ಸಿರುಗುಪ್ಪ: ದೇಶದ ಸಂಸ್ಕೃತಿಯ ಭಾಗವಾಗಿರುವ ಗಣೇಶ ಹಬ್ಬವನ್ನು ಬಿಡಬಾರದು ಎನ್ನುವ ಉದ್ದೇಶದಿಂದ ಸರ್ಕಾರವು ವಿವಿಧ ನಿಬಂಧನೆಗಳೊಂದಿಗೆ ಗಣೇಶ ಹಬ್ಬದ ಆಚರಣೆಗೆ ಅವಕಾಶ ನೀಡಿದ್ದು ಸಾರ್ವತ್ರಿಕವಾಗಿ ಗಣೇಶ ಕೂಡಿಸುವವರು ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಭಕ್ತಿ ಶ್ರದ್ಧೆಗಳಿಂದ ಹಬ್ಬವನ್ನು ಆಚರಿಸಬೇಕು ಎಂದು ತಹಶೀಲ್ದಾರ್ ಎಸ್.ಬಿ.ಕೂಡಲಗಿ ತಿಳಿಸಿದರು.
ನಗರದ ಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ ಹಬ್ಬದ ಅಂಗವಾಗಿ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಯಿಂದ ತಾಲೂಕಿನ ವಿವಿಧ ಗಣೇಶೋತ್ಸವ ಆಚರಣೆ ಸಮಿತಿಗಳ ಅಧ್ಯಕ್ಷರ ಹಾಗೂ ಪದಾ ಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮನೆಗಳಲ್ಲಿವಿನಾಯಕನನ್ನು ಕೂಡಿಸಲು ಆದ್ಯತೆ ನೀಡಬೇಕು.
ಸಾರ್ವತ್ರಿಕವಾಗಿ ಕೂಡಿಸುವವರು ಒಂದು ದಿನಕ್ಕೆ ಸೀಮಿತವಾಗಿ ಕೂಡಿಸಿ ಅಂದೇ ಗಣೇಶ ಮೂರ್ತಿಯನ್ನು ವಿಸರ್ಜಿಸಬೇಕು ಎಂದು ಹೇಳಿದರು. ಸಿಪಿಐ ಕಾಳಿಕೃಷ್ಣ ಮಾತನಾಡಿ, ಗಣೇಶ ಮೂರ್ತಿ ಮನೆಗಳಲ್ಲಿ 2 ಅಡಿ ಸಾರ್ವತ್ರಿಕವಾಗಿ 4 ಅಡಿಗಿಂತ ಎತ್ತರ ಇರಬಾರದು, ನಗರಸಭೆ ಸೇರಿದಂತೆ ಅಗತ್ಯ ಇಲಾಖೆಗಳಿಂದ ಪರವಾನಗಿ ಪಡೆಯಬೇಕು. ಪೆಂಡಾಲ್ ಗಳಲ್ಲಿ 20 ಜನಕ್ಕಿಂತ ಹೆಚ್ಚು ಜನ ಸೇರಬಾರದು. ಸಿ.ಸಿ. ಕ್ಯಾಮೆರಾ ಅಳವಡಿಸಬೇಕು. ಸ್ಯಾನಿಟೈಸರ್, ಮಾಸ್ಕ್ನ್ನು ಭಕ್ತರಿಗೆ ಕಡ್ಡಾಯವಾಗಿ ಧರಿಸುವಂತೆ ನೋಡಿಕೊಳ್ಳಬೇಕು, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕೈಗೊಳ್ಳಬೇಕು, ಅರ್ಜಿ ಸಲ್ಲಿಸುವಾಗ ಗಣೇಶನನ್ನು ವಿಸರ್ಜಿಸುವ ಮಾರ್ಗವನ್ನು ತಿಳಿಸಬೇಕು, ಸರ್ಕಾರದ ಮಾರ್ಗಸೂಚಿ ಯಂತೆ ಗಣೇಶನನ್ನು ವಿಸರ್ಜಿಸುವಾಗ ನಾಲ್ಕು ಜನಕ್ಕಿಂತ ಹೆಚ್ಚುಜನ ಸೇರುವಂತಿಲ್ಲ ಎಂದು ತಿಳಿಸಿದರು.
ಪೌರಾಯುಕ್ತ ಪ್ರೇಮ್‌ಚಾರ್ಲ್ಸ್, ಪಿಎಸ್‌ಐ ಗಂಗ ಪ್ಪಬುರ್ಲಿ, ಜೆಸ್ಕಾಂ ಇಲಾಖೆಯ ಅಧಿಕಾರಿ ರಾಘವೇಂದ್ರ ಸೇರಿದಂತೆ ವಿವಿಧ ಗಣೇಶೋತ್ಸವ ಸಮಿತಿಯ ಸದಸ್ಯರು ಇದ್ದರು.