Advertisement
ಅಂತೆಯೇ ಮತದಾರರ ವಿಷಯದಲ್ಲೂ ವಿಶೇಷತೆ ಹೊಂದಿದ್ದು, ಬೊಂಬೆನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ ಮತದಾರರಿಗಿಂತ, ಮಹಿಳೆಯರ ಸಂಖ್ಯೆಯೇ ಅಧಿಕವಾಗಿದೆ. ಯಾವುದೇ ಅಭ್ಯರ್ಥಿ ಗೆಲುವಿನಲ್ಲಿ ನೀರೆಯರೇ ನಿರ್ಣಾಯಕವಾಗಿದ್ದಾರೆ. ಹೋರಾಟದ ಹಿನ್ನೆಲೆಯುಳ್ಳ ನೆಲದಲ್ಲಿ ಈಗಾಗಲೇ ಈ ಬಾರಿಯ ಚುನಾವಣಾ ಕಾವು ರಂಗೇರಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ನಡುವಿನ ಕದನ ಸ್ಥಳ ಎಂದೇ ಬಿಂಬಿತವಾಗಿರುವ ಚನ್ನಪಟ್ಟ ಣದ ಚುನಾವಣೆಯಲ್ಲಿ ಮಹಿಳಾ ಮತದಾರರು ನಿರ್ಣಾಯಕ ಪಾತ್ರವಹಿಸಲಿದ್ದು, ಕ್ಷೇತ್ರದ ಮಹಿಳಾ ಮತದಾರರ ಮನ ಗೆಲ್ಲುವವರು ಈ ಕ್ಷೇತ್ರದ ಅಧಿಪತಿ ಆಗಲಿದ್ದಾರೆ ಎಂಬುದು ಎಲ್ಲರ ಅಭಿಮತವಾಗಿದೆ.
Related Articles
Advertisement
ಚನ್ನಪಟ್ಟಣ ಕ್ಷೇತ್ರದಲ್ಲಿ ಮಹಿಳೆಯರೇ ಅಧಿಕ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,24,886 ಮಂದಿ ಮತದಾನ ಹಕ್ಕು ಹೊಂದಿದ್ದಾರೆ. ಅದರಲ್ಲಿ 1,09,133 ಸಂಖ್ಯೆ ಪುರಷರು ಹಾಗೂ 1,15,753 ಮಹಿಳಾ ಮತದಾರರು ಇದ್ದು ಪುರುಷರಿಗಿಂತ 6,620 ಹೆಚ್ಚು ಮಹಿಳಾ ಮತದಾರರಿದ್ದಾರೆ. ಹೊಸ ಮತದಾರರ ಸೇರ್ಪಡೆ ಪಟ್ಟಿ ಪ್ರಕಟಗೊಂಡ ನಂತರ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಂಭವವಿದೆ. ಘಟಾನುಘಟಿ ನಾಯಕರ ನಡುವಿನ ಈ ಕದನದಲ್ಲಿ ಮಹಿಳಾ ಮತದಾರರು ಪ್ರಮುಖ ಪಾತ್ರ ವಹಿಸಲಿದ್ದು, ಪ್ರಮುಖ ರಾಜಕೀಯ ಪಕ್ಷಗಳು ಮಹಿಳಾ ಮತದಾರರನ್ನು ಟಾರ್ಗೆಟ್ ಮಾಡಿವೆ. ಮಹಿಳೆಯರ ಮತಪಟ್ಟಿಗೆಗೆ ಲಗ್ಗೆಯಿಡಲು ನಾನಾ ಕಸರತ್ತು ನಡೆಸುತ್ತಿವೆ.
ಪ್ರಚಾರ ಕಾರ್ಯದಲ್ಲೂ ಹಿಂದುಳಿದ ಕಾಂಗ್ರೆಸ್: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ತಮ್ಮ ಗೆಲುವಿಗಾಗಿ ಶತಾಯ ಗತಾಯ ಪ್ರಯತ್ನ ಮಾಡುತ್ತಿದ್ದರೆ, ಇತ್ತ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮಾತ್ರ ಅಭ್ಯರ್ಥಿ ಘೋಷಣೆಯನ್ನೂ ಮಾಡದೆ, ಮತ ಪ್ರಚಾರ ಕಾರ್ಯದಲ್ಲೂ ತೀರಾ ಹಿಂದಯೇ ಉಳಿದಿದೆ. ಕ್ಷೇತ್ರದಲ್ಲಿ ಪುರುಷರಿಗಿಂತ ಅಧಿಕವಾಗಿರುವ ಮಹಿಳಾ ಮತದಾರರನ್ನು ಸೆಳೆಯಲು ಕೂಡ ಯಾವುದೆ ಕಸರತ್ತು ಮಾಡುತ್ತಿಲ್ಲ ಎಂದು ಸ್ವತಃ ಕಾಂಗ್ರೆಸ್ ಮಹಿಳಾ ಮುಖಂಡೆಯರೇ ಅಲವತ್ತುಕೊಳ್ಳುತ್ತಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಅಧಿಕವಾಗಿರುವ ಹಿನ್ನೆಲೆ, ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಎಚ್.ಡಿ.ಕುಮಾರ ಸ್ವಾಮಿ ಗೆಲುವಿಗಾಗಿ ಈಗಾಗಲೇ ರಾಮನಗರ ಜಿಲ್ಲಾ ಜೆಡಿಎಸ್ ಮಹಿಳಾ ಘಟಕವು ಪ್ರಮುಖ ಜೆಡಿಎಸ್ ಮುಖಂಡರೂ ಸೇರಿದಂತೆ ಸಾಮಾನ್ಯ ಕಾರ್ಯಕರ್ತೆಯರು ಕೂಡ ಮನೆ, ಮನೆಗೆ ತೆರಳಿ ಜೆಡಿಎಸ್ ಪರ ಮತಯಾಚನೆಯಲ್ಲಿ ತೊಡಗಿದ್ದೇವೆ. ● ರೇಖಾ ಉಮಾಶಂಕರ್, ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ, ರಾಮನಗರ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ಸ್ವಾಭಿಮಾನ ಸಂಕಲ್ಪ ನಡಿಗೆ ಮೂಲಕ ಗ್ರಾಮ- ಗ್ರಾಮಗಳಲ್ಲಿ ಮಹಿಳಾ ಮತದಾರರನ್ನು ತಲುಪುವ ಕೆಲಸ ಮಾಡಿದ್ದೇವೆ. ನಾವು ಹೋದ ಕಡೆಗಳಲ್ಲಿ ಬಿಜೆಪಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ● ಮೈತ್ರಿಗೌಡ, ಬಿಜೆಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ
– ಎಂ.ಶಿವಮಾದು