ಬೈಲಹೊಂಗಲ: ಕೋವಿಡ್ ಸೋಂಕು ಹರಡದಂತೆ ಸರಕಾರ ಸೂಚಿಸಿರುವ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ದದಿದ್ದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಐಪಿಎಸ್ ಅಧಿಕಾರಿ ಎಎಸ್‌ಪಿ ಪ್ರದೀಪ ಗುಂಟೆ ಎಚ್ಚರಿಕೆ ನೀಡಿದರು.
ಅವರು ಮಂಗಳವಾರ ತಮ್ಮ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಕೋವಿಡ್ ಸೋಂಕು ತಡೆಗಟ್ಟಲು ಜನತೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದು, ಮಾಸ್ಕ್ ಧರಿಸಬೇಕು. ವ್ಯಾಪಾರಸ್ಥರು ತಮ್ಮ ವಹಿವಾಟನ್ನು ನಿಯಮಾವಳಿ ಪ್ರಕಾರ ಕೈಗೊಳ್ಳಬೇಕು ಎಂದರು.
ಅಕ್ರಮ ಸಾರಾಯಿ ಮಾರಾಟ, ಜೂಜಾಟ, ಮಟಕಾ, ಗಾಂಜಾ, ಕಳ್ಳತನ ಪ್ರಕರಣಗಳ ಕುರಿತು ಹೆಚ್ಚಿನ ನಿಗಾ ವಹಿಸಲಾಗುತ್ತಿದ್ದು, ಸಾರ್ವಜನಿಕರು ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕೈಜೋಡಿಸಬೇಕು ಎಂದರು.
ಕಂದಾಯ ಇಲಾಖೆ, ಪುರಸಭೆ ಸಹಕಾರದಿಂದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿಯಮಾವಳಿ ರೂಪಿಸಲಾ ಗುತ್ತಿದೆ. ಬೇಕಾಬಿಟ್ಟಿಯಾಗಿ ವಾಹನ ಚಾಲನೆ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಪಟ್ಟಣದಲ್ಲಿ ಅಕ್ರಮ ಸಾರಾಯಿ ಮಾರಾಟ, ಯುವಕರಲ್ಲಿ ಗಾಂಜಾ ಸೇವನೆ ಹೆಚ್ಚುತ್ತಿದೆ ಮತ್ತು ರೋಡ್ ರೋಮಿಯೋಗಳ ಸಮಸ್ಯೆ ಕುರಿತು ಪತ್ರಕತರರು ಗಮನ ಸೆಳೆದಾಗ, ಕೂಡಲೇ ಪರಿಶೀಲಿಸಿ ಕಡಿವಾಣ ಹಾಕಲಾಗುವುದು ಎಂದರು.
ಸಿಪಿಐ ಮಂಜುನಾಥ ಕುಸಗಲ್ಲ, ಪಿಎಸ್‌ಐ ಈರಪ್ಪ ರಿತ್ತಿ ಮಾತನಾಡಿದರು.