Advertisement

“ಫಾಲ್ಸೆಟೊ’ದ “ಟ್ರೂಸೆಟೊ’ಕಳ್ಳಧ್ವನಿ!

12:22 PM Mar 23, 2019 | |

ಸುಮಾರು ಮೂವತ್ತಕ್ಕೂ ಹೆಚ್ಚು ವರುಷಗಳ ಹಿಂದಿರಬೇಕು ಹೊನ್ನಾವರ ತಾಲೂಕಿನ ಇಡಗುಂಜಿ ದೇವಸ್ಥಾನದ ಆವರಣದಲ್ಲಿ ಏನೋ ಕಾರ್ಯಕ್ರಮವಿತ್ತು. ನಾವು ಕಾರ್ಯಕ್ರಮಕ್ಕೆ ಅಂತ ಹೋದವರೇನಾಗಿರಲಿಲ್ಲ. ನನ್ನ ನೆನಪು ಸ್ಪಷ್ಟವಿದೆ ಎಂದುಕೊಂಡರೆ, ನಮ್ಮ ಅದೃಷ್ಟಕ್ಕೆ ಆ ಕಾರ್ಯಕ್ರಮದಲ್ಲಿ ಶಿವರಾಮ ಕಾರಂತರು ಮಾತನಾಡುತ್ತಿದ್ದರು. ಹತ್ತು ನಿಮಿಷಕ್ಕೆಲ್ಲ ಅವರ ಮಾತು ಮುಗಿಯಿತು. ಏನು ಮಾತನಾಡಿದರು, ಆ ದಿನದ ಕಾರ್ಯಕ್ರಮ ಏನಾಗಿತ್ತು, ಒಂದೂ ನೆನಪಿಲ್ಲ. ಆದರೆ, ಅದರ ನಂತರ ಹೆಸರಾಂತ ಗಾಯಕಿಯೊಬ್ಬರ ಭಕ್ತಿಗೀತೆಯ ಕಾರ್ಯಕ್ರಮವಿದ್ದುದು, ಮನೆಯವರೆಲ್ಲ “ಹೇಗೂ ಬಂದಾಗಿದೆ, ಹಾಡಿನ ಕಾರ್ಯಕ್ರಮವನ್ನು ನೋಡಿಕೊಂಡೇ ಹೋಗೋಣ’ ಎಂದಿದ್ದು ನೆನಪಿದೆ. ಹಾಡು ಪ್ರಾರಂಭವಾಗುತ್ತಿದ್ದಂತೇ ಯಾವತ್ತೂ ರೇಡಿಯೊ, ಟೇಪಿನಲ್ಲಿ ಕೇಳುವ ಚಿತ್ರಗೀತೆಯ ಧ್ವನಿಯನ್ನು ಆ ದಿನ ನಾನು ಪ್ರತ್ಯಕ್ಷವಾಗಿ ಕೇಳುತ್ತಿದ್ದೆ. ಖುಷಿ, ಆಶ್ಚರ್ಯ ಎರಡೂ ಆಗಿತ್ತು. ಕಾರ್ಯಕ್ರಮ ಮುಗಿದು ಮನೆಗೆ ಹೋಗುತ್ತಿದ್ದಂತೇ ನನ್ನ ಹತ್ತಿರದ ಅಕ್ಕನಲ್ಲಿ ಕೇಳಿದ್ದೆ. “”ನಿನ್ನ ಧ್ವನಿ ಯಾಕೆ ದೇವಸ್ಥಾನದಲ್ಲಿ ಹಾಡಿದ ಗಾಯಕಿಯ ಧ್ವನಿಯಂತೆ ಇಲ್ಲ?” ಎಂದು. “”ಹಾಗೆ ಧ್ವನಿ ಇದ್ದರೆ ಮಾತ್ರ ನೀನು ರೇಡಿಯೋದಲ್ಲಿ ಹಾಡಬಹುದು. ಇಲ್ಲದಿದ್ದರೆ ಅಷ್ಟೇ, ಅಮ್ಮನವರ ದೇವಸ್ಥಾನದ ಭಜನೆ ಸಪ್ತಾಹವೇ ಗತಿ” ಎಂದು ಅಧಿಕಪ್ರಸಂಗ ಮಾಡಿದ್ದೆ. ನಾನು ಮನದಲ್ಲೇ ಬೆಂಗಳೂರಿನ, ಮುಂಬೈಯ ಆ ಧ್ವನಿ, ರೇಡಿಯೋದಲ್ಲಿ ಬರುವ ಚಿತ್ರಗೀತೆಯ ಆ ಧ್ವನಿ ನಮ್ಮೂರಲ್ಲಿ ಯಾಕೆ ಇಲ್ಲ ಎಂದು ಅಂದುಕೊಂಡಿದ್ದಿದೆ. ಊರಲ್ಲಿ ಹಾಡುವ ಎಲ್ಲ ಅಕ್ಕಂದಿರ, ತಾಯಂದಿರ ಧ್ವನಿಯ ಪರಿಚಯ ನನಗೆ ಇತ್ತು. ಈ ಧ್ವನಿ ನಮ್ಮ ಮಾಸ್ತರರ ಮಗಳದ್ದು, ಈ ಧ್ವನಿ ಸಿಂಡಿಕೇಟ್‌ ಬ್ಯಾಂಕಿನ ಹೆಗಡೆಯವರ ಮಗಳದ್ದು, ಇದು ಮೆಡಿಕಲ್‌ ಶಾಪಿನವನ ಮಗನ ಧ್ವನಿ, ಇದು ಗುರುಗಳ ಎದುರು ಭಾವಪರವಶವಾಗಿ ಹಾಡುತ್ತಿದ್ದ ಕಮಲಕ್ಕನದು… ಹೀಗೆ ಎಷ್ಟು ದೂರದಿಂದ ಕೇಳಿದರೂ ಗುರುತು ಹಿಡಿಯುತ್ತಿದ್ದೆ. ಆದರೆ, ಚಿತ್ರಗೀತೆಯ ಆ ಧ್ವನಿ ನಮ್ಮೂರಲ್ಲಿ ಹಾಡುವ ಯಾವ ಅಕ್ಕತಂಗಿಯರ, ತಾಯಂದಿರ, ತಾಲೂಕು ಮಟ್ಟದಲ್ಲಾಗುವ ಯುವಜನ ಮೇಳದ ಸ್ಪರ್ಧಿಗಳ ಭಜನೆ, ಹಾಡುಗಳಲ್ಲಿ ಕೇಳಿದ್ದಿರಲಿಲ್ಲ. 

Advertisement

ನಂತರ ಬೆಂಗಳೂರಿಗೆ ವಿದ್ಯಾರ್ಥಿಯಾಗಿ ಬಂದ ಮೇಲೆ, ಬಸ್‌ಪಾಸ್‌ ಇದ್ದುದರಿಂದ ಕಾಲೇಜು ಮುಗಿಸಿ ಬರುವಾಗ ಕಲಾಕ್ಷೇತ್ರ/ಟೌನ್‌ಹಾಲ್‌ ಬಂದಾಗ ಅಲ್ಲೇ ಇಳಿದು ಕಾರಂತರ ಅಂಗಡಿಯಲ್ಲಿ ಚಹಾ ಕುಡಿದು ಸಭಾಂಗಣದ ಒಳ ಹೊಕ್ಕು ನಮಗಿಷ್ಟವಾಗುವ ಕಾರ್ಯಕ್ರಮಗಳೇನಾದರೂ ಇದ್ದು ಟಿಕೆಟ್‌ ಇಲ್ಲದೇ ಇದ್ದರೆ ಸ್ವಲ್ಪ ಹೊತ್ತು ಕೂರುವುದು, ಇಲ್ಲವಾದರೆ ಮತ್ತೆ ಮನೆಗೆ ಹೊರಡುವುದು ನಡೆಯುತ್ತಿತ್ತು. ಟೌನ್‌ಹಾಲಿನಲ್ಲಿ ಹೆಚ್ಚಾಗಿ ಸತ್ಸಂಗ, ಬಾಡಿ ಬಿಲ್ಡಿಂಗ್‌ ಸ್ಪರ್ಧೆ ಇತ್ಯಾದಿ. ಆದರೆ ಕಲಾಕ್ಷೇತ್ರದಲ್ಲಿ ಹಾಡು-ನಾಟಕಗಳು… 

ಹೀಗೆ ಒಂದು ದಿನ ಹೋದಾಗ ನಾನು ಚಿಕ್ಕವನಿದ್ದಾಗ ಇಡಗುಂಜಿ ದೇವಸ್ಥಾನದಲ್ಲಿ ಹಾಡಿದ ಗಾಯಕಿ ಕಲಾಕ್ಷೇತ್ರದ ಸ್ಟೇಜಿನ ಮೇಲೆ ಹಾಡುತ್ತಿದ್ದಳು. ಬಹಳ ಖುಷಿಯಾಗಿ ಅಲ್ಲಿರುವ ಕುರ್ಚಿಯಲ್ಲಿ ಕುಳಿತು ಕೇಳಲು ಪ್ರಾರಂಭಿಸಿದೆ. ಹಾಡು ಮುಗಿಯಿತು. ಎರಡನೆಯ ಹಾಡು ಪ್ರಾರಂಭವಾಗುವ ಮೊದಲು ಆ ಹಾಡಿನ ಸಂಯೋಜನೆಯ ಬಗ್ಗೆ ಮಾತನಾಡಿದಳು. ನನಗೆ ಒಮ್ಮೆಲೇ ತಲೆಯಲ್ಲಿ ಬಂದಿದ್ದು “ಇವಳ ಮಾತಿನ ಧ್ವನಿ ನನ್ನ ಅಕ್ಕನ ಧ್ವನಿಯ ಹಾಗೇ ಇದೆಯಲ್ಲ’ ಎಂದು. ಆಗಲೇ ಅವಳ ಹಾಡು ಪ್ರಾರಂಭವಾಗಿತ್ತು. ಮತ್ತೆ ಅದೇ ರೇಡಿಯೋದ ಚಿತ್ರಗೀತೆಗಳದೇ ಧ್ವನಿ! ಇದು ಹೇಗೆ ಸಾಧ್ಯ, ಏನೂ ಅರ್ಥವಾಗಲಿಲ್ಲ. ನನಗೆ ಪರಿಚಯದ ಕೆಲವರು ಸಂಗೀತ ಕಲಿಯುತ್ತಿದ್ದರು. ಅದೇ ಆಶ್ಚರ್ಯದಿಂದ ಅವರನ್ನು ಕೇಳಿದೆ. ಇದು ಹೇಗೆ ಎಂದು! ಅವರು, “”ಅವಳು ಹಾಡಿದ್ದು ಕಳ್ಳಧ್ವನಿಯಲ್ಲಿ” ಎಂದು ನಕ್ಕು ಬೇರೆ ವಿಷಯಕ್ಕೆ ಹೋದರು. ನನ್ನ ಅಕ್ಕನೂ ಹೀಗೆ ಮಾಡಬಹುದಲ್ಲ, ಅಕ್ಕ ಒಬ್ಬಳೇ ಯಾಕೆ, ನಮ್ಮ ತಾಲೂಕಿನವರೆಲ್ಲ ಹೀಗೆ ಮಾಡಿ ಚಿತ್ರಗೀತೆಗೆ ಹಾಡಬಹುದು ಎಂದುಕೊಂಡೆ. ಆದರೆ, ನನ್ನ ಸೀಮಿತ ಜ್ಞಾನದಲ್ಲಿ ಅಕ್ಕನಿಗೆ ಸುಮ್ಮನೆ ಬೈದೆ, ಅವಳ ಧ್ವನಿ ಒರಿಜಿನಲ್‌ ಎನಿಸುತ್ತಿತ್ತು. ನಂತರ ರೇಡಿಯೋದಲ್ಲಿ ಯಾವ ಹಾಡು ಕೇಳಿದರೂ ಟಿವಿಯಲ್ಲಿ ಯಾವ ಹಾಡು ನೋಡಿದರೂ ಒಂದೇ ಪ್ರಶ್ನೆ. ಈ ಗಾಯಕಿ ತನ್ನ ನಿಜವಾದ ಧ್ವನಿಯಲ್ಲಿ ಹಾಡುತ್ತಾಳ್ಳೋ ಅಥವಾ ಕಳ್ಳಧ್ವನಿಯಲ್ಲೋ ಎಂದು. ಈ ಹುಡುಕಾಟ ಇಂದೂ ನಡೆದಿದೆ ಅಥವಾ ಯಾವ ಹಾಡನ್ನು ಕಳ್ಳಧ್ವನಿಯಲ್ಲಿ ಹಾಡಿದ್ದಾರೆ, ಯಾವ ಹಾಡನ್ನು ನಿಜವಾದ ಧ್ವನಿಯಲ್ಲಿ ಹಾಡಿದ್ದಾರೆ ಎಂದು ಹುಡುಕುತ್ತೇನೆ. ಈಗ ನಾನು ಆ ಧ್ವನಿಯನ್ನು ಕಳ್ಳಧ್ವನಿಯೆಂದು ಕರೆಯದೆ ಕೃತಕಧ್ವನಿ, ಕೀರುಧ್ವನಿ (ಶಬ್ದಕೋಶದ ಪ್ರಕಾರ) ಅಥವಾ “ಫ‚ಾಲ್ಸೆಟೊ’ ಎಂದು ಕರೆಯುತ್ತೇನೆ. ಫ‚ಾಲ್ಸೆಟೊ ಎನ್ನುವುದು ಟ್ರೂಸೆಟೊ ಅಂತೂ ಅಲ್ಲವಲ್ಲ. ! 
.
ಸಾಮಾನ್ಯವಾಗಿ ಧ್ವನಿ ಸ್ತರಗಳನ್ನು ಅದು ಅನುರಣಿಸುವ ಅಥವಾ “ರೆಸೋನೇಟ್‌’ ಆಗುವ ಜಾಗದಿಂದ ಗುರುತಿಸಬಹುದು. ಕೆಳ ಸ್ತರದ ಅಥವಾ ಮಂದ್ರದ ಸ್ವರಗಳು ಎದೆ ಭಾಗದಲ್ಲಿ ರೆಸೋನೇಟ್‌ ಆಗುವುದರಿಂದ ಅದನ್ನು ಚೆಸ್ಟ್‌ ವಾಯ್ಸ ಎಂದು ಕರೆದರೆ, ಧ್ವನಿಯ ವ್ಯಾಪ್ತಿಯ ಮದ್ಯ/ಕ್ಕಿಂತ ಸ್ವಲ್ಪ$ಮೇಲಿನ ಸ್ವರಗಳು ಗಂಟಲಿನ ಮೇಲ್ಭಾಗದಲ್ಲಿ ಅನುರಣಿಸುವುದರಿಂದ ಮಿಕ್ಸಡ್‌ ವಾಯ್ಸ ಎಂದೂ, ಮತ್ತೆ ಮೇಲಿನ ಸ್ವರಗಳು ತಲೆಯಲ್ಲಿ ಅನುರಣಿಸುವ ಅನುಭವವಾಗುವುದರಿಂದ ಅದನ್ನು ಹೆಡ್‌ ವಾಯ್ಸ ಎಂದೂ ಕರೆಯುತ್ತಾರೆ. ಈ ಮೂರೂ ಧ್ವನಿಗಳು ಹುಟ್ಟುವುದು ಧ್ವನಿ ಪೆಟ್ಟಿಗೆಯ ಪದರ (ಧ್ವನಿ ತಂತು) ಸಂಪೂರ್ಣ ಕಂಪಿಸುವುದರಿಂದ. ಇದನ್ನು ಮೊಡಲ್‌ ಅಥವಾ ಸಹಜ ಧ್ವನಿ ಎಂದು ಕರೆಯಬಹುದು. ಇದೇ ಪದರ ಒತ್ತಲ್ಪಟ್ಟು ಅದರ ಅಂಚು/ತುದಿ ಭಾಗವಷ್ಟೇ ಕಂಪಿಸಿದರೆ “ಕೀರಲು ಧ್ವನಿ’ಯು ಹುಟ್ಟುತ್ತದೆ. ಇಲ್ಲಿ ಧ್ವನಿಪೆಟ್ಟಿಗೆಯ  ಪದರ ಪೂರ್ತಿ ಕಂಪಿಸದೇ ಇರುವುದರಿಂದ ದೇಹ ಅನುರಣಿಸುವ ಶಕ್ತಿಯೂ ಕಡಿಮೆ. 

ಈ ಕಳ್ಳಧ್ವನಿಯನ್ನು ಕಂಡು ಹಿಡಿಯುವುದು ಹೇಗೆ? ಯಾವುದೇ ವ್ಯಕ್ತಿಯ ಮಾತಿನ ಧ್ವನಿಗೆ ಮತ್ತು ಹಾಡಿನ ಧ್ವನಿಗೆ ಸ್ವಲ್ಪ ಸಾಮ್ಯವಿದೆಯಾದರೆ ಅದು ಅವರ ಸ್ವಾಭಾವಿಕ ಧ್ವನಿ ಎಂದು ಹೇಳಬಹುದು. ಗಂಡಸು ಹೆಣ್ಣಿನ ಧ್ವನಿಯಲ್ಲಿ ಹಾಡಿದರೆ ಅದನ್ನು “ಕಳ್ಳಧ್ವನಿ’ ಎನ್ನಬಹುದು. ಸ್ತ್ರೀಯಲ್ಲಿ ಅವಳ ಸ್ವಾಭಾವಿಕ ಮಾತಿನ ಧ್ವನಿಯಿಂದ ಹುಟ್ಟಿದ ವಿಶಿಷ್ಟ ಗುರುತನ್ನು , ಮಂದ್ರ ಮತ್ತು ತಾರ ಸಪ್ತಕದ ಆಕೆಯ ಹಾಡಿನಲ್ಲಿ ಗುರುತು ಹಿಡಿಯಲಾಗದೇ ಇದ್ದರೆ ಅದನ್ನು ಕೃತಕ ಅಥವಾ ಕಳ್ಳಧ್ವನಿಯೆಂದು ಹೇಳಬಹುದು. 

ನಾವು ಇದನ್ನು ಸ್ವಲ್ಪ ಬೇರೆ ದಿಕ್ಕಿನಲ್ಲಿ ಗಮನಿಸೋಣ. ಕ್ರಿಕೆಟಿನಲ್ಲಿ ಹೇಗಾದರೂ ಬಾಲ್‌ ಒಗೆದರಾಯಿತು ಎಂದು ಕೈಯನ್ನು ನಿರ್ದಿಷ್ಟ ಮಟ್ಟಕ್ಕೆ ತಿರುಗಿಸದೇ ಕೆಳಗಿನಿಂದ ತೂರಿ ಬಿಡಬಹುದೆ? ವಾಲಿಬಾಲಿನಲ್ಲಿ ಬಾಲನ್ನು ಕಾಲಲ್ಲಿ, ಫ‌ುಟ್ಬಾಲನ್ನು ಕೈಯಲ್ಲಿ ಮುಟ್ಟಬಹುದೆ, ಕೇರ್‌ಂನಲ್ಲಿ ಸ್ಟ್ರೈಕರ್‌ ಬಳಸದೇ ಕೈಯಲ್ಲೇ ಎತ್ತಿ ಕಪ್ಪು-ಬಿಳಿ ಪೀಸುಗಳನ್ನು ರಂಧ್ರದಲ್ಲಿ ಹಾಕಬಹುದೆ? ಹೀಗೆಲ್ಲ ಮಾಡಿದರೆ ಪರಿಣಾಮ (ಗೆಲುವು) ಬಂದೀತು, ಆದರೆ, ಅದರ ಮಾಧ್ಯಮ (ವಿಧಾನ) ಸರಿಯೇ? ಜಗತ್ತಿನ ಪ್ರತೀ ಆಟಕ್ಕೂ ಒಂದು ನಿಯಮವಿದೆ. ಆಟದಲ್ಲಿ ಮಾಧ್ಯಮ ಮತ್ತು ಪರಿಣಾಮವೆರಡೂ ಸರಿ ಇರಬೇಕು. ಇಲ್ಲದಿದ್ದರೆ ಇದು ತಾತ್ಕಾಲಿಕ ಪರಿಣಾಮವಾದೀತು ಅಥವಾ ಒಟ್ಟೂ ಪರಿಣಾಮವೇ ಸರಿ ಇಲ್ಲವೆಂದು ಹೇಳಬೇಕಾದೀತು. ಇರಲಿ, ಈಗ ಮೂಲ ವಿಷಯಕ್ಕೆ ಬರೋಣ. ಸಹಜ ಧ್ವನಿಯಿಂದ (ಧ್ವನಿ ತಂತುವಿನ ಪೂರ್ತಿ ಬಳಕೆ) ಹುಟ್ಟುವ ಮಂತ್ರ ಮನುಷ್ಯನ ದೇಹ, ಮನಸ್ಸು, ಪರಿಸರವನ್ನೆಲ್ಲ ಶುದ್ಧ, ಸಮ, ಹದಗೊಳಿಸುತ್ತದೆ ಎಂದು ನಂಬಿದರೆ ಸ್ವರ ಸಾಧನೆಯೂ ಅದನ್ನೇ ಮಾಡಬೇಕಲ್ಲವೆ? ಮಂತ್ರದ ಉಚ್ಚಾcರಣೆಯ ಮೂಲವೂ ಸ್ವರವೇ. ಈ ದಾರಿಯಿಂದಲೇ ಮೂಲಸ್ವರೂಪವನ್ನು ಕಾಣಬಹುದೆಂದು ನಾವು ನಂಬಿದವರು. ಆದರೆ, ಕಳ್ಳಧ್ವನಿಯ ಹುಟ್ಟಿನಲ್ಲಿ ಕೇವಲ ಧ್ವನಿತಂತು/ಪದರದ ಅಂಚು ಕಂಪಿಸುವುದರಿಂದ, ಉಚ್ಚರಿಸುವವನ ದೇಹ, ಮನಸ್ಸು, ಪರಿಸರ ಮತ್ತು ಕೇಳುವವನಿಗೆ ಒಪ್ಪಿತವಾಗುವ ಪರಿಣಾಮ ಬೀರದು ಎನ್ನುವ ವಿಚಾರದಿಂದ ಭಾರತದಲ್ಲಿ ಇದರ ಬಳಕೆ ವಜ್ಯìವಾಯಿತು ಎನ್ನಬಹುದೇನೊ.

Advertisement

ಹಾಗಾದರೆ ಈ ಕಳ್ಳಧ್ವನಿಯನ್ನು ಯಾಕೆ ಬಳಸಬೇಕು. ಅದರ ಲಾಭವೇನು? 
ಇದರ ಒಂದೇ ಒಂದು ಲಾಭವೆಂದರೆ ವ್ಯಕ್ತಿ ತನ್ನ ಧ್ವನಿಯ ವ್ಯಾಪ್ತಿಗಿಂತಲೂ ಮೇಲಿನ ಸ್ವರದಲ್ಲಿ ಏನೂ ಕಷ್ಟವಿಲ್ಲದೇ ಸರಾಗವಾಗಿ ಹಾಡಬಹುದು ಎನ್ನುವುದು. ಈ ಕಳ್ಳ ಯಾಕೆ, ಎಲ್ಲಿ ನುಸುಳಬೇಕಾಯಿತು? – ಇದರಿಂದ ಹೆಚ್ಚು ಬಾಧಿತರಾದವರು ಚಲನಚಿತ್ರಗೀತೆ ಮತ್ತು ಒಂದು ಹಂತದಲ್ಲಿ ಲಘುಸಂಗೀತಗಳಾದ ಭಕ್ತಿಗೀತೆ ಮತ್ತು ಭಾವಗೀತೆಗಳನ್ನು ಹಾಡುವ ಗಾಯಕಿಯರು! ನನಗನಿಸುವಂತೇ ಇದು ಮುಖ್ಯವಾಗಿ ಎರಡು ಕಾರಣಗಳಿಂದ ನುಸುಳಿದ್ದು. ಮೊದಲನೆಯದು- ಉದಾಹರಣೆಗೆ ಲತಾ ಮಂಗೇಶ್ಕರರರು ದೈವಿದತ್ತವಾಗೇ ಮೇಲಿನ ಶುೃತಿಯಲ್ಲಿ/ಸ್ತರದಲ್ಲಿ ಹಾಡಬಲ್ಲವರು. ಯಾವಾಗ ಅವರು ಬಹಳ ಜನಪ್ರಿಯರಾದರೋ ಚಿತ್ರೋದ್ಯಮದಲ್ಲಿ ಗೆಲ್ಲಲು ಅದೇ ಧ್ವನಿ ಬೇಕಾಯಿತು. ಸುಂದರವಾಗಿರುವ ಎಲ್ಲ ನಾಯಕಿಯರಿಗೂ ಲತಾಮಂಗೇಶ್ಕರರ ಧ್ವನಿಯೇ ಇದೆ ಎನ್ನುವ ನಂಬಿಕೆ ಪ್ರೇಕ್ಷಕರಲ್ಲಿ /ಕೇಳುಗರಲ್ಲಿ ಆವಾಹನೆಯಾಗಿತ್ತು! ಆಗಲೇ ಸಂಗೀತ ಕಲಿಯುವ ಎಲ್ಲರಿಗೂ, ಆ ಸಮಯದಲ್ಲಿ ಹಾಡುವ ಎಲ್ಲರಿಗೂ, ಲತಾ ಮಂಗೇಶ್ಕರ್‌ ಆಗಬೇಕೆಂದು ಎನಿಸಿದ್ದು ಮತ್ತು ಚಿತ್ರ ನಿರ್ಮಾಪಕರ ವ್ಯಾವಹಾರಿಕ ಆಸೆಯನ್ನು ಸಂಗೀತ ನಿರ್ದೇಶಕರ ಬಾಯಲ್ಲಿ ಲತಾ ಮಂಗೇಶ್ಕರ್‌ ಧ್ವನಿ ಬೇಕು ಎಂದು ಹೇಳಿಸಿದ್ದು. ಹಾಗಾಗೇ ಅವರು ಏರಿಸುವ ಸ್ವರವನ್ನೇ ನಾನೂ ಮುಟ್ಟಿದರೆ ಮಾತ್ರ ನನ್ನನ್ನು ಗುರುತಿಸುತ್ತಾರೆ ಎಂದುಕೊಂಡು ನೈಜವಾಗಿ ಆ ಸ್ತರದಲ್ಲಿ ಹಾಡಲಾಗದ ಹಾಡುಗಾರರು ಕಳ್ಳ ಧ್ವನಿಗೆ ಶರಣಾಗಿದ್ದು. 

ಹೀಗೆ ಆಯಾ ಕಾಲ ಮತ್ತು ಸ್ಥಳದಲ್ಲಿ ಆಗುವ ಈ ಕ್ರಿಯೆಯಿಂದಾಗಿ ಸಾವಿರಾರು ಜನ ಹಾಡುಗಾರರು ತಮ್ಮ ಮೂಲ ಸ್ವರವನ್ನು ಮುಚ್ಚಿಕೊಳ್ಳುತ್ತಾರೆ ಅಥವಾ ಕಳೆದುಕೊಳ್ಳುತ್ತಾರೆ. ಇದೇ ರೀತಿಯ ಪರಿಣಾಮ ದಕ್ಷಿಣದಲ್ಲಿ ಚಿತ್ರಾ ಅಥವಾ ಇನ್ನಿತರ ಗಾಯಕಿಯರ ಸಂದರ್ಭದಲ್ಲೂ ಆಗಿದೆ ಎಂದೆನಿಸುತ್ತದೆ. ಕೆಲವು ಸಾರಿ ಯಾವುದೇ ಮಲಯಾಳ ಚಾನೆಲ್ಲಿನಲ್ಲಿ ಹಾಡು ಕೇಳಿದರೂ ನಮಗೆ ಚಿತ್ರಾ ಹಾಡಿದಂತೇ ಕೇಳಿಸುತ್ತದೆ! 

ಎರಡನೆಯದು- ಚಲನಚಿತ್ರದ ಯುಗಳ ಗೀತೆಯ ಸಂದರ್ಭದಲ್ಲಿ ಗಂಡು -ಹೆಣ್ಣು ಇಬ್ಬರೂ ಒಂದೇ ಶುೃತಿಯಲ್ಲಿ ಹಾಡಬೇಕಾದಾಗ. ದೈವೀದತ್ತವಾಗಿ ತಾರಕದ/ಮೇಲಿನ ಸ್ತರಗಳಲ್ಲಿ ಹಾಡುವ ಧ್ವನಿ ಇದ್ದರಂತೂ ಆಯಿತು. ಇಲ್ಲದಿದ್ದರೆ ಹೆಣ್ಣು ಧ್ವನಿಯು ಕಳ್ಳಧ್ವನಿಗೆ ಶರಣಾಗಬೇಕಾಗುತ್ತದೆ. ಈ ವಿಷಯವನ್ನು ಕಿಶೋರಿ ಅಮೋಣರ್‌ ಬಹಳ ಪ್ರಶ್ನಿಸಿದ್ದಾರೆ, ಚರ್ಚಿಸಿದ್ದಾರೆ ಕೂಡ.

ನಿಜವಾದ ಸ್ವರ ಮರೆಯಾಗುತ್ತದೆ !
ಇಲ್ಲೊಂದು ಅಪಾಯವಿದೆ. ಹಾಗೆ ನೋಡಿದರೆ ಗಾಯನದಲ್ಲಿ ಅತಿ ತಾರಕದ ಸ್ವರದ ಬಳಕೆಯಿಂದ ಒಬ್ಬ  ಗಾಯಕಿಯು ತನ್ನದೇ ಆದ ವಿಶಿಷ್ಟ ಧ್ವನಿಯನ್ನು ಬಹಳ ಮಟ್ಟಿಗೆ ಕಳೆದುಕೊಳ್ಳುತ್ತಾಳೆ. ಅವಳ ಧ್ವನಿಯ ವಿಶಿಷ್ಟತೆ ಗುರುತು ಹುಟ್ಟುವುದೇ ಅವಳ ಚೆಸ್ಟ್‌ ವಾಯ್ಸ /ಮಿಕ್ಸಡ್‌/ಪ್ರಾರಂಭಿಕ ಹೆಡ್‌ವಾಯ್ಸನಲ್ಲಿ. ಸ್ವರವ್ಯಾಪ್ತಿಯ ಪ್ರಾರಂಭಿಕ ಸ್ವರದಿಂದಲೇ ಗಾಯಕಿ ಕಳ್ಳಧ್ವನಿಯನ್ನು ಉಪಯೋಗಿಸಿದರೆ ತನ್ನ ವಿಶಿಷ್ಟ ಗುರುತನ್ನು ಕಳೆದುಕೊಳ್ಳುತ್ತಾಳೆ. ವಿಶಿಷ್ಟತೆಯನ್ನು ಕಳೆದುಕೊಳ್ಳಬಾರದೆಂಬ ಎಚ್ಚರ ಮತ್ತು ಈ ಚಲನಚಿತ್ರಗೀತೆಯೆನ್ನುವ ಮಹಾ ಹೆದ್ದಾರಿಗೆ ಪೂರ್ತಿ ಹೊಂದದೇ ಇರುವುದರಿಂದ ರೇಶ್ಮಾ, ಫ‚‌ರಿದಾ ಖನುಮ್‌, ರೇಖಾ ಭಾರದ್ವಾಜ್‌, ರಿಚಾ ಶರ್ಮ, ಬಿ. ಜಯಶ್ರೀ, ಸಂಗೀತಾ ಕಟ್ಟಿ , ಪಲ್ಲವಿಯಂಥವರ ಬಂಗಾರದ ಧ್ವನಿ ಇನ್ನೂ ಉಳಿದುಕೊಂಡಿರುವುದು. ಈ ಮಹಾಯಜ್ಞದಲ್ಲಿ ಇನ್ನೆಷ್ಟು ರಿಚಾ ಶರ್ಮ, ಜಯಶ್ರೀಯಂಥವರನ್ನು ನಾವು ಕಳೆದುಕೊಂಡಿದ್ದೇವೋ! 

ಪ್ರತೀ ಮಣ್ಣಿಗೂ ಅದರದ್ದೇ ಆದ ಧ್ವನಿ ವೈಶಿಷ್ಟ್ಯವಿದೆ. ಹಾಗಾಗೇ ನಾವು ಇದು ಧಾರವಾಡದ ಧ್ವನಿ, ತಮಿಳುನಾಡಿನ ಧ್ವನಿ, ಮಹಾರಾಷ್ಟ್ರದ ಧ್ವನಿ, ಗುಜರಾತಿನ ಧ್ವನಿ, ರಾಜಸ್ಥಾನದ ಧ್ವನಿ, ಪಂಜಾಬಿನ ಧ್ವನಿ, ಹರಿಯಾಣದ ಧ್ವನಿಯೆಂದು ಗುರುತಿಸುತ್ತೇವೆ. ಎಲ್ಲ ಹೂವುಗಳಿಗೂ ಅದರದೇ ಆದ ಚಂದ, ಪರಿಮಳಗಳಿವೆ. ಹೋಲಿಸಬಾರದು. ಆದರೆ, ಫಿಲ್ಮಿನಲ್ಲಿ ಬರುವ ಎಲ್ಲ ಹೀರೊಯಿನ್ನಿಗೆ ಮಾತ್ರ ಭಾರತವಿಡೀ ಒಂದೇ ಧ್ವನಿ! ಈ ಕಷ್ಟ ಭಾರತೀಯ ಶಾಸ್ತ್ರೀಯ ಸಂಗೀತಕ್ಕಿಲ್ಲ. ಈ ಮೇಲೆ ಹೇಳಿದ ಹಾಡುಗಾರರನ್ನು ಮತ್ತು ಶಾಸ್ತ್ರೀಯ ಸಂಗೀತದ ಹಾಡುಗಾರರನ್ನು ಲಕ್ಷ ಜನರ ಮೇಳದಲ್ಲಿ ಹುಡುಕಬಹುದು. ಆ ವಿಶಿಷ್ಟ ವಾಸನೆ ಜನ್ಮ ಜನ್ಮಾಂತರದ್ದು. ಮುಂದಿನ ವಾರ ಪಾಶ್ಚಿಮಾತ್ಯ ಸಂಗೀತ, ಯಕ್ಷಗಾನದ ಪ್ರಸ್ತುತಿಯಲ್ಲಿ ಕಳ್ಳಧ್ವನಿಯ ಪ್ರಭಾವವನ್ನು ಚರ್ಚಿಸೋಣ. 

ಸಚ್ಚಿದಾನಂದ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next