ರಾಯಚೂರು: ಸಾಕಷ್ಟು ಹೊಸ ಕಾಮಗಾರಿಗಳ ಆರಂಭಕ್ಕೆ ಕೋವಿಡ್-19 ಅಡ್ಡವಾಗಿತ್ತು. ಅದಕ್ಕೂ ಮುನ್ನ ಶುರುವಾದ ಕಾಮಗಾರಿಗಳಿಗೆ ಯಾವುದೇ ಅಡ್ಡಿಯಿಲ್ಲ ಎಂದು ಸರ್ಕಾರ ಹೇಳಿದರೂ ಇಲ್ಲಿನ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಮಾತ್ರ ಇಂದಿಗೂ ಕುಂಟುತ್ತಲೇ ಸಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಯಡಿ 1.98 ಕೋಟಿ ವೆಚ್ಚದಲ್ಲಿ ಕೈಗೊಂಡ ಈ ಕಾಮಗಾರಿ ಇಷ್ಟೊತ್ತಿಗಾಗಲೇ ಮುಗಿಯಬೇಕಿತ್ತು. ಆದರೆ, ಕ್ರಿಯಾ ಯೋಜನೆಯಲ್ಲಿ ಎದುರಾದ ತಾಂತ್ರಿಕ ಸಮಸ್ಯೆಗಳಿಂದ ಅದು ವಿಳಂಬವಾಗುತ್ತಲೇ ಬಂದಿದೆ.
ಲೋಕೋಪಯೋಗಿ ಇಲಾಖೆಗೆ ಕಾಮಗಾರಿ ಹೊಣೆ ನೀಡಲಾಗಿದೆ. ಆರಂಭದಲ್ಲಿ ಅವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸಿದ್ದರಿಂದ ಹಣದ ಕೊರತೆ ಎದುರಾಗಿದೆ. ಬಳಿಕ ಮರು ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸಿದಾಗ ಅನುದಾನ ಬಿಡುಗಡೆ ವಿಳಂವಾಗಿ ಕಾಮಗಾರಿಗೆ ಮತ್ತಷ್ಟು ತೊಡಕಾಗಿದೆ. ಅದರ ಜತೆಗೆ ಕೋವಿಡ್-19 ಕಾರಣಕ್ಕೂ ಕಾಮಗಾರಿ ವಿಳಂಬವಾಗಿದೆ.
ಹೆಚ್ಚುವರಿ 47 ಲಕ್ಷ ರೂ. ಅನುದಾನ: ಆರಂಭದಲ್ಲಿ 1.98 ಕೋಟಿ ರೂ.ಗೆ ಟೆಂಡರ್ ಕರೆಯಲಾಗಿತ್ತು. ಆದರೆ,ಬ್ಯಾಡ್ಮಿಂಟನ್ ಕೋರ್ಟ್ ಅತ್ಯಾಧುನಿಕ ರೂಪುರೇಷೆಗಳ ಆಧರಿಸಿ ಪರಿಶೀಲಿಸಿದಾಗ ಸಾಕಷ್ಟು ಲೋಪದೋಷಗಳು ಕಂಡು ಬಂದಿವೆ. ಇದರಿಂದ ಮತ್ತೂಮ್ಮೆ ನೀಲನಕ್ಷೆ ಸಿದ್ಧಪಡಿಸಿದಾಗ ಹೆಚ್ಚುವರಿ 47 ಲಕ್ಷ ರೂ. ಅನುದಾನದ ಅಗತ್ಯ ಎದುರಾಗಿದೆ. ಆಗ ಕೆಕೆಆರ್‌ಡಿಬಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಿದಾಗ ಅನುಮೋದನೆ ಸಿಕ್ಕಿಲ್ಲ. ಇದರಿಂದ ಕಾಮಗಾರಿ ವಿಳಂಬವಾಗುತ್ತಿದೆ. 2020-21ನೇ ಸಾಲಿನಲ್ಲಿ ಅನುಮೋದನೆ ಸಿಕ್ಕಿದೆ. ಇನ್ನೂ ಮುಂಚೆ ಕೇವಲ ಎರಡೇ ಕೋರ್ಟ್ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಈಗ ಆರು ಕೋರ್ಟ್‌ಗಳನ್ನು ನಿರ್ಮಿಸಲಾಗುತ್ತಿದೆ.
ಹಳೇ ಕಚೇರಿ ಮರು ನಿರ್ಮಾಣ: ಇನ್ನೂ ಹಿಂದೆ ಬ್ಯಾಡ್ಮಿಂಟನ್ ಕೋರ್ಟ್ ಹೊಸದಾಗಿ ನಿರ್ಮಾಣವಾಗುತ್ತಿದ್ದರೆ ಮುಂದೆ ಯುವಜನ ಕ್ರೀಡಾ ಇಲಾಖೆ ಕಚೇರಿ ಸಂಪೂರ್ಣ ಹಳೆಯದಾಗಿತ್ತು. ಜಿಲ್ಲಾ ಬ್ಯಾಡ್ಮಿಂಟನ್ ಅಸೊಸಿಯೇಶನ್ ಸದಸ್ಯರು ಕಚೇರಿ ಹೊಸದಾಗಿ ನಿರ್ಮಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿದ್ದರು. ಆಗ ಆರ್‌ಸಿಯಾಗಿದ್ದ ಸುಬೋಧ್ ಯಾದವ್ 54 ಲಕ್ಷ ರೂ. ಕ್ರಿಯಾ ಯೋಜನೆಗೆ 2020-21ನೇ ಸಾಲಿನಲ್ಲಿ ಅನುಮತಿ ನೀಡಿದರು. ಈಗ ಆ ಕಾಮಗಾರಿ ಕೂಡ ಕೈಗೆತ್ತಿಕೊಳ್ಳಲಾಯಿತು. ಹೀಗೆ ಒಂದಕ್ಕೊಂದು ಕಾಮಗಾರಿ ಸೇರಿ ಬ್ಯಾಡ್ಮಿಂಟನ್ ಕೋರ್ಟ್ ಕಾಮಗಾರಿ ಮಾತ್ರ ನಡೆಯುತ್ತಲೇ ಇದೆ.
ಕ್ರೀಡಾಸಕ್ತರಿಗೆ ಬೇಸರ
ನಗರದಲ್ಲಿ ಬ್ಯಾಡ್ಮಿಂಟನ್ ಕ್ರೀಡಾಸಕ್ತರಿಗೆ ಇದೇ ಕೋರ್ಟ್ ಆಸರೆ ಎನ್ನುವಂತಾಗಿತ್ತು. ಸಾಕಷ್ಟು ಜನ ಇಲ್ಲಿಯೇ ಬಂದು ಅಭ್ಯಾಸ ಮಾಡುತ್ತಿದ್ದರು. ಅಲ್ಲದೇ, ದೊಡ್ಡಮಟ್ಟದ ಕ್ರೀಡಾಕೂಟಗಳು ಕೂಡ ಆಯೋಜನೆ ಮಾಡಲಾಗುತ್ತಿತ್ತು. ಆದರೆ, ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದಂತೆ ಕ್ರೀಡೆಗೆ ತಡೆ ಬಿದ್ದಿದೆ. ಬ್ಯಾಡ್ಮಿಂಟನ್ ಬಯಲಲ್ಲಿ ಆಡುವ ಆಟವಲ್ಲ. ಹೀಗಾಗಿ ಕ್ರೀಡಾಂಗಣ ಕೆಲಸ ಬೇಗ ಮುಗಿಸಿದರೆ ನಮಗೂ ಅನುಕೂಲವಾಗಲಿದೆ ಎಂಬುದು ಬ್ಯಾಡ್ಮಿಂಟನ್ ಕ್ರೀಡಾಸಕ್ತರ ಒತ್ತಾಸೆ.
ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಬಹುತೇಕ ಮುಗಿದಿದ್ದು, ಏಪ್ರಿಲ್-ಮೇ ಒಳಗಾಗಿ ಲೋಕಾರ್ಪಣೆ ಮಾಡುವ ಯೋಚನೆಯಿದೆ. ಈಗ ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿವೆ. ಕೋವಿಡ್-19 ಕಾರಣಕ್ಕೂ ಕೆಲಸ ವಿಳಂಬವಾಯಿತು. ಅಲ್ಲದೇ, ಅನುದಾನ ಏಕಕಾಲಕ್ಕೆ ಬಿಡುಗಡೆಯಾಗದೆ ಹಂತ-ಹಂತವಾಗಿ ಬಿಡುಗಡೆಯಾಗುತ್ತಿರುವುದು ಸಮಸ್ಯೆಯಾಯಿತು. ಶೀಘ್ರದಲ್ಲೇ ಕೆಲಸ ಮುಗಿಸಲು ಕ್ರಮ ವಹಿಸಲಾಗುವುದು.
ಚನ್ನಬಸಪ್ಪ ಮಕಾಲೆ, ಇಇ, ಪಿಡಬ್ಲ್ಯುಡಿ
*ಸಿದ್ಧಯ್ಯಸ್ವಾಮಿ ಕುಕುನೂರು