಭಾನಾಮತಿಯದ್ದೇ ಎನ್ನುವ ಭಯ ಶುರುವಾಗಿದೆ. ಮೊದಲ ದಿನ (ಶುಕ್ರವಾರ) ಬಿದ್ದಾಗ ಅಷ್ಟಾಗಿ ಗಂಭೀರವಾಗಿ ಪರಿಗಣಿಸಿರಲಿಲ್ಲ. ನಿರಂತರವಾಗಿ ನಿಗದಿತ ಸಮಯಕ್ಕೆ ಬೀಳುತ್ತಿರುವುದರಿಂದ ಈ ನಾಲ್ಕು ಮನೆಯವರಲ್ಲಿ ಶುರುವಾಗಿರುವ ಭಯ ಇಡೀ ಮಾರುತಿ ನಗರವನ್ನೇ ಆವರಿಸಿದೆ.
“ಕಳೆದ ನವರಾತ್ರಿ ಸಂದರ್ಭದಲ್ಲಿ ಇದೇ ರೀತಿಯಾಗಿತ್ತು. ಈಗಲೂ ನವರಾತ್ರಿ ಆರಂಭದಲ್ಲೇ ಶುರುವಾಗಿದೆ. ಪ್ರಕರಣ ಪತ್ತೆ ಹಚ್ಚಲು, ಕಲ್ಲು ಬಿದ್ದ ಬಳಿಕ ತಲೆಯ ರಕ್ಷಣೆಗಾಗಿ ಕಬ್ಬಿಣದ ಪುಟ್ಟಿ ಹಿಡಿದು ಹೊರಬಂದರೂ ಏನೇನೂ ಕಾಣಿಸುತ್ತಿಲ್ಲ. ತಡರಾತ್ರಿಯಲ್ಲಿ ಯಾವ ದಿಕ್ಕಿನಿಂದ ಕಲ್ಲು ಬೀಳುತ್ತದೆ ಎನ್ನುವ ಹೆದರಿಕೆಯಿಂದ ಮನೆ ಒಳಗೆ ಸೇರಿಕೊಳ್ಳುವಂತಾಗಿದೆ. ಅಕ್ಕಪಕ್ಕದವರು ಹಾಲು-ಜೇನಿನಂತೆ ಇದ್ದೇವೆ. ಯಾರ ಮೇಲೆ ಅನುಮಾನ ಪಡುವುದು ಎಂಬ ಗೊಂದಲ ಮೂಡಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಪೊಲೀಸ್ ಠಾಣೆಗೆ ದೂರು ನಿರ್ಧರಿಸಿದ್ದೇನೆ’ ಎಂದು ಸ್ಥಳೀಯ ನಿವಾಸಿ ಉಮೇಶ ಹಿರೇಮಠ ತಿಳಿಸಿದ್ದಾರೆ.
ಮಾರುತಿ ನಗರದಲ್ಲಿ ಎಲ್ಲೆಂದರಲ್ಲಿ ಲಿಂಬೆಹಣ್ಣು, ಮರ ಇತ್ಯಾ ದಿ ವಸ್ತುಗಳು ಅಲ್ಲಲ್ಲಿ ಹಾಗೂ ಶಾಲೆಯ ಬಳಿ ಕಂಡು ಬಂದಿವೆ. ವಾಮಾಚಾರ ಭಯವಿದ್ದು, ಯಾರು ಮಾಡುತ್ತಾರೆ? ಏಕೆ ಹೀಗೆ ಮಾಡುತ್ತಾರೆ? ಎಂಬುದು ತಿಳಿಯದಾಗಿದೆ. ನವರಾತ್ರಿ ಹಿನ್ನೆಲೆಯಲ್ಲಿ ಮನೆಯಲ್ಲಿ ದೇವಿ ಪುರಾಣ ಆರಂಭಿಸಿದ್ದರೂ ಆದಾಗ್ಯೂ ಈ ಕಾಟ ಶುರುವಾಗಿದೆ.
-ಉಮೇಶ ಹಿರೇಮಠ, ಸ್ಥಳೀಯ ನಿವಾಸಿ
ಪಟ್ಟಣದ ಹೊರವಲಯದ ಮಾರುತಿ ನಗರದಲ್ಲಿ ಕಳೆದ ನಾಲ್ಕು ದಿನಗಳಿಂದ ನಾಲ್ಕೈದು ಮನೆಗಳ ಮೇಲೆ ಮಾತ್ರ ಕಲ್ಲು ಬೀಳುತ್ತಿರುವ ಬಗ್ಗೆ ಯಾರೂ ದೂರು ನೀಡಿಲ್ಲ. ಆದಾಗ್ಯೂ ಮಂಗಳವಾರ ರಾತ್ರಿಯಿಂದ ಪೊಲೀಸ್ ಗಸ್ತು ನಿಯೋಜಿಸಲಾಗುವುದು.
-ಜಿ.ಚಂದ್ರಶೇಖರ, ಸಿಪಿಐ ಕುಷ್ಟಗಿ
-ಮಂಜುನಾಥ ಮಹಾಲಿಂಗಪುರ