ಚಿತ್ತಾಪುರ: ಪಟ್ಟಣದಲ್ಲಿ ಬಸವ ಭವನ, ವಾಲ್ಮೀಕಿ ಭವನ, ಕನ್ನಡ ಭವನ ನಿರ್ಮಾಣ ಮಾಡಲು ಶಾಸಕ ಪ್ರಿಯಾಂಕ್ ಖರ್ಗೆ ಅವರು 3 ಕೋಟಿ ರೂ. ಅನುದಾನ ತಂದು 3 ಸಾವಿರ ಕೋಟಿ ಅನುದಾನ ತಂದಿರುವುದಾಗಿ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಜಿಪಂ ಮಾಜಿ ಸದಸ್ಯ ಅರವಿಂದ್ ಚೌಹಾಣ್ ಆರೋಪಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಪ್ರಿಯಾಂಕ್ ಖರ್ಗೆ ಅವರು ಬಸವ ಭವನ, ಕನ್ನಡ ಭವನ, ವಾಲ್ಮೀಕಿ ಭವನ ನಿರ್ಮಿಸುವುದಾಗಿ ಘೋಷಿಸಿ 8 ವರ್ಷಗಳು ಕಳೆದಿವೆ. ಅವರು 3 ವರ್ಷಗಳ ಕಾಲ ಸಂಪುಟ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಆದರೂ ಅನುದಾನ ತರಲಾಗದೇ ಕ್ಷೇತ್ರದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದರು.
ಬಸವ ಭವನ ನಿರ್ಮಾಣ, ಕನ್ನಡ ಭವನ ಹಾಗೂ ಸಾಹಿತ್ಯ ಪುಸ್ತಕದ ಗ್ರಂಥಾಲಯ ನಿರ್ಮಾಣಕ್ಕೆ ಅನುದಾನ ಘೋಷಿಸಿ ಹಾಗೂ ಭವನಗಳ ನೀಲ ನಕ್ಷೆ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. 8 ವರ್ಷ ಕಳೆದರೂ ಬಸವ ಭವನಕ್ಕೆ ಜಾಗ ನೀಡಿಲ್ಲ. ಇದರಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ಬಸವಾಭಿಮಾನಿಗಳಿಗೆ ನಂಬಿಕೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.
ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಕನ್ನಡ ಭವನ ಕಾಮಗಾರಿ ಪ್ರಾರಂಭಿಸಿ ಇಲ್ಲಿವರೆಗೂ ಭವನ ಬುನಾದಿಯಿಂದ ಮೇಲೆದ್ದಿಲ್ಲ. ಆ ಸ್ಥಳದಲ್ಲಿ ಬೇಲಿ ಬೆಳೆದು ಶಾಸಕರ ಬೇಜವಾಬ್ದಾರಿ ಹಾಗೂ ನಿರ್ಲಕ್ಷತನ ಎದ್ದು ಕಾಣುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ನೀಲಕಂಠರಾವ್ ಪಾಟೀಲ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆನಂದ ಪಾಟೀಲ್ ನರಿಬೋಳ, ಪುರಸಭೆ ವಿರೋಧ ಪಕ್ಷದ ನಾಯಕ ನಾಗರಾಜ ಭಂಕಲಗಿ, ಮಲ್ಲಿಕಾರ್ಜುನ ಪೂಜಾರಿ, ಕೋಟೇಶ್ವರ ರೇಷ್ಮಿ, ಶಶಿ ಭಂಡಾರಿ, ಭೀಮಣ್ಣ ಸೀಬಾ, ಭೀಮರಾಯ ದೊರೆ, ಹನುಮಂತ ವ್ಯಾಸ, ಯಮನಪ್ಪ ಬೋಸಗಿ, ನಾಗರಾಜ್ ಹೂಗಾರ, ಮಹೇಶ ಬಟಗೇರಿ, ಅಂಬು ಹೋಳಿಕಟ್ಟಿ, ರಾಜು ದೊರೆ ಸೇರಿದಂತೆ ಇತರರು ಇದ್ದರು.