ಬೀಳಗಿ: ನಗರದ ಕೆರೆ ತುಂಬುವ ಕೊಳವೆ ಮಾರ್ಗದಲ್ಲಿ ಕೆಲವಡೆ ಸೋರಿಕೆ ಕಂಡು ಬಂದಿದೆ. ಈಗಾಗಲೆ ಕೊಳವೆ ಮಾರ್ಗ ಸೋರಿಕೆಯ ರಿಪೇರಿ ಕಾಮಗಾರಿ ಭರದಿಂದ ಸಾಗಿದ್ದು, ಒಂದು ವಾರದಲ್ಲಿ ಬೀಳಗಿ ನಗರದ ಕೆರೆ ತುಂಬುವ ಕೆಲಸ ಆರಂಭವಾಗಲಿದೆ ಎಂದು ಸಣ್ಣ ನೀರಾವರಿ ಇಲಾಖೆ ಎಇಇ ಎಚ್.ಡಿ. ಆಲೂರ ಭರವಸೆ ನಿಡಿದರು.
ಶಾಸ್ವತ ನೀರಾವರಿ ಯೋಜನೆಗೆ ಹಾಗೂ ತಾಲೂಕಿನ ವಿವಿಧ ಕೆರೆ ತುಂಬಲು ಆಗ್ರಹಿಸಿ ಸ್ಥಳೀಯ ರೈತರು ಇತ್ತೀಚೆಗೆ ಪ್ರತಿಭಟಿಸುವ ಮೂಲಕ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಕರೆಯಲಾಗಿದ್ದ ನೀರಾವರಿಗೆ ಸಂಬಂಧಿಸಿದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲೂಕಿನ ಸೊನ್ನ ಗ್ರಾಮದ ಬಳಿ ಕೃಷ್ಣಾ ನದಿಯಿಂದ ಕೆರೆಗೆ ನೀರು ತುಂಬುವ ಯೋಜನೆ ಇದಾಗಿದೆ. 2011-12ನೇ ಸಾಲಿನಲ್ಲಿ ಯೋಜನೆ ಆರಂಭವಾಗಿದ್ದು, ಅಂದಾಜು 1.80 ಕೋಟಿ ರೂ. ವೆಚ್ಚ ತಗುಲಿದೆ. ಜಾಕವೆಲ್, ಪಂಪ್, ಮೋಟಾರ್ ಹಾಗೂ ವಿದ್ಯುತ್ ಸರಬರಾಜು ಸೇರಿದಂತೆ ನೀರು ಸರಬರಾಜಿಗೆ ಬೇಕಾದ ಎಲ್ಲ ಅಗತ್ಯ ಕೆಲಸಗಳು ಈಗಾಗಲೇ ಪೂರ್ಣಗೊಂಡಿವೆ. ಒಂದು ವಾರದೊಳಗೆ ಕೆರೆಯ ಅಂಗಳಕ್ಕೆ ನೀರು ಬಿಡಲಾಗುವುದು. 400 ಎಂಎಂ ವ್ಯಾಸದ ಕೊಳವೆ ಮಾರ್ಗ ಇದ್ದು, ಪ್ರತಿ ಸೆಕೆಂಡ್‌ಗೆ 4 ಕ್ಯೂಸೆಕ್ ನೀರು ಹರಿದು ಬರಲಿದೆ. ಒಟ್ಟು 60 ದಿನದಲ್ಲಿ ಕೆರೆ ಪೂರ್ತಿಯಾಗಿ ತುಂಬಲಿದೆ ಎಂದರು.
ಕೆಬಿಜೆಎನ್‌ಎಲ್ ಎಇ ನವೀನ ಮಾತನಾಡಿ, ಹೆರಕಲ್ ಉತ್ತರ ಕಾಲುವೆ ವ್ಯಾಪ್ತಿಗೆ 3242 ಹೆಕ್ಟೇರ್ ಭೂಮಿಯಿದೆ. ಇದರಲ್ಲಿ ಜಿಎಲ್ಬಿಸಿ ಕಾಲುವೆ ವ್ಯಾಪ್ತಿಗೆ 1710 ಹೆಕ್ಟೇರ್ ಜಮೀನು ಒಳಪಡಲಿದೆ. ಜಾಕ್‌ವೆಲ್, ಪೈಪ್‌ಲೈನ್, ವಿತರಣಾ ತೊಟ್ಟಿ ಕಾಮಗಾರಿ ಪೂರ್ತಿಯಾಗಿಲ್ಲ. ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಕಾಲುವೆ ನಿರ್ಮಾಣಕ್ಕೆ ರೈತರ ಸಹಕಾರ ಬೇಕಿದೆ. ಹೆರಕಲ್ ಉತ್ತರ ಕಾಲುವೆಯಿಂದ ತಾಲೂಕಿನ ಜಾನಮಟ್ಟಿ ಕೆರೆ ತುಂಬಲು ಸಾಧ್ಯವಿದೆ. ನೀರು ದುರ್ಬಳಕೆಯಾಗದಂತೆ ಈ ಕುರಿತು ರೈತರ ಸಭೆ ಕರೆದು ಸೂಕ್ತ ತಿಳಿವಳಿಕೆ ನೀಡುವ ಕೆಲಸ ನಡೆಯಬೇಕಿದೆ. ಕೆಬಿಜೆಎನ್‌ಎಲ್ ನೀರಾವರಿ ಸಲಹಾ ಸಮಿತಿ ಜು.27ರಿಂದ ಕಾಲುವೆಗೆ ನೀರು ಬಿಡಲು ಸೂಚಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಉದಯ ಕುಂಬಾರ ಮಾತನಾಡಿ, ತಾಲೂಕಿನ ಸುನಗ, ಜಾನಮಟ್ಟಿ ಕೆರೆ ತುಂಬುವ ಕುರಿತು ಜು.24ರಂದು ಬೆಳಗ್ಗೆ 10ಕ್ಕೆ ತಾಲೂಕಿನ ಸುನಗ ಗ್ರಾಮದ ದೈತಪ್ಪನ ಗುಡಿಯಲ್ಲಿ ರೈತರ ಸಭೆ ಕರೆಯಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಬೇಕು ಎಂದು ಮನವಿ ಮಾಡಿದರು.
ಮುಖಂಡ ಪ್ರಕಾಶ ಅಂತರಗೊಂಡ ಹಾಗೂ ವಿ.ಜಿ. ರೇವಡಿಗಾರ ಮಾತನಾಡಿ, ರೈತರ ಬೇಡಿಕೆಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿರುವ ಹಿನ್ನೆಲೆಯಲ್ಲಿ 23ರಂದು ಪಟ್ಟಣದಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆ ಹಿಂಪಡೆಯಲಾಗಿದೆ ಎಂದರು. ಸಣ್ಣ ನೀರಾವರಿ ಇಲಾಖೆಯ ಎಇ ಎಸ್.ಎಂ. ಬಾಟಿ, ಕಸಾಪ ಅಧ್ಯಕ್ಷ ಕಿರಣ ಬಾಳಾಗೋಳ, ಶಿವಾನಂದ ಹಿರೇಮಠ, ರಮೇಶ ಬಗಲಿ ಇತರರಿದ್ದರು.